ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ

ಚಿಕ್ಕನಾಯಕನಹಳ್ಳಿ, ಆ. ೪- ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಉತ್ತಮ ಮಾನವಿಯ ಮೌಲ್ಯಗಳನ್ನು ರೂಢಿಸಿಕೊಂಡು, ಗುರು ಹಿರಿಯರನ್ನು ಗೌರವಿಸುತ್ತಾ ನಾಗರಿಕ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ದಂಡಿನ ದಿಬ್ಬ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್.ಕೆ.ರಂಗನಾಥ್ ವಿದ್ಯಾರ್ಥಿಗಳಿಗೆ ಕರೆನೀಡಿದರು.
ತಾಲ್ಲೂಕಿನ ಬೋರನಕಣಿವೆ ಕಾಲೇಜಿನಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ, ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಪುಟ್ಟರಾಮಯ್ಯ ವಯೋ ನಿವೃತ್ತಿ ಹೊಂದುತ್ತಿದ್ದು, ಅವರು ಕಾಲೇಜಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ನೂತನ ಕಾಲೇಜು ಕಟ್ಟಡ, ಕಾಲೇಜಿನ ಮುಂದೆ ತಂತಿ ಬೇಲಿ, ವಿಶಾಲವಾದ ಪಾರ್ಕ್ ನಿರ್ಮಾಣ ಮತ್ತು ಕಾಲೇಜಿನ ಉತ್ತಮ ಫಲಿತಾಂಶಕ್ಕೆ ಹೆಚ್ಚು ಶ್ರಮ ವಹಿಸಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.
ಬೋರನಕಣಿವೆ ಕಾಲೇಜಿನ ಪ್ರಾಚಾರ್ಯ ಪುಟ್ಟರಾಮಯ್ಯ ಮಾತನಾಡಿ, ೩೧ ವರ್ಷಗಳ ದೀರ್ಘಕಾಲ ನನ್ನ ಆತ್ಮಸಾಕ್ಷಿ ಒಪ್ಪುವಂತೆ ಸಂಸ್ಥೆಯ ಅಭಿವೃದ್ಧಿಗೆ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ ಎಂದರು. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಟಿ.ಜಯಣ್ಣ, ರಾಜಣ್ಣ, ವದ್ದಿಗಯ್ಯ, ತಿಮ್ಮರಾಯಪ್ಪ, ಮಂಜುಳಾ, ಸಣ್ಣರಂಗಯ್ಯ, ಎನ್. ಕೃಷ್ಣಪ್ಪ, ಕೆಂಗಣ್ಣ, ಉಮಾಶಂಕರ್, ಎಚ್.ಕೆ. ರಾಮಯ್ಯ, ದೊಡ್ಡಯ್ಯ, ಶ್ರೀನಿವಾಸ್, ಶ್ರೀನಿವಾಸ ಶೆಟ್ಟಿ, ಶ್ರೀನಿವಾಸಮೂರ್ತಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹುಳಿಯಾರು-ಕೆಂಕೆರೆ ಕಾಲೇಜಿನ ಪ್ರಾಚಾರ್ಯ ಕೃಷ್ಣಮೂರ್ತಿ, ದಾನಿಗಳಾದ ರಾಮದಾಸಪ್ಪ, ಗ್ರಾ.ಪಂ. ಸದಸ್ಯ ಗಿರೀಶ್, ಮುಖ್ಯ ಶಿಕ್ಷಕ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.