ಸಮಾಜಕ್ಕೆ ಸಾವಿತ್ರಿಬಾಯಿ ಪುಲೆ ಅವರ ಕೊಡುಗೆಗಳು ಅಪಾರ

ವಿಜಯಪುರ: ಜ.10:ಮಹಿಳಾ ಶಿಕ್ಷಣ ಮತ್ತು ಸಮಾಜಕ್ಕೆ ಸಾವಿತ್ರಿಬಾಯಿ ಪುಲೆ ಅವರ ಕೊಡುಗೆಗಳು ಅಪಾರವಾಗಿವೆ ಎಂದು ಧಾರವಾಡದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಪ್ರಗತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಸಿ ಬಕಾಯಿ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಮಾತಾ ಸಾವಿತ್ರಿಬಾಯಿ ಫುಲೆ ಅವರ 192ನೆಯ ಜನ್ಮದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವತಂತ್ರ ಪೂರ್ವ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯ ಬದಲಾವಣೆ ಮಾಡಲು ಬ್ರಿಟಿಷರೊಂದಿಗೆ ಸಾವಿತ್ರಿಬಾಯಿ ಪುಲೆ ಹಾಗೂ ಜ್ಯೋತಿಬಾಪುಲೆ ಅವರು ಹೋರಾಡಿದ ದಿನಗಳನ್ನು ಸ್ಮರಿಸಿದರು.
ಜ್ಯೋತಿಬಾಪುಲೆ ಅವರು ಮನೆಯೇ ಮೊದಲ ಪಾಠಶಾಲೆ ಎಂಬ ರೀತಿಯಲ್ಲಿ ಮಾತಾ ಸಾವಿತ್ರಿಬಾಯಿ ಫುಲೆ ಅವರನ್ನು ಶಿಕ್ಷಕಿಯನ್ನಾಗಿ ಮಾಡಬೇಕೆಂಬ ನಿಟ್ಟಿನಲ್ಲಿ ಪಡಬಾರದ ಕಷ್ಟಗಳನ್ನು ಅನುಭವಿಸಿದರು ಎಂದು ವಿವರಿಸಿದರು.
ದಲಿತರ ಶಿಕ್ಷಣವನ್ನು ಸಹಿಸದ ಜನರು ಅಸಭ್ಯವಾಗಿ ವರ್ತಿಸುತ್ತಿದ್ದ ಸಂದರ್ಭದಲ್ಲಿಯೂ ಎದೆಗುಂದದೆ ಶಾಲೆಯನ್ನು ಕಟ್ಟಿ ಶಿಕ್ಷಣದ ಪರಿಸರ ಹುಟ್ಟು ಹಾಕಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ.ಬಿಎಸ್.ನಾವಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಸಾವಿತ್ರಿಬಾಯಿ ಪುಲೆಯವರಿಗೆ ಸೂಕ್ತವಾದದ್ದಾಗಿದೆ ಎಂದರು.
ಇಂದಿನ ಶಿಕ್ಷಣ ವ್ಯವಸ್ಥೆಗೆ ಸಾವಿತ್ರಿಬಾಯಿ ಫುಲೆ ಅವರು ದಾರಿದೀಪವಾಗಿದ್ದಾರೆ ಎಂದು ಹೇಳಿದ ಅವರು, ಜ್ಯೋತಿಬಾಪುಲೆಯವರ ನಾಯಕತ್ವ ಗುಣವನ್ನು ಸ್ಮರಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಪೆÇ್ರ.ಶಾಂತದೇವಿ.ಟಿ, ಡಾ.ಸುರೇಶ್ ಕೆ.ಪಿ, ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.