ಸಮಾಜಕ್ಕೆ ದಾಸಶ್ರೇಷ್ಟರ ಕೊಡುಗೆ ಅಪಾರ

ವಿಜಯಪುರ, ನ ೯- ಸಮಾನತೆ, ಅನ್ಯಾಯ, ಮೌಢ್ಯಗಳನ್ನು ಹೋಗಲಾಡಿಸಲು ನೈತಿಕ ಕ್ರಾಂತಿಯ ನೆಲೆಗಟ್ಟಿನಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಸೃಷ್ಟಿಯಾದ ಕನ್ನಡ ಸಾಹಿತ್ಯ ಪ್ರಾಕಾರಗಳಲ್ಲಿ ವಚನ ಮತ್ತು ದಾಸಸಾಹಿತ್ಯಕ್ಕೆ ಅಗ್ರಸ್ಥಾನವಿದ್ದು, ವಚನಕಾರರು ಮತ್ತು ದಾಸಶ್ರೇಷ್ಟರ ಕೊಡುಗೆ ಅಪಾರವಾದುದು ಎಂದು ಪ್ರಗತಿ ಪ್ರೌಢಶಾಲೆಯ ಮುಖ್ಯಶಿಕ್ಷಕ ವಿ.ಬಸವರಾಜು ತಿಳಿಸಿದರು.
ಪಟ್ಟಣದ ರೋಟರಿ ಶಾಲಾ ಸಭಾಂಗಣದಲ್ಲಿ ರೋಟರಿ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ನಾಡು-ನುಡಿ, ಏಕೀಕರಣ ಹೋರಾಟ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾಷೆಯನ್ನು ಉಳಿಸಿ, ಬೆಳೆಸುವ ಬಗ್ಗೆ ಮಾತನಾಡುವ ನಾವು ನಿತ್ಯಬಳಕೆಯಲ್ಲಿ ಕನ್ನಡವನ್ನೇ ಬಳಸಿದರೆ ಸಾಕಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಕನ್ನಡವನ್ನೇ ಬಳಸಬೇಕು. ಯಾಂತ್ರಿಕ ಜೀವನಕ್ಕೆ ಮೊರೆಹೋಗಿರುವ ನಮ್ಮಲ್ಲಿ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಆಸಕ್ತಿಯೂ ಕ್ಷೀಣಿಸುತ್ತಿದೆ. ಸ್ವಾರ್ಥಜೀವನ ತ್ಯಜಿಸಿ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನದಲ್ಲಿ ತೊಡಗಬೇಕು. ಮಕ್ಕಳದಿಸೆಯಿಂದಲೇ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆ ಒಲವು ಮೂಡಿಸುವುದನ್ನು ಬಿಟ್ಟು ದೇಸೀ ಸಂಸ್ಕೃತಿ, ಆಚರಣೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ರೋಟರಿ ಅಧ್ಯಕ್ಷ ಚ.ವಿಜಯಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆಯಲ್ಲಿ ಸಾಹಿತ್ಯ ರಚನೆ, ಇತರೆ ಭಾಷಾ ಪದಗಳ ಬಳಕೆ ಮತ್ತು ಪದಕೋಶ ವಿಸ್ತರಣೆಯಂತಹ ಪ್ರಯೋಗಗಳು ನಿರಂತರವಾಗಿ ನಡೆಯಬೇಕು. ಎಲ್ಲಾ ಭಾಷೆಗಳನ್ನು ಕಲಿತು ಬಳಸಿದರೂ, ಕನ್ನಡವನ್ನು ಆದ್ಯತೆಯ ಮೇಲೆ ಬಳಕೆ ಮಾಡಬೇಕು ಎಂದರು.
ರೋಟರಿ ಕಾರ್ಯದರ್ಶಿ ಬಿ.ಕೆ.ರಾಜು, ಮಾಜಿ ಅಧ್ಯಕ್ಷ ಸಿ.ಸುರೇಶ್, ಬಿ.ಸಿ.ಸಿದ್ಧರಾಜು, ಬಿ.ನರೇಂದ್ರಕುಮಾರ್, ಎಸ್.ಬಸವರಾಜು, ಎಸ್.ಶೈಲೇಂದ್ರಕುಮಾರ್ ಮಾತನಾಡಿದರು.
ರೋಟರಿ ಖಜಾಂಚಿ ಎನ್.ರುದ್ರಮೂರ್ತಿ. ನಿರ್ದೇಶಕ ಮಂಡಳಿ ಸಲಹೆಗಾರ ಪಿ.ಚಂದ್ರಪ್ಪ, ನಿರ್ದೇಶಕಿ ಎ.ಎಂ.ಮಂಜುಳಾ, ವನರಾಜಲಕ್ಷ್ಮಿ, ಎಚ್.ಎಸ್.ರುದ್ರೇಶಮೂರ್ತಿ, ಎನ್.ಬಸವರಾಜು, ಶಿಕ್ಷಕಿ ಗೀತಾ, ನಗರ್ತ ಯುವಕಸಂಘದ ಮಾಜಿ ಅಧ್ಯಕ್ಷ ಎನ್.ವಿಶ್ವನಾಥ್, ನಿರ್ದೇಶಕ ಸುಮನ್, ಪ್ರಶಾಂತ ಬಸವಣ್ಣ ದೇವಾಲಯ ಸಮಿತಿಯ ಖಜಾಂಚಿ ಎನ್.ವಿಶ್ವನಾಥ್, ಮತ್ತಿತರರು ಪಾಲ್ಗೊಂಡಿದ್ದರು.
ಇತ್ತೀಚೆಗೆ ನಿಧನರಾದ ರೋಟರಿ ಸದಸ್ಯ ವಿ.ಪಿ.ಶಿವರುದ್ರಮೂರ್ತಿ ಅವರಿಗೆ ಸಂತಾಪ ಸೂಚಿಸಲಾಯಿತು.
ರೋಟರಿಗೆ ಪ್ರಶಸ್ತಿ: ಅಂತರಾಷ್ಟ್ರೀಯ ರೋಟರಿಯು ಬೆಂಗಳೂರಿನಲ್ಲಿ ನಡೆಸಿದ ಜಿಲ್ಲಾ ಸಮ್ಮೇಳನದಲ್ಲಿ ವಿಜಯಪುರ ರೋಟರಿಗೆ ೨೦೧೯-೨೦ ನೇ ಸಾಲಿನಲ್ಲಿ ಕೈಗೊಂಡ ಸೇವಾಕಾರ್ಯಗಳನ್ನು ಗುರುತಿಸಿ ನಾಲ್ಕು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.