ಸಮಾಜಕ್ಕೆ ದಾರ್ಶನಿಕರ ಕೊಡುಗೆ ಅಪಾರ

ಮಧುಗಿರಿ, ನ. ೨- ನಮ್ಮ ದೇಶದಲ್ಲಿದ್ದಂತಹ ದಾರ್ಶನಿಕರ ದಂಡು ಬೇರಾವ ದೇಶದಲ್ಲೂ ಇಲ್ಲ. ಅವರುಗಳು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದುದು ಎಂದು ಶಾಸಕ ಎಂ. ವಿ .ವೀರಭದ್ರಯ್ಯ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ’ಮಹರ್ಷಿ ವಾಲ್ಮೀಕಿ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಾರ್ಶನಿಕರ ಕೊಡುಗೆ ಸಂಸ್ಕಾರವನ್ನು ನಿರಂತರವಾಗಿ ಕಲಿಸಿದೆ. ಜೀವನದಲ್ಲಿ ಅವರ ನಡವಳಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕೊರೊನಾ ಹಿನ್ನೆಲೆಯಲ್ಲಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಡಾ. ಜಿ. ವಿಶ್ವನಾಥ್ ಮಾತನಾಡಿ, ದಾರ್ಶನಿಕರ ಹೆಜ್ಜೆ ಗುರುತುಗಳನ್ನು ಅನುಸರಿಸಿದರೆ ಜೀವನದಲ್ಲಿ ಕಷ್ಟಗಳು ಕಣ್ಮರೆಯಾಗುತ್ತವೆ. ಅಂಥವರ ಜೀವನ ಚರಿತ್ರೆಗಳನ್ನು ಸಂಪನ್ಮೂಲ ವ್ಯಕ್ತಿಗಳ ಮೂಲಕ ತಿಳಿದುಕೊಂಡರೆ ಪ್ರಸ್ತುತ ಒತ್ತಡದ ಬದುಕಿನ ನಡುವೆ ಮಾನಸಿಕ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ. ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು ಎಂದರು.
ಕಾರ್ಮಿಕ ಇಲಾಖೆಯ ಆಯುಕ್ತ ನರಸಿಂಹಮೂರ್ತಿ ಮಾತನಾಡಿ, ಪ್ರಕೃತಿಯನ್ನು ನಾಶ ಮಾಡುತ್ತಿರುವುದರಿಂದ ಜಲಪ್ರಳಯ, ಕೊರೊನಾದಂತಹ ಮಾರಣಾಂತಿಕ ರೋಗಗಳು ಬರುತ್ತಿದ್ದರೂ ಜನರಿಗೆ ಇನ್ನೂ ಬುದ್ದಿ ಬಂದಂತಿಲ್ಲ ಎಂದರು.
ಹಣ-ಹೆಂಡತಿ-ಆಸ್ತಿ-ಮಕ್ಕಳು ನಮ್ಮ ಹಿಂದೆ ಬರುವುದಿಲ್ಲ. ಸಂಸ್ಕಾರದ ಜೀವನ ಮಾತ್ರ ಉಳಿಯುತ್ತದೆ ಎಂದ ಅವರು, ರಾಮಾಯಣ ಮತ್ತು ಮಹಾಭಾರತದ ಬಗ್ಗೆ ಮಾತನಾಡುವ ಬದಲು ಓದಿ. ಗ್ರಂಥಗಳನ್ನು ಓದಿದರೆ ಜಗತ್ತನ್ನೇ ಎದುರಿಸುವ ಶಕ್ತಿ ಬರುತ್ತದೆ. ಸರ್ಕಾರಿ ನೌಕರರು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಚಿಂತನೆ ಮಾಡಿ ಮಾನವೀಯ ಮೌಲ್ಯವನ್ನು ಅಳವಡಿಸಿಕೊಳ್ಳಬೇಕಾಗಿದೆ. ಮಹರ್ಷಿ ವಾಲ್ಮೀಕಿ ಬಗ್ಗೆ ಅಧ್ಯಯನ ಆಗಬೇಕು ಎಂದರು.
ಮಧುಗಿರಿ ಪೋಲೀಸ್ ಇಲಾಖೆಯ ವೃತ್ತ ನಿರೀಕ್ಷಕ ಸರ್ದಾರ್ ಮಾತನಾಡಿ, ದೈನಂದಿನ ಚಟುವಟಿಕೆಗಳ ನಡುವೆ ಧರ್ಮ ಗ್ರಂಥಗಳನ್ನು ಓದಬೇಕು. ಮಕ್ಕಳಿಗೆ ಮೊಬೈಲ್ ಬದಲು ಪುಸ್ತಕಗಳನ್ನು ನೀಡಿ. ಮನುಜ ತಪ್ಪು ಮಾಡೋದು ಸಹಜ ಗುಣ. ತಿದ್ದಿ ನಡೆಯೋದು ಜೀವನ. ಸುಪ್ರಭಾತದಿಂದ ಬೆಳಗಾಗುತ್ತಿದ್ದ ದಿನಗಳು ಮರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕು ನಾಯಕ ಸಂಘದ ಗೌರವಾಧ್ಯಕ್ಷ ಜಿ. ಸಿದ್ದಗಂಗಪ್ಪ ಮಾತನಾಡಿ, ನಾಯಕ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶೇ.೭.೫ರ ಮಿಸಲಾತಿ ನಿಗದಿ ಮಾಡುವ ಭರವಸೆ ನೀಡಿದ್ದಾರೆ. ಮಹಾಭಾರತ ಮತ್ತು ರಾಮಾಯಣ ಗ್ರಂಥಗಳನ್ನು ವಿದೇಶಿಗರು ಓದುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ ಮನೆಯಲ್ಲೂ ಗ್ರಂಥಗಳು ಇರಬೇಕು. ಪ್ರತಿಯೊಬ್ಬರು ಓದುವಂತಾಗಬೇಕು ಎಂದರು.
ಮಧುಗಿರಿ ಟೌನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ, ಪುರಸಭಾ ಸದಸ್ಯ ಎಂ. ಆರ್. ಜಗನ್ನಾಥ್, ಜಿ.ಆರ್. ಧನಪಾಲ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ರೆ.ಮಾ. ನಾಗಭೂಷಣ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸರ್ಕಾರಿ ನೌಕರರ ಸಂಘದ ಖಜಾಂಚಿ ಚಿಕ್ಕರಂಗಪ್ಪ ಸ್ವಾಗತಿಸಿ, ವಂದಿಸಿದರು. ಚಂದ್ರಶೇಖರ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.