ಸಮಾಜಕ್ಕೆ ಡಾ.ಶಿವಕುಮಾರ ಶ್ರೀಗಳ ಕೊಡುಗೆ ಅಮೋಘ

ಕಲಬುರಗಿ:ಎ.1: ಸಮಾಜದಲ್ಲಿರುವ ಲಕ್ಷಾಂತರ ಬಡ, ದೀನ-ದಲಿತ, ಶೋಷಿತ, ಅನಾಥ ಮಕ್ಕಳಿಗೆ ಅನ್ನ, ಜ್ಞಾನ ದಾಸೋಹ, ಸಂಸ್ಕಾರ, ಮಾನವೀಯೆತೆಯನ್ನು ನೀಡಿ, ಅವರ ಬದುಕನ್ನು ಕಟ್ಟಿಕೊಟ್ಟ ಮಹಾನ ಶಿಲ್ಪಿ ಸಿದ್ಧಗಂಗಾ ಶ್ರೀಗಳಾದ ಡಾ.ಶಿವಕುಮಾರ ಮಹಾಸ್ವಾಮೀಜಿಗಳಾಗಿದ್ದಾರೆ. ಪರಹಿತ, ಸಮಾಜ ಸೇವೆಯಲ್ಲಿಯೇ ಶಿವನನ್ನು ಕಂಡು ದೈವತ್ವಕ್ಕೇರಿದ ಮಹಾನ ಚೇತನ ಅವರಾಗಿದ್ದಾರೆಂದು ಮಠದ ಹಳೆಯ ವಿದ್ಯಾರ್ಥಿಗಳಾದ ವಿಶ್ವನಾಥ ಶೇಗಜಿ ದಂಗಾಪುರ, ಶಿವಪ್ಪಗೌಡ ಎಸ್.ಪಾಟೀಲ ಬೊಮ್ಮನಳ್ಳಿ ಅಭಿಮತಪಟ್ಟರು.

    ನಗರದ ಆಳಂದ ರಸ್ತೆಯಲ್ಲಿರುವ 'ಸಿದ್ದಗಂಗಾ ಕಂಪ್ಯೂಟರ ತರಬೇತಿ ಕೇಂದ್ರ'ದಲ್ಲಿ 'ಸಿದ್ದಗಂಗಾ ಸಂಸ್ಥೆ', 'ಬಸವೇಶ್ವರ ಸಮಾಜ ಸೇವಾ ಬಳಗ' ಮತ್ತು 'ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ತಂಡ' ಇವುಗಳ ವತಿಯಿಂದ ಗುರುವಾರ ಏರ್ಪಡಿಸಿದ್ದ ಲಿಂ.ಡಾ.ಶಿವಕುಮಾರ ಮಾಹಾಸ್ವಾಮೀಜಿಯವರ 114ನೇ ಜಯಂತ್ಯುತ್ಸವ ಹಾಗೂ ಮಹಾದೇವಿ ವೃದ್ಧಾಶ್ರಮದಲ್ಲಿ ಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

   ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಹನ್ನೆರಡನೆಯ ಶತಮಾನದ ಬಸವಾದಿ ಶರಣರ ತತ್ವವನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ಬದುಕಿ ತೋರಿಸಿದವರು. ದಾಸೋಹ, ಕಾಯಕ ಸಂಸ್ಕøತಿ, ಸಮಾನತೆ, ಸಾಮರಸ್ಯ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಗುಣ ಪೂಜ್ಯರದಾಗಿತ್ತು. ಸಮಾಜಕ್ಕಾಗಿ ನಿರಂತರವಾಗಿ ದಣಿವರಿಯದೆ ಸಾರ್ಥಕ ಸೇವೆಯನ್ನು ಸಲ್ಲಿಸಿ ಲಕ್ಷಾಂತರ ಜನರ ಹೃದಯ ಮಂದಿರದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆಂದರು.

  ಚಿಂತಕ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಪ್ರತಿಯೊಬ್ಬರೂ ಪರಸ್ವರ ಪ್ರೀತಿ,ಶಾಂತಿ, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು. ಪ್ರಪಂಚದಲ್ಲಿ ಧರ್ಮ ಯಾವುದು ಎಂದರೆ ಒಂದೇ ಧರ್ಮ, ಅದು ಮನುಷ್ಯ ಧರ್ಮ. ಮತ್ತೊಬ್ಬರ ಕಷ್ಟಕ್ಕೆ ನೆರವಾಗಬೇಕೆಂಬ ತತ್ವ ಸಾರ್ವಕಾಲಿಕವಾಗಿದೆಯೆಂದರು.

  ಕಾರ್ಯಕ್ರಮದಲ್ಲಿ ಪ್ರಮುಖರಾದ ಸಿದ್ದರಾಮ ಶೇಗಜಿ ದಂಗಾಪುರ, ವಿಶ್ವನಾಥ ಗೋನಾಕಿ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಮರ ಜಿ.ಬಂಗರಗಿ, ಅಣ್ಣಾರಾಯ ಪಾಟೀಲ, ಶ್ರೀಗುರು ವಾಲಿ, ದತ್ತು ಕುರಕೋಟಾ, ಬಸವರಾಜ ದುರ್ಗದ್, ಗುರುಬಸಯ್ಯ ಹಿರೇಮಠ, ಸಂಜೀವ ಪಾಟೀಲ, ಸುಭಾಷ ಮೂಲಗೆ, ಶ್ರೀಕಾಂತ ಇಸ್ರಿ, ರೇವಣಸಿದ್ದಪ್ಪ ಸೇರಿದಂತೆ ಮತ್ತಿತರರಿದ್ದರು.