ಸಮಾಜಕ್ಕೆ ಟೈಲರ್ ಕೊಡುಗೆ ಅನನ್ಯ : ಎಚ್.ಬಿ.ಪಾಟೀಲ

ಕಲಬುರಗಿ: ಮಾ.1:ಬಟ್ಟೆಗಳನ್ನು ಹೊಲಿದು ಎಲ್ಲರಿಗೂ ಉಡುಪುಗಳನ್ನು ಸಿದ್ದಪಡಿಸುವ ಕಾರ್ಯ ಮಾಡುವ ಟೈಲರ್ ಕೆಲಸ ಪ್ರಮುಖವಾಗಿದೆ. ನಿರಂತರವಾಗಿ ಒಂದೆಡೆ ಕುಳಿತು ಮಾಡುವ ಈ ಕೆಲಸ ತುಂಬಾ ಆಯಾಸದಾಯಕವಾಗಿದೆ. ಟೈಲರ್ ವೃತ್ತಿಯಲ್ಲಿ ತೊಡಗಿರುವವರಿಗೆ ಸರ್ಕಾರ ವಿಮಾ ಸೌಲಭ್ಯ, ಅವರ ಮಕ್ಕಳಿಗೆ ಉಚಿತ ಶಿಕ್ಷಣ, ಸೂಕ್ತ ಸೌಲಭ್ಯಗಳನ್ನು ಒದಗಿಸಿಕೊಡುವ ಕಾರ್ಯ ಜರುಗಬೇಕಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ದೆವಿ ನಗರದಲ್ಲಿರುವ ‘ಪ್ರಿನ್ಸ್ ಟೈಲರ್ಸ್’ ಅಂಗಡಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ವಿಶ್ವ ಟೈಲರ್ಸ್ ದಿನಾಚರಣೆ : ಹೊಲಿಗೆ ಯಂತ್ರದ ಜನಕ ಎಲಿಯಾಸ್ ಹೂವೆ ಭಾವಚಿತ್ರಕ್ಕೆ ನಮನ, ಟೈಲರ್ ಅವರಿಗೆ ಗೌರವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮೂರು ದಶಕಗಳಿಂದÀ ಟೈಲರ್ ವೃತ್ತಿಯಲ್ಲಿ ತೊಡಗಿರುವ ಇಕ್ಬಾಲ್ ಆಲೂರ ಅವರು ಮಾತನಾಡಿ, ಟೈಲರ್ಸ್ ಸಂಘಟನೆ ಬಲಿಷ್ಠವಾಗಬೇಕಾಗಿದೆ. ಅದರ ಮೂಲಕ ನಮಗೆ ದೊರೆಯಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಶ್ರಮಿಸಬೇಕಾಗಿದೆ ಎಂದರು.
ನರಸಪ್ಪ ಬಿರಾದಾರ ದೇಗಾಂವ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ನಾಗರಾಜ ತುಮಕುರ, ಅಲ್ಲಾಉದ್ದೀನ್ ಮುಲ್ಲಾ, ಅಂಬರೀಶ್ ಪಾಟೀಲ ಸೇರಿದಂತೆ ಮತ್ತಿತರರಿದ್ದರು.