ಸಮಾಜಕ್ಕೆ ಛಾಯಾಗ್ರಾಹಕರ ಕೊಡುಗೆ ಅನನ್ಯ

ಕಲಬುರಗಿ,ಆ.19: ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮಾನ. ವರ್ಣಿಸಲಾಗದ ದೃಶ್ಯವನ್ನು ನೈಜವಾಗಿ ಸೆರಹಿಡಿಯುವ ಕಲೆ ಕ್ಯಾಮರಾ ಮತ್ತು ಛಾಯಾಗ್ರಾಹಕರು ಹೊಂದಿದ್ದಾರೆ. ಇದರಿಂದ ಆ ಸಂದರ್ಭ ಖುದ್ದಾಗಿ ವೀಕ್ಷಿಸಿದ ಅನುಭವ ಉಂಟಾಗುವಂತೆ ಮಾಡಿ, ಅಲ್ಲಿನ ಸ್ಥಿತಿ-ಗತಿಯ ನೈಜ ಚಿತ್ರಣ ನೀಡುವ ಕೆಲಸ ಮಾಡುವ ಛಾಯಾಗ್ರಾಹಕರ ಕೊಡುಗೆ ತುಂಬಾ ಅನನ್ಯವಾಗಿದೆ ಎಂದು ಖ್ಯಾತ ಛಾಯಾಗ್ರಾಹಕ ಶಿವರಾಜ ವೈ.ತೊನಸಳ್ಳಿ ಹೇಳಿದರು.
ನಗರದ ನೆಹರು ಗಂಜ್ ಪ್ರದೇಶದಲ್ಲಿರುವ ‘ನ್ಯೂ ದೇವಿ ಫೋಟೊ ಸ್ಟುಡಿಯೊ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ವಿಶ್ವ ಛಾಯಾಗ್ರಾಹಕರ ದಿನಾಚರಣೆ’ಯ ಕಾರ್ಯಕ್ರಮವನ್ನು ಫೋಟೊ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಕ್ಯಾಮರಾ ಮಾನವನ ಕಣ್ಣುಗಳಿಂದ್ದಂತೆ. ಕೆಲವು ಸಲ ನಾವೂ ನೋಡಿದ್ದು ನೆನಪಿಗೆ ಬರದಿದ್ದರೂ, ಕ್ಯಾಮಾರಾವು ಶಾಶ್ವತ ದಾಖಲೆಯನ್ನು ಒದಗಿಸುತ್ತದೆ. ಪ್ರಸ್ತುತವಾಗಿ ಮೋಬೈಲ್ ಯುಗದಲ್ಲಿ ಛಾಯಾಗ್ರಾಹಕರು ತೀರ್ವ ಸ್ಪರ್ಧೆಯನ್ನು ಎದುರಿಸಿ ಕಾರ್ಯನಿರ್ವಹಿಸಬೇಕಾಗಿರುವುದು ಒಂದು ಸವಾಲಿನ ಕಾರ್ಯವಾಗಿದೆ. ಛಾಯಾಗ್ರಾಹಕರಿಗೆ ಸರ್ಕಾರದಿಂದ ಸೌಲಭ್ಯಗಳು ದೊರೆಯಬೇಕಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ಬಸವರಾಜ ವೈ.ತೊನಸಳ್ಳಿ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಶಿವಯೋಗಪ್ಪ ಬಿರಾದಾರ, ಬಸವರಾಜ ಎ.ಕುಲಕರ್ಣಿ, ಮಿರಾಜ್ ಸೈಯದ್, ಇಸ್ಮೈಲ್ ಖಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.