ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿ-ಬಳ್ಳಾರಿ

ಬ್ಯಾಡಗಿ, ಜ 2- ಸರ್ಕಾರಿ ಸೇವೆಗೆ ಸೇರಿದ ಮೇಲೆ ನಿವೃತ್ತಿ ಅನಿವಾರ್ಯ. ಆದರೆ ನಮಗೆ ಸಿಕ್ಕ ಅವಧಿಯಲ್ಲಿ ಮಾಡಿರುವ ಕಾರ್ಯ ಸಾರ್ವಜನಿಕ ವಲಯದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಗಳಿಸಬೇಕು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಎಪಿಎಂಸಿ ಕಾರ್ಯಾಲಯದಲ್ಲಿ ಸಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಭು ದೊಡ್ಡಮನಿ ಅವರಿಗೆ ಎಪಿಎಂಸಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರಿ ಸೇವೆಯನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ. ಸರಕಾರದ ನೀತಿ ನಿಯಮಗಳಿಗೆ ಬಧ್ದರಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ ಮಾತನಾಡಿ, ಸರ್ಕಾರಿ ನೌಕರರು ಸಾರ್ವಜನಿಕ ಸೇವೆಗೆ ದೇವರು ಕರುಣಿಸಿದ ವರದಾನವೆಂದು ಭಾವಿಸಿ, ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು. ಈ ಮೂಲಕ ಸಮಾಜದಲ್ಲಿ ಗೌರವ ಸಂಪಾದನೆ ಮಾಡಬೇಕಲ್ಲದೇ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು.
ಸಮಾರಂಭದಲ್ಲಿ ನಿವೃತ್ತ ನೌಕರರಾದ ಪ್ರಭು ದೊಡ್ಡಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ, ನಿರ್ದೇಶಕರಾದ ವಿಜಯ ಮಾಳಗಿ, ಚನಬಸಪ್ಪ ಹುಲ್ಲತ್ತಿ, ಡಿ.ಬಿ. ತೋಟದ, ಶಂಭು ಪಾಟೀಲ, ಕುಮಾರ ಚೂರಿ, ಮಾಲತೇಶ ಹೊಸಳ್ಳಿ, ಹನುಮಂತಪ್ಪ ನಾಯ್ಕರ, ವರ್ತಕರಾದ ಮಾಲತೇಶ ಅರಳಿಮಟ್ಟಿ, ಪರಶುರಾಮ ಮೇಲಗಿರಿ, ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ್ರ, ಸಿಬ್ಬಂದಿ ವರ್ಗದವರೂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.