ಸಮಾಜಕ್ಕಾಗಿ ಸೇವೆ ಸಲ್ಲಿಸಿದವರು ಜನಮಾನಸದಲ್ಲಿ ಶಾಶ್ವತ : ಮಕ್ತಂಪುರ ಶ್ರೀ

ಕಲಬುರಗಿ.ಏ.20: ಯಾವ ವ್ಯಕ್ತಿ ಇಡೀ ಸಮಾಜವೇ ತನ್ನ ಕುಟುಂಬವೆಂದು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾನೆಯೋ, ಆ ವ್ಯಕ್ತಿಯ ಹೆಸರು ಜನಮಾನಸ, ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯಲು ಸಾಧ್ಯವಾಗುತ್ತದೆ. ಬುದ್ಧ-ಬಸವ-ಅಂಬೇಡ್ಕರ್, ವಿವೇಕಾನಂದ ಸೇರಿದಂತೆ ಅನೇಕ ಮಹನೀಯರು ಇಡೀ ತಮ್ಮ ಜೀವನದುದ್ದಕ್ಕೂ ಸಮಾಜಕ್ಕಾಗಿಯೇ ದುಡಿದವರಾಗಿದ್ದು, ಅವರ ಹೆಸರು ಶಾಶ್ವತವಾಗಿದೆ. ಅದಕ್ಕಾಗಿಯೇ ಅವರ ಜಯಂತಿಗಳನ್ನು ಇಂದಿಗೂ ಕೂಡಾ ಎಲ್ಲೆಡೆ ಆಚರಿಸಲಾಗುತ್ತಿದೆ ಎಂದು ಮಕ್ತಂಪುರ ಗುರುಬಸವ ಮಠದ ಪೂಜ್ಯ ಶಿವಾನಂದ ಶ್ರೀಗಳು ಮಾರ್ಮಿಕವಾಗಿ ಹೇಳಿದರು.
ನಗರದ ಹೊರವಲಯದ ಉಪಳಾಂವ ಗ್ರಾಮದಲ್ಲಿರುವ ‘ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ 890ನೇ ಬಸವ ಜಯಂತಿ ಗುರುವಾರ ಏರ್ಪಡಿಸಲಾಗಿದ್ದ ‘ವಿಶೇಷ ಉಪನ್ಯಾಸ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ, ಕನ್ನಡವನ್ನು ಉಳಿಸಿ, ಬೆಳೆಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ‘ಕಾಯಕ, ದಾಸೋಹ, ಸಮಾನತೆ’ ಎಂಬ ತ್ರಿಸೂತ್ರಗಳನ್ನು ಪಾಲನೆಯಿಂದ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಪರಿಕಲ್ಪನೆಯನ್ನು ನೂರಾರು ವರ್ಷಗಳ ಹಿಂದೆಯೇ ನೀಡಿದ್ದಾರೆ. ಅವರು ಆಶಯ, ತತ್ವಗಳನ್ನು ಹೊಂದಿರುವ ವಚನಗಳ ಅಧ್ಯಯನ ಮಾಡುವುದರ ಜೊತೆಗೆ ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಬೇಕು ಎಂದು ವಚನಗಳ ಮೂಲಕ ಶರಣರ ಸಂದೇಶವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಬಳಗದ ಹಿರಿಯ ಸದಸ್ಯ ಶಿವಯೋಗಪ್ಪ ಬಿರಾದಾರ, ಶ್ರೀರಾಮ ಸಂಸ್ಥೆಯ ಸಂಸ್ಥಾಪಕ ಗೌಡೇಶ ಎಚ್.ಬಿರಾದಾರ, ಅಧ್ಯಕ್ಷೆ ಓಂದೇವಿ ಜಿ.ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಪಾಟೀಲ, ಶಿಕ್ಷಕಿಯರಾದ ಶ್ವೇತಾ ಆರ್.ರೆಡ್ಡಿ, ನಾಗಮ್ಮ ಜೆ.ಅಮಕಲಗಿ, ಮೀನಾಕ್ಷಿ ಯು.ಜಮಾದಾರ, ಶಾಂತಾಬಾಯಿ ಎಂ.ಸೇಡಂ ಹಾಗೂ ವಿದ್ಯಾರ್ಥಿಗಳಿದ್ದರು.