ಸಮಸ್ಯೆ ಸುಳಿಯಲ್ಲಿ ವಿದ್ಯಾರ್ಥಿಗಳ ಅಕ್ಷರಭ್ಯಾಸ


ಸಂಜೆವಾಣಿ ಪ್ರತಿನಿಧಿ
ದೇವದುರ್ಗ,ಜು.೦೮-
ತಾಲೂಕಿನ ದೇವರ ಗುಂಡಗುರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಸ್ಯೆ ಸುಳಿಯಲ್ಲಿ ಸಿಲುಕಿ ನರಳುತ್ತಿದೆ. ಮೂಲಸೌಲಭ್ಯವಿಲ್ಲದೆ ವಿದ್ಯಾರ್ಥಿಗಳ ಅಕ್ಷರಭ್ಯಾಸಕ್ಕೆ ಹಿನ್ನಡೆಯಾಗುತ್ತಿದ್ದು ಶಿಕ್ಷಣ ಇಲಾಖೆ ಅಧಿಕಾರಿಗಳು ಕಣ್ತೆರೆದು ನೋಡಬೇಕಿದೆ.
೧ರಿಂದ ೭ನೇ ತರಗತಿವರೆಗೆ ಸುಮಾರು ೯೪ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸೌಲಭ್ಯಗಳ ಕೊರತೆಯಿಂದ ದಿನೇದಿನೆ ವಿದ್ಯಾರ್ಥಿಗಳ ದಾಖಲಾತಿ ಕುಸಿಯುತ್ತಿದ್ದು ಬಡವರು ಮಕ್ಕಳು ಅರ್ಧದಲ್ಲೆ ಶಾಲೆ ಬಿಡುವಂತಾಗಿದೆ. ನಾಲ್ವರು ಕಾಯಂ, ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. ಶಾಲೆಯಲ್ಲಿ ೭ಏಳು ಕೊಠಡಿಗಳಿದ್ದು ಮೂರು ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಗೊಂಡು ಇಂದೋ ನಾಳೆ ಬೀಳುವ ಸ್ಥಿತಿಯಲ್ಲಿವೆ.
೨೦೦೬-೦೭ನೇ ಸಾಲಿನಲ್ಲಿ ಸರ್ವಶಿಕ್ಷಣ ಅಭಿಯಾನದಡಿ ನಿರ್ಮಿಸಿದ ೨ಹಂತಸ್ತುಗಳ ೪ಕೊಠಡಿಗಳು ಆಶ್ರಯವಾಗಿವೆ. ಅದರಲ್ಲಿ ಒಂದು ಕೋಣೆ ಆಫೀಸ್ ಸ್ಟಾಫ್‌ರೂಮ್ ಮಾಡಿದ್ದು ಉಳಿದ ೩ಕೊಠಡಿಯಲ್ಲಿ ೭ತರಗತಿಗಳನ್ನು ಕೂಡಿಸಿ ಬಹುವರ್ಗ ಪಾಠ ಬೋಧನೆ ಮಾಡಲಾಗುತ್ತಿದೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ೩ಕೊಠಡಿಗಳು ಮಳೆಗೆ ಸೋರುತ್ತಿದ್ದು ಡೆಮಾಲಿಷ್‌ಗೆ ಅನುಮೋದನೆ ದೊರೆತರೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ಕೊಠಡಿ ಛಾವಣಿ ಉದುರಿಬೀಳುತ್ತಿದೆ. ಕೆಳಗಡೆ ಮಕ್ಕಳು ಆಟವಾಡುತ್ತಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ.
ಕಾಂಪೌಂಡ್ ಇಲ್ಲದೆ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಶಾಲೆ ಪಕ್ಕದಲ್ಲಿ ಮುಖ್ಯರಸ್ತೆಯಿದ್ದು ವಾಹನಗಳ ಓಡಾಟ ಹೆಚ್ಚಾಗಿದ್ದರಿಂದ ಮಕ್ಕಳು ಮುಕ್ತವಾಗಿ ಆಟವಾಡಲು ಭಯಪಡುತ್ತಾರೆ. ಎರಡು ಶೌಚಗೃಹಗಳಿಗೆ ನೀರಿನ ಸಮಸ್ಯೆಯಿಂದ ಬೀಗ ಜಡಿಯಲಾಗಿದೆ. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರಿಗೆ ಶೌಚಕ್ಕೆ ಸಮಸ್ಯೆಯಾಗುತ್ತಿದೆ. ಕುಡಿವ ನೀರಿನ ಸೌಲಭ್ಯವಿಲ್ಲದೆ ಮಕ್ಕಳು ಬಿಸಿಯೂಟ ಮಾಡಲು ಮನೆಯಿಂದ ನೀರು ತರುವ ಸ್ಥಿತಿಯಿದೆ. ಅಡುಗೆ ಸಿಬ್ಬಂದಿ ಹೊರಗಡೆಯಿಂದ ನೀರುತಂದು ಬಿಸಿಯೂಟ ಮಾಡುತ್ತಿದ್ದು, ಅದೇ ನೀರನ್ನು ಶಿಕ್ಷಕರು ಬಳಸುವಂತಾಗಿದೆ.
ಹಿಂದುಗಡೆ ಜಮೀನಿದ್ದು ಸುತ್ತಲೂ ಮುಳಿನ ಜಾಲಿಬೆಳೆದಿವೆ. ಇದರಿಂದ ಮಳೆಗಾಲದಲ್ಲಿ ಹಾವು, ಚೇಳು ಸೇರಿ ವಿಷಜಂತುಗಳು ತರಗತಿಒಳಗೆ ಬರುತ್ತಿವೆ. ಇತ್ತೀಚೆಗೆ ಹಾವೊಂದು ಕ್ಲಾಸ್‌ರೂಮ್‌ಗೆ ನುಗ್ಗಿದ್ದರಿಂದ ಮಕ್ಕಳು ಭಯಭೀತರಾಗಿದ್ದರು. ಅಂದಿನಿಂದ ಕಿಟಕಿ ಪಕ್ಕ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯುತ್ ಸೌಲಭ್ಯವಿಲ್ಲದೆ ಶಿಕ್ಷಕರ ಬೋಧನೆ ಹಾಗೂ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತಿದೆ.
ಶಾಲಾ ಕಾಂಪೌಂಡ್ ನಿರ್ಮಿಸಲು ಕೆಲವರ್ಷಗಳ ಹಿಂದೆ ಶಿಕ್ಷಣ ಇಲಾಖೆಯಿಂದ ೫ಲಕ್ಷ ರೂ. ಅನುದಾನ ಬಂದಿತ್ತು. ಜಾಗದ ಸಮಸ್ಯೆ ಹಾಗೂ ಗಡಿರೇಖೆ ಗುರುತಿಸದ ಕಾರಣ ಕಾಮಗಾರಿ ಆರಂಭಿಸಿರಲಿಲ್ಲ. ಇದರಿಂದ ಬಂದ ಅನುದಾನ ಇಲಾಖೆಗೆ ವಾಪಸ್ ಹೋಗಿದೆ. ಅಧಿಕಾರಿಗಳು ಶಾಲೆಗೆ ಭೇಟಿನೀಡಿ ಮಕ್ಕಳ ಸಮಸ್ಯೆ ಆಲಿಸುವ ಸೌಜನ್ಯ ತೋರಿಸುತ್ತಿಲ್ಲ. ಮಕ್ಕಳು ಶಿಕ್ಷಕರ ಮುಂದೆ ಸಮಸ್ಯೆ ಹೇಳಿಕೊಳ್ಳುತ್ತಿದ್ದು, ಅವರು ಮೇಲಧಿಕಾರಿಗಳಿಗೆ ಪತ್ರ ಬರೆದರೂ ಸ್ಪಂದನೆ ದೊರೆತಿಲ್ಲ. ತರಗತಿಗೆ ಅನುಗುಣವಾಗಿ ೪ಕೊಠಡಿ ಅವಶ್ಯವಿದ್ದು ತುರ್ತಾಗಿ ನಿರ್ಮಿಸಬೇಕಿದೆ.