ಸಮಸ್ಯೆಗೆ ಸ್ಪಂದಿಸದ ಅಧಿಕಾರಿ, ಸಿಬ್ಬಂದಿಗೆ ಸಚಿವ ಪ್ರಭು ಚವ್ಹಾಣ ತರಾಟೆ

ಬೀದರ, ನ.10: ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ತರಾಟೆಗೆ ತೆಗೆದುಕೊಂಡರು.

ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಮಹಾಡೋಣಗಾಂವ್, ಬೆಳಕುಣಿ(ಚೌ), ನಾಗೂರ(ಬಿ), ಜೋಜನಾ, ನಾಗೋರ.ಎನ್, ನಾಗೋರ.ಎಂ, ಬೋರ್ಗಿ(ಜೆ), ವಡಗಾಂವ್(ಡಿ), ಆಲೂರ(ಕೆ), ಆಲೂರ(ಬಿ), ಬೇಲೂರ(ಎನ್) ಸೇರಿದಂತೆ ಹಲವೆಡೆ ನವೆಂಬರ್ 9ರಂದು ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.

ಇದೇ ವೇಳೆ ಗ್ರಾಮ ಪಂಚಾಯತಿಯ ಸಿಬ್ಬಂದಿ ಜನತೆಗೆ ಸ್ಪಂದಿಸುತ್ತಿಲ್ಲ, ಆಸ್ಪತ್ರೆಯಲ್ಲಿರುವ ವೈದ್ಯರ ಕೊರತೆ, ಶಾಲೆಯಲ್ಲಿ ಶಿಕ್ಷಕರ ಕೊರತೆ, ರಸ್ತೆ, ಕುಡಿಯುವ ನೀರು, ವಿದ್ಯುತ್, ಪಡಿತರ ಸಮಸ್ಯೆ, ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಅವಶ್ಯಕತೆಯ ಕುರಿತು ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು.

ಈ ವೇಳೆ ಸಚಿವರು ಮಾತನಾಡಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮ ಮಟ್ಡದಲ್ಲಿರುವ ತಮ್ಮ ಅಧೀನದ ಸಿಬ್ಬಂದಿಯ ಕಾರ್ಯವೈಖರಿಯನ್ನು ಗಮನಿಸಬೇಕು. ಕಾಲಕಾಲಕ್ಕೆ ಭೇಟಿ ನೀಡಿ ಆಡಳಿತ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಏನಾದರೂ ಸಮಸ್ಯೆಗಳು ಕಾಣಿಸಿದಲ್ಲಿ ತಕ್ಷಣ ಸರಿಪಡಿಸುವ ಕೆಲಸ ಮಾಡಬೇಕು. ವಿನಾಕಾರಣ ಸಾರ್ವಜನಿಕರಿಗೆ ಸತಾಯಿಸುವ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ತಾವು ಭೇಟಿ ನೀಡಿದ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಬೋರ್ಗಿ(ಜೆ) ಶಾಲೆಗೆ ಮೆಚ್ಚುಗೆ: ಗ್ರಾಮ ಸಂಚಾರದ ವೇಳೆ ಸಚಿವರು ಬೋರ್ಗಿ(ಜೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿ ಅಳವಡಿಸಿರುವ ಡಿಜಿಟಲ್ ಕಲಿಕಾ ಕೇಂದ್ರವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲಿನ ಮಕ್ಕಳನ್ನು ಆತ್ಮೀಯತೆಯಿಂದ ಮಾತನಾಡಿ ಡಿಜಿಟಲ್ ಕಲಿಕಾ ಕೇಂದ್ರದ ಬಗ್ಗೆ ಅಭಿಪ್ರಾಯಗಳನ್ನು ಪಡೆದರು.

ಅನಾರೋಗ್ಯಪೀಡಿತ ವ್ಯಕ್ತಿಗೆ ನೆರವು:
ಬೋರ್ಗಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ತೀವ್ರ ಅನಾರೋಗ್ಯದಿಂದ ಸಂಕಷ್ಟ ಎದುರಿಸುತ್ತಿರುವ ಶಾಮರಾವ ಮಾಣಿಕ ಅವರ ಮನೆಗೆ ಭೇಟಿ ನೀಡಿ ಆಸ್ಪತ್ರೆ ಖರ್ಚಿಗಾಗಿ ವೈಯಕ್ತಿಕ ಧನಸಹಾಯ ಮಾಡಿದರು. ಇದಕ್ಕೂ ಮುನ್ನ ಜೋಜನಾ ಗ್ರಾಮದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿ ತೀವ್ರ ಸಮಸ್ಯೆ ಎದುರಿಸುತ್ತಿರುವ ಬಸವರಾಜ ಪಾಡಂಪಳ್ಳೆ ಅವರ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಔರಾದ(ಬಿ) ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬೀರೇಂದ್ರಸಿಂಗ್ ಠಾಕೂರ್, ಲೋಕೋಪಯೋಗಿ ಇಲಾಖೆಯ ಎಇಇ ವೀರಶೆಟ್ಟಿ ರಾಠೋಡ್, ಜೆಸ್ಕಾಂ ಎಇಇ ರವಿ ಕಾರಭಾರಿ, ಪಂಚಾಯತ್ ರಾಜ್ಬಿಲಾಖೆಯ ಎಇಇ ಸುಭಾಷ ಮಜಗೆ, ಮುಖಂಡರಾದ ವಸಂತ ವಕೀಲ, ರಾಮಶೆಟ್ಟಿ ಪನ್ನಾಳೆ, ಸುರೇಶ ಭೋಸ್ಲೆ, ದೋಂಡಿಬಾ ನರೋಟೆ, ಸೂರ್ಯಕಾಂತ ಅಲ್ಮಾಜೆ, ಶರಣಪ್ಪಾ ಪಂಚಾಕ್ಷರಿ, ಶಿವರಾಜ ಅಲ್ಮಾಜೆ, ಕೇರಬಾ ಪವಾರ, ಸಚಿನ ರಾಠೋಡ, ಶೇಷರಾವ ಕೋಳಿ, ಶಕುಂತಲಾ ಮುತ್ತಂಗೆ, ಹಣಮಂತ ಸುರನಾರ, ಖಂಡೋಬಾ ಕಂಗಟೆ, ಪ್ರಕಾಶ ಮೇತ್ರೆ ಹಾಗೂ ಇತರರು ಉಪಸ್ಥಿತರಿದ್ದರು.