ಸಮಸ್ಯೆಗಳಿಗೆ ಸ್ಪಂದಿಸದ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ವಿರುದ್ಧ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

ಕಲಬುರಗಿ:ಜು.24: ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗುತ್ತಗೆದಾರರ ಸಮಸ್ಯೆಗಳನ್ನು ಚರ್ಚಿಸಲು ಅವಕಾಶ ನೀಡಬೇಕೆಂದು ಕನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿದಾರರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಬೃಹತ್ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಘೋಷಣ ಕೂಗಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಇಲ್ಲಿಯವರೆಗೆ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಹಲವಾರು ಬಾರಿ ಮನವಿ ಮಾಡಿದರೂ ಸಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಯಂ ಆರ್ಥಿಕ ಯೋಜನೆಯಡಿ ಗ್ರಾಹಕರು ಸ್ವಂತ ಖರ್ಚಿನಿಂದ ಮಾಡಿಕೊಳ್ಳುವ ಜೆಸ್ಕಾಂ ವ್ಯಾಪ್ತಿಗೆ ಆರು ಜಿಲ್ಲೆಗಳು ಬರುವ ವಿದ್ಯುತ್ ಗುತ್ತಿಗೆದಾರರು ಮತ್ತು ಸಂಪರ್ಕ ಪಡೆಯುತ್ತಿರುವ ಗ್ರಾಹಕರಿಗೆ ಸಮಯದ ಅಭಾವದಿಂದ ಹೆಚ್ಚಾಗಿ ಒಂದು ಲಕ್ಷದಿಂದ ಐದು ಲಕ್ಷವರೆಗೆ ವಿದ್ಯುತ್ ಕಾಮಗಾರಿಗಳಿಗೆ ಟಿಎ ಮತ್ತು ಕೈಸಿ ಅಧಿಕಾರಿಗಳಿಂದ ಅನುಮೋದನೆ ಪಡೆಯಲು ವಿಳಂಬವಾಗುತ್ತದೆ. ಹಾಗಾಗಿ ಅದನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ಇಲಾಖೆಯ ಉಗ್ರಾಣದಲ್ಲಿ ಸುಮಾರು ವರ್ಷಗಳಿಂದ ವಿದ್ಯುತ್ ಗುತ್ತಿಗೆದಾರರಿಗೆ ಹೊಂದಾಣಿಕೆ ಸಾಮಗ್ರಿಗಳು ಸಿಗುತ್ತಿಲ್ಲ. ಶೀಘ್ರ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದ ಅವರು, ಇಲಾಖೆಯಲ್ಲಿ ಹೊಸ ಲೇಔಟ್‍ಗಳ ವಿದ್ಯುತ್ತೀಕರಣ ಪೂರ್ಣಗೊಂಡಿರುವ ಲೇಔಟ್‍ಗಳಿಗೆ ಸರಿಯಾದ ಸಮಯಕ್ಕೆ ವಿದ್ಯುತ್ ಪರಿವರ್ತಕಗಳನ್ನು ಸಂಬಂಧಪಟ್ಟ ಅಧಿಕಾರಿಗಳು ನೀಡುತ್ತಿಲ್ಲ. ಉಗ್ರಾಣದಲ್ಲಿ ದಾಸ್ತಾನು ಇಲ್ಲವೆಂದು ಹೇಳುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಯಚೂರು ವಿಭಾಗದಲ್ಲಿ ಯಾವುದೇ ಗ್ರಾಹಕರಿಗೆ ಈಟಿವಿ ಮಾಪಕ ಸಂಪರ್ಕ ಕೊಡಿಸಲು ಬಳ್ಳಾರಿ ಜಿಲ್ಲೆಯಿಂದ ಸಂಬಂಧಪಟ್ಟ ಅಲ್ಲಿನ ಅಧಿಕಾರಿಗಳಿಂದ ಅನುಮೋದನೆ ಮಾಡಿಸಿದರೆ ಮಾತ್ರ ರಾಯಚೂರಿನಲ್ಲಿನ ಮಾಪಕ ತಪಾಸಣೆಯ ಅಧಿಕಾರಿಗಳು ಪರೀಕ್ಷಿಸಿ ವರದಿ ನೀಡುತ್ತಿದ್ದಾರೆ. ಇದರಿಂದ ರಾಯಚೂರಿನಿಂದ ಬಳ್ಳಾರಿಗೆ ಹೋಗಲು ಸುಮಾರು 200 ಕಿ.ಮೀ. ದೂರವಾಗುವುದರಿಂದ ವಿದ್ಯುತ್ ಗುತ್ತಿಗೆದಾರರಿಗೆ ಮತ್ತು ಗ್ರಾಹಕರಿಗೆ ತುಂಬಾ ಕಷ್ಟವಾಗುತ್ತಿದೆ. ಆದ್ದರಿಂದ ರಾಯಚೂರು ವಿಭಾಗದಲ್ಲಿ ಅಧಿಕಾರಿಗಳು ನೇರವಾಗಿ ಪರೀಕ್ಷಿಸಿ ವರದಿ ನೀಡುವಂತೆ ಸೂಚಿಸಬೇಕು ಎಂದು ಅವರು ಆಗ್ರಹಿಸಿದರು.
ಜೆಸ್ಕಾಂ ಎಲ್ಲ ವೃತ್ತ ಹಾಗೂ ವಿಭಾಗದ ಕಚೇರಿಯಲ್ಲಿ ಸುಮಾರು ವರ್ಷಗಳಿಂದ ಪ್ರಭಾರಿಯಾಗಿಯೇ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದ್ದರಿಂದ ಶೀಘ್ರ ಖಾಯಂ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ ಅವರು, ಜೆಸ್ಕಾಂ ಎಲ್ಲ ವಿಭಾಗದ ಉಗ್ರಾಣದಲ್ಲಿ ತಂತಿ ತೂಕ ಮಾಡುವ ಯಂತ್ರವನ್ನು ಬದಲಾವಣೆ ಮಾಡಿ ತಂತ್ರಜ್ಞಾನದ ತೂಕದ ಯಂತ್ರವನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ವಿಭಾಗದ ಮಾಪಕ ಔಟ್‍ಲೆಟ್‍ನಲ್ಲಿ ಒಂದು ಫೇಸ್ ಮತ್ತು ಮೂರು ಫೇಸ್ ಮಾಪಕಗಳು ದಾಸ್ತಾನು ಇರುವುದಿಲ್ಲ. ಆದ್ದರಿಂದ ಮಾಪಕ ಕಂಪೆನಿಗಳ ಮಾಲಿಕರಿಗೆ ವ್ಯವಸ್ಥಾಪಕ ನಿರ್ದೇಶಕರಿಂದ ನೋಟಿಸ್ ಜಾರಿ ಮಾಡಿಸುವಂತೆ, ಮತ್ತು ಗ್ರಾಹಕರಿಗೆ ಮಾಪಕಗಳು ತೊಂದರೆಯಾಗದಂತೆ ಎರಡ್ಮೂರು ಮಾಪಕ ಕಂಪೆನಿಗಳಿಗೆ ಅನುಮತಿ ನೀಡಿ ಅನುಕೂಲ ಮಾಡಿಕೊಡುವಂತೆ ಅವರು ಒತ್ತಾಯಿಸಿದರು.
ಕಳೆದ ಮೂರು ತಿಂಗಳಿಂದ ಜೆಸ್ಕಾಂನ ಆರು ಜಿಲ್ಲೆಗಳಲ್ಲಿ ಮಿಟರ್ ಮಳಿಗೆಗಳಲ್ಲಿ ಯಾವುದೇ ಮೀಟರ್‍ಗಳು ಲಭ್ಯವಿಲ್ಲದೇ, ಮೀಟರ್ ಮಳಿಗೆಗಳು ಮುಚ್ಚಿಕೊಂಡಿವೆ. ಅವರ ನಿರ್ಲಕ್ಷ್ಯತನದಿಂದ ಈಗ ಜೆಸ್ಕಾಂನಲ್ಲಿ ಯಾವುದೇ ಹೊಸ ಸಂಪರ್ಕ ಸಿಗದೇ ಗ್ರಾಹಕರು ಹಾಗೂ ವಿದ್ಯುತ್ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಎಲ್ಲ ಅಧಿಕಾರಿಗಳು ಈ ಕುರಿತು ಸ್ಪಂದಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
33/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಪಾಳೆ ಕೆಲಸ ನಿರ್ವಹಿಸುತ್ತಿರುವ ವಿದ್ಯುತ್ ಗುತ್ತಿಗೆದಾರರಿಗೆ ಸೇವಾ ಶುಲ್ಕದ ಕುರಿತು ರಾಯಚೂರು ವೃತ್ತ ಕಚೇರಿಯ ಆದೇಶವನ್ನು ರದ್ದುಪಡಿಸಿ ಹಿಂದಿನ ಆದೇಶವನ್ನು ಮುಂದುವರೆಸುವಂತೆ ಹಾಗೂ ಹೊಸದಾಗಿ ಟೆಂಡರ್ ಕರೆಯುವಂತೆ ಅವರು ಒತ್ತಾಯಿಸಿದರು.
ಜೆಸ್ಕಾಂ ವಿಭಾಗದಲ್ಲಿ ಐದು ವರ್ಷಗಳ ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಶೀಘ್ರ ಬದಲಾವಣೆ ಮಾಡುವಂತೆ, ಬಳ್ಳಾರಿ ವೃತ್ತ ವ್ಯಾಪ್ತಿಗೆ ಬರುವ ಎಲ್ಲ ವಿಭಾಗಗಳಲ್ಲಿ ಪ್ಯಾಕೇಜ್ ಟೆಂಡರ್‍ಗಳನ್ನು ಮತ್ತು ಗಂಗಾ ಕಲ್ಯಾಣ ಹಾಗೂ ಕುಡಿಯುವ ನೀರಿನ ವಿದ್ಯುತ್ ಸಂಪರ್ಕ ನೀಡಲು ಟೆಂಡರ್ ಆಗಿದ್ದು, ಅದನ್ನು ರದ್ದುಗೊಳಿಸಿ ಒಂದು ಲಕ್ಷದಿಂದ ಐದು ಲಕ್ಷದವರೆಗೆ ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವಂತೆ ಅವರು ಆಗ್ರಹಿಸಿದರು.
ಸಂಘದ ರಾಜ್ಯಾಧ್ಯಕ್ಷ ಸಿ ರಮೇಶ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಹೆಚ್. ಚಂದ್ರಬಾಬು, ಜಿಲ್ಲಾ ಅಧ್ಯಕ್ಷ ಬಸವರಾಜ್ ಮಾಲಿಪಾಟೀಲ್, ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ಎಸ್. ಕಿಳ್ಳಿ, ಕೇಂದ್ರ ಸಮಿತಿ ಸದಸ್ಯ ಸೈಯದ್ ಗೌಸ್, ಜೆಸ್ಕಾಂ ಪ್ರತಿನಿಧಿ ಅನಿಲ್ ಐನಾಪುರ್, ಕೇಂದ್ರ ಸಮಿತಿ ಸದಸ್ಯ ಬಸವರಾಜ್ ಒಡೆಯರ್, ಅಶೋಕ್ ಕಮರಡಗಿ, ಕಾಶಿನಾಥ್ ಮೇಂತೆ, ರೇವಣಸಿದ್ದ ಬಾಗೋಡಿ, ಮುಬಿನ್ ಅಹ್ಮದ್, ಕುಪೇಂದ್ರ ಮುಂತಾದವರು ಪಾಲ್ಗೊಂಡಿದ್ದರು.