ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಿ: ಎನ್ ಎಸ್ ಯುಐ ಪ್ರತಿಭಟನೆ

ಬೀದರ್:ಮಾ.23: ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ತಡೆ ಸೇರಿದಂತೆ ಜ್ವಲಂತ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಬೇಕು’ ಎಂದು ಒತ್ತಾಯಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕದ ಕಾರ್ಯಕರ್ತರು ಬೀದರ್ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೂಲಿಕಾರರು ಹಾಗೂ ಬಡವರು ಕೂಲಿ ಮಾಡಿ ಬದುಕು ಸಾಗಿಸುವುದು ಕಷ್ಟವಾಗಿದೆ. ಆದ್ದರಿಂದ ಅಗತ್ಯ ವಸ್ತುಗಳ ಬೆಲೆ ನಿತಂತ್ರಿಸಬೇಕು. ನಿರುದ್ಯೋಗಿಗಳಿಗೆ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಐ.ಟಿ.ಐ., ಡಿಪೆÇ್ಲಮಾ ಹೀಗೆ ವೃತ್ತಿಪರ ಶಿಕ್ಷಣ ಪಡೆದವರು ಹಾಗೂ ಪದವೀಧರರಿಗೆ ಉದ್ಯೋಗ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಕೆಲಸ ಸಿಗದ ಕಾರಣ ಸಣ್ಣಪುಟ್ಟ ಕೆಲಸ ಮಾಡಲು ನೆರೆಯ ಹೈದರಾಬಾದ್‍ಗೆ ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಕೈಗಾರಿಕೆ ಪ್ರದೇಶದಲ್ಲಿರುವ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗ ಕೊಡುತ್ತಿಲ್ಲ ಎಂದು ದೂರಿದರು.
ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಂದ ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿವೆ. ಬಡ ಕುಟುಂಬದ ಮಕ್ಕಳು ಶಿಕ್ಷಣ ಪಡೆಯುವುದು ಕಷ್ಟವಾಗಿದೆ. ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ಪಡೆದುಕೊಳ್ಳುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೀದರ್ ನಗರದಿಂದ ಆಣದೂರ, ಕಪಲಾಪುರ, ಹೊನ್ನಡ್ಡಿ ಸೇರಿದಂತೆ ಅನೇಕ ಗ್ರಾಮಗಳಿಗೆ ಇಂದು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ನೌಕರಸ್ಥರು ನಿತ್ಯ ತೊಂದರೆ ಅನುಭವಿಸಬೇಕಾಗಿದೆ. ನಿತ್ಯ ನೂರಾರು ಸಂಖ್ಯೆಯಲ್ಲಿ ವಿವಿಧ ಗ್ರಾಮಗಳ ಗ್ರಾಮಸ್ಥರು ಜಿಲ್ಲಾ ಕೇಂದ್ರಕ್ಕೆ ಬಂದು ಹೋಗುತ್ತಾರೆ. ಅವರಿಗೆ ಸಂಚಾರ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಸಲ್ಲಿಸಿದರು. ಸಂಘಟನೆ ಧ್ವಜ ಹಿಡಿದು ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾ ಘಟಕದ ಉಪಾಧ್ಯಕ್ಷ ಇಮ್ರಾನ್ ಖಾನ್ ಕಪಲಾಪುರ, ತಾಲ್ಲೂಕು ಘಟಕದ ಅಧ್ಯಕ್ಷ ಆದಿತ್ಯ ಕಾಡವಾದ, ದತ್ತು ಪಾಟೀಲ, ಸೂರಜ ಚಿದ್ರಿ, ವಿಶಾಲಕುಮಾರ ಕುದರೆ, ಫಿಲಿಪ್ ಜಾನ್, ಗೌತಮ, ಇಸಾಕ್, ಕೇದಾರನಾಥ ಪಾಟೀಲ, ವಸೀಮ್, ಸಚಿನ್ ಬಾವಿದೊಡ್ಡಿ, ಪ್ರದೀಪ ಹೊನ್ನಡ್ಡಿ, ಅಭಿಷೇಕ, ಚಿನ್ನಾ ಮಂಗಲಪೇಟ ಹಾಗೂ ಸನ್ನಿ ಕಾಡವಾದ ಇದ್ದರು.