ಸಮಸ್ಯೆಗಳನ್ನು ಎದುರಿಸುವ ಸಾಮಥ್ರ್ಯ ನಮ್ಮದಾಗಬೇಕು

ಸೈದಾಪುರ:ನ.24:ಹೆಣ್ಣುಮಕ್ಕಳು ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು ಸಮಸ್ಯೆಗಳನ್ನು ಎದುರಿಸಿ ನಿಲ್ಲುವ ಸಾಮಾಥ್ರ್ಯ ಬೆಳಸಲು ಪೊಲೀಸ ಇಲಾಖೆ ಪ್ರಯತ್ನ ಮಾಡಲಾಗುತ್ತಿದೆ ಇದರ ಸರಿಯಾದ ಸದುಪಯೋಗ ನಮ್ಮದಾಗಬೇಕು ಎಂದು ಪಿಎಸ್‍ಐ ಗಂಗಾ.ಎಸ್.ಬದ್ರಾಪೂರ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪೊಲೀಸ ಇಲಾಖೆ, ಸೈದಾಪುರ ಪೊಲೀಸ ಠಾಣೆ ಹಾಗೂ ಜಿಲ್ಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸ್ಟೂಡೆಂಟ ಪೊಲೀಸ ಕೆಡೆಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾನೂನು ಅರಿವು ಸೇರಿದಂತೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕರಾಟೆ ಸೇರಿದಂತೆ ವಿವಿಧ ಕೌಶಲ್ಯಗಳನ್ನು ಕಲಿಸಲಾಗುವುದು. ಪೊಲೀಸ ಇಲಾಖೆ ವತಿಯಿಂದ ನಿಮ್ಮ ಶಾಲೆ ಆಯ್ಕೆಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಿದೆ. ಇದರ ಸರಿಯಾದ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಸ್ವಾಲಂಬನೆಯ ಜೀವನ ಮಾಡುವಂತಾಗಬೇಕು. ವರ್ಗಗಳನ್ನು ತಪ್ಪಿಸಿಕೊಳ್ಳದೆ ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಉತ್ತಮ ಸಾಧನೆ ನಮ್ಮದಾಗುತ್ತದೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲರಾದ ಹಂಪಣ್ಣಸಜ್ಜನ ಶೆಟ್ಟಿ, ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ಗೂಳಪ್ಪ.ಎಸ್.ಮಲ್ಹಾರ, ವಿಶ್ವನಾಥರೆಡ್ಡಿ ಪಾಟೀಲ ಕಣೇಕಲ್ ಸೇರಿದಂತೆ ಇತರರಿದ್ದರು. ಬಿ.ಆರ್. ನಾಯಕ ಸ್ವಾಗತಿಸಿದರು. ರಾಚಪ್ಪ ನಿರೂಪಿಸಿದರು. ತೊಟೇಂದ್ರ ವಂದಿಸಿದರು.