ಸಮಸಮಾಜ ನಿರ್ಮಿಸಲು ಸಹಕಾರ ಬ್ಯಾಂಕ್ ಗುರಿ: ಎಚ್.ಸಿ.ಮಹದೇವಪ್ಪ

ಸಂಜೆವಾಣಿ ನ್ಯೂಸ್
ಮೈಸೂರು: ಜು.10:- ಅಸಮಾನತೆಯನ್ನು ತೊರೆದು ಸಮ ಸಮಾಜದ ಅಭಿವೃದ್ಧಿಗೆ ಸಹಕಾರಿ ಕೋ ಆಪರೇಟಿವ್ ಬ್ಯಾಂಕ್ ಗಳು ಗುರಿಯನ್ನು ನಿರ್ಮಿಸಿಕೊಂಡಿದ್ದು ದೇಶದ ಆರ್ಥಿಕ ಅಭಿವೃದ್ಧಿಗೆ ಉಪಯುಕ್ತವಾಗಿವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ನಗರದ ಜೆ. ಕೆ ಗ್ರೌಂಡ್ ನಲ್ಲಿ ನಡೆದ ದಿ ಗ್ರಾಜುಯೆಟ್ ಕೊ ಆಪರೇಟಿವ್ ಬ್ಯಾಂಕ್ ನ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಹಲವಾರು ಸಹಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಮೈಸೂರಿನ ಕೋ ಆಪರೇಟಿವ್ ಬ್ಯಾಂಕ್ ಒಂದು ವಿಶಿಷ್ಟವಾದ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸಿ ಮೈಸೂರಿನ ಬ್ಯಾಂಕ್ ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಶತಮಾನೋತ್ಸವ ಕಾರ್ಯಕ್ರಮವನ್ನು ಆಚರಿಸುವ ಭಾಗ್ಯವನ್ನು ದಿ ಗ್ರಾಜುಯೇಷನ್ ಕೋ ಆಪರೇಟಿವ್ ಬ್ಯಾಂಕ್ ಪಡೆದುಕೊಂಡಿದೆ ತಿಳಿಸಿದರು.
ಭಾರತವು ಆರಂಭದ ದಿನಗಳಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದ ಸಂದರ್ಭ ಕಂಡು ಬಂದಿದ್ದು, ಅಂದಿನ ಸಮಯದಲ್ಲಿ ಮೈಸೂರಿನಲ್ಲಿ ಕೋ ಆಪರೇಟಿವ್ ಬ್ಯಾಂಕ್ ಗಳು ಆರಂಭವಾದದ್ದು ಪದವೀಧರರು, ಇಂಜಿನಿಯರ್ ಗಳು ಹಾಗೂ ಡಾಕ್ಟರ್ ಪದವಿಗಳನ್ನು ಹೊಂದಿದ್ದವರಿಗೆ ಉಪಯುಕ್ತವಾಗಿದೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಇಲಾಖೆಯ ಮಂತ್ರಿ ಕೆ. ಎನ್.ರಾಜಣ್ಣನವರು ಮಾತನಾಡಿ, 1923ರಲ್ಲಿ ಪೆÇ್ರಫೆಸರ್ ಎನ್.ಎಸ್.ಸುಬ್ಬು ರಾವ್ ಅವರ ಆಲೋಚನೆಯೇ ಕೋ- ಆಪರೇಟಿವ್ ಬ್ಯಾಂಕ್. ಆರ್ಥಿಕ ಸಂಕಷ್ಟದಲ್ಲಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ನಿರ್ವಹಣೆಗೆ ಮತ್ತು ಪದವಿದರ ಸಮಸ್ಯೆಗಳಿಗೆ ಬೆನ್ನೆಲುಬಾಗಿ ದಿ ಗ್ರಾಜುಯೇಷನ್ ಕೋ ಆಪರೇಟಿವ್ ಬ್ಯಾಂಕ್ ಮಾರ್ಪಾಡಾಗಿದೆ. ಬ್ಯಾಂಕ್ ಕಾರ್ಯ ವೈಖರಿಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರೂ ಕೂಡ ಇದರ ಆಧಾರ ಸ್ತಂಭವಾಗಿದ್ದಾರೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿನ ಸಹಕಾರ ಸಂಘ ಸಂಸ್ಥೆಗಳು ಸಮಸ್ಯೆಗಳಿಂದ ಕೂಡಿವೆ. ಅವುಗಳ ಬೆಳವಣಿಗೆಯ ಕಡೆಯೂ ಕೂಡ ಹೆಚ್ಚಿನ ಗಮನವನ್ನು ಹರಿಸಬೇಕು ಈ ಭಾರಿಯ ಸರ್ಕಾರದಲ್ಲಿ ಡಿಸೆಂಬರ್ ಒಳಗೆ ಸಹಕಾರ ಪತ್ತಿನ ಸಂಘಗಳ ನಿರ್ಮಾಣ ಸಂಪೂರ್ಣವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಸಹಕಾರ ಸಂಘ ಸಂಸ್ಥೆಗಳಲ್ಲಿನ ತೊಂದರೆಗಳನ್ನು ಅರಿತು ಅವುಗಳ ನಿರ್ಮೂಲನೆ ಮಾಡಿ ಸಂಪೂರ್ಣವಾಗಿ ಪ್ರತಿಯೊಬ್ಬ ಗ್ರಾಮಸ್ಥರಿಗೂ ಉಪಯೋಗವಾಗುವಂತೆ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು ಎಂದು ತಿಳಿಸಿದರು
ಸಹಕಾರ ಮಾಜಿ ಸಚಿವ ಎಚ್.ವಿಶ್ವನಾಥ್ ಅವರ ಸಲಹೆಗಳನ್ನು ಕೇಳಿ, ಅವರ ಸಲಹೆಯಂತೆ ಸಹಕಾರ ಸಂಘ-ಸಂಸ್ಥೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಸರ್ಕಾರದಿಂದ ಸಂಪೂರ್ಣವಾದ ಬೆಂಬಲ ನೀಡಲಾಗುವುದು. ಯಶಸ್ವಿನಿ ಯೋಜನೆಗೆ ಸಂಬಂಧಿಸಿದಂತೆ ನಿಂತು ಹೋಗಿದ್ದ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದ್ದರು.
ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಮಾತನಾಡಿ, ಸಹಕಾರಿ ಸಂಘ ಸಂಸ್ಥೆಗಳು ಮಾದರಿ ರೂಪದಲ್ಲಿ ನಿರ್ಮಾಣವಾಗುತ್ತಿವೆ ಇದರ ನೇಮಕಾತಿ, ಸಾಲ, ಸೌಲಭ್ಯ ಮತ್ತು ವಿವಿಧ ವಿಭಾಗಗಳಲ್ಲಿ ಹೆಚ್ಚಿನ ರಿಸರ್ವೇಶನ್ ಅನ್ನು ನೀಡಬೇಕಾಗಿ ಕೇಳಿಕೊಂಡರು. ಯಶಸ್ವಿನಿ ಆರೋಗ್ಯ ಯೋಜನೆ ಕುರಿತು ಹೆಚ್ಚಿನ ರೀತಿಯ ಕಾರ್ಯಕ್ರಮಗಳನ್ನು ಮುಂದುವರಿಸಿ ಬಡವರಿಗೆ ನೆರವಾಗಬೇಕು ಡಾ. ದೇವಿ ಶೆಟ್ಟಿ ಅವರ ಕನಸು ಯಶಸ್ವಿ ಯೋಜನೆಯಾಗಿದ್ದು ಇದರಿಂದ ಬಡವರಿಗೆ ಹೆಚ್ಚಿನ ರೀತಿಯ ಉಪಯೋಗಗಳಾಗಿವೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಮುಂದುವರಿಯಬೇಕಾಗಿ ಸಚಿವರಲ್ಲಿ ವಿನಂತಿಸಿಕೊಂಡರು.
ವಿಧಾನಪರಿಷತ್ ಸದಸ್ಯರಾದ ಮರೀತಿಬ್ಬೆ ಗೌಡ ಮಾತನಾಡಿ, ಕೋವಿಡ್ ಸಂಧರ್ಭದಲ್ಲಿಯೂ ಯಶಸ್ವಿ ಯಾಗಿ ಮುಂದುವರಿದ ಬ್ಯಾಂಕ್ ಗಳಲ್ಲಿ ಕೋ-ಆಪರೇಟಿವ್ ಬ್ಯಾಂಕ್ ಗಳು ಕೂಡ ಇವೆ. ಸಹಕಾರದ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪಗಳು ಹೆಚ್ಚಿವೆ. ಅವುಗಳನ್ನು ನಿರ್ಮೂಲನೆ ಮಾಡಿ ಸಹಕಾರ ಸಂಘಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಸಹಕಾರ ಸಂಘಗಳ ನ್ಯಾಯ ತೀರ್ಮಾನಕ್ಕಾಗಿ ವಿಭಾಗೀಯ ಮಟ್ಟಗಳಲ್ಲಿ ಸಹಕಾರಿ ನ್ಯಾಯಾಲಯಗಳನ್ನು ತೆರೆದು ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕು ಆರ್ಥಿಕವಾಗಿ ಹಿಂದುಳಿದ ವರ್ಗಗಳು ಪರಿಶಿಷ್ಟ ವರ್ಗಗಳು ಮತ್ತು ಜಾತಿಗಳಿಗೆ ಸಹಕಾರ ಸಂಘಗಳು ಹೆಚ್ಚಿನ ಆದ್ಯತೆಯನ್ನು ನೀಡಿ ಉತ್ತಮ ಕಾರ್ಯವನ್ನು ನಿರ್ವಹಿಸಬೇಕಾಗಿ ತಿಳಿಸಿದರು.
ಬ್ಯಾಂಕ್ ನ ಅಧ್ಯಕ್ಷ ಎನ್.ಶ್ರೀನಿವಾಸ್ ಮಾತನಾಡಿ, ದಿ ಗ್ರಾಜ್ಯುಯೇಟ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ ಅದ ರೀತಿ ಹಾಗೂ ಅಂದಿನ ದಿನಗಳಲ್ಲಿ ಪದವಿದರಿಗೆ ಉಪಯುಕ್ತವಾಗುವಂತೆ ಈ ಸಂಸ್ಥೆಯನ್ನು ನಿರ್ಮಿಸಲಾಯಿತು. ಕಡಿಮೆ ಮೊತ್ತದಿಂದ ಪ್ರಾರಂಭವಾಗಿ ಇಂದು ಹೆಚ್ಚಿನ ಮೊತ್ತದ ಆದಾಯವನ್ನು ಪಡೆದು ಕೊಂಡಿದೆ. ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಒಳಗೊಂಡು ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಾ ಬಂದಿರುವುದು ಖುಷಿಯ ವಿಚಾರ ಎಂದರು.
ಮೇಯರ್ ಶಿವಕುಮಾರ್, ವಿಧಾನ ಸಭಾ ಶಾಸಕರಾದ ಟಿ.ಎನ್.ಶ್ರೀವತ್ಸ, ಮೈಸೂರು ಸಹಕಾರಿ ಯೂನಿಯನ್ ಹಾಗೂ ಅಧ್ಯಕ್ಷ ಎಚ್.ವಿ. ರಾಜೀವ್ ಬ್ಯಾಂಕ್ ನ ಉಪಾಧ್ಯಕ್ಷ ಆರ್.ಅನಂತರಾಮು ಹಾಗೂ ದಿ ಗ್ರಾಜುಯೇಟ್ ಕೋ ಆಪರೇಟಿವ್ ಬ್ಯಾಂಕ್ ನ ಸಿಬ್ಬಂದಿ ವರ್ಗದವರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.