ಸಮಸಮಾಜ ನಿರ್ಮಾಣಕ್ಕೆ ಸರ್ವಜ್ಞ ಮತ್ತು ಕಾಯಕ ಶರಣರ ಮೌಲ್ಯಾದರ್ಶಗಳು ಅಗತ್ಯ:

ದಾವಣಗೆರೆ; ಫೆ.21; ಮಾನವ ವಿಶ್ವಮಾನವನಾಗಲು ಬೇಕಾದ ಜೀವನ ಮೌಲ್ಯಗಳನ್ನು ಸರ್ವಜ್ಞ  ತ್ರಿಪದಿಗಳಲ್ಲಿ ನೀಡಿದ್ದಾರೆ ಹಾಗೂ ಸಮ ಸಮಾಜದ ನಿರ್ಮಾಣಕ್ಕೆ 12ನೇ ಶತಮಾನದಲ್ಲಿನ ಕಾಯಕ ಶರಣರು ವಚನಗಳ ಮೂಲಕ ಸಂದೇಶಗಳನ್ನು ನೀಡಿದ್ದಾರೆ. ಈ ಮಹನೀಯರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ತಿಳಿಸಿದರು.ಜಿಲ್ಲಾಡಳಿತ ಭವನ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಂತ ಕವಿ ಸರ್ವಜ್ಞ ಹಾಗೂ ಕಾಯಕ ಶರಣರ ಜಯಂತೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದದರು.ಸರ್ವಜ್ಞರು ಸತ್ಯ ಶುದ್ಧವಾದ ಕಾಯಕವನ್ನು ಮಾಡುತ್ತಾ ಸಮಾಜದ ಅಂಕುಡೊಂಕುಗಳನ್ನು ತ್ರಿಪದಿಗಳ ಮೂಲಕ ತಿದ್ದುವಲ್ಲಿ  ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಸಂತ ಕವಿ ಎಂದೇ ಪ್ರಸಿದ್ಧವಾಗಿರುವ ಇವರು ರಚಿಸಿದ ತ್ರಿಪದಿಗಳು ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿವೆ, ಕಾಯಕದ ತತ್ವ, ಅನುಭವದ ತತ್ವಗಳನ್ನು ಸಾಮಾನ್ಯ ಭಾಷೆಯಲ್ಲೇ  ಸಾಮಾನ್ಯರಿಗೆ ತಿಳಿಯುವಂತೆ ರಚಿಸಿದ್ದಾರೆ. ಇವರ ತ್ರಿಪದಿ ಹಾಗೂ ವಚನಗಳನ್ನು ಅಧ್ಯಯನಮಾಡಬೇಕು, ಕೇಳಬೇಕು ಎಂದು ಹೇಳಿದರು.ಕಾಯಕ ಶರಣರು ಮೂಢನಂಬಿಕೆ, ಜಾತಿ ಪದ್ಧತಿ, ಅಸಮಾನತೆ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಶರಣರ ಕೊಡುಗೆ ಅಪಾರ. ಬಸವಣ್ಣನವರ ಸಮಾನತೆ ತತ್ವವನ್ನು ಆಧರಿಸಿ ಅವರ ಹಾದಿಯಲ್ಲಿ ನಡೆದ ಶರಣರಾದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ಉರಿಲಿಂಗ ಪೆದ್ದಿಯವರು ಶರಣ ಪಡೆಯ ಮಹನೀಯರಾಗಿದ್ದಾರೆ.  ಇವರು ವಚನಗಳÀ ಮೂಲಕ ಸಾಹಿತ್ಯವನ್ನು ಸರಳ ಕನ್ನಡದಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿ ತಿಳಿಸಿದ್ದಾರೆ. ಕಾಯಕದಲ್ಲಿ ಸ್ವರ್ಗ ಕಾಣಬಹುದು ಕಾಯಕವೇ ದೇವರು ಎಂದು ತಿಳಿಸಿಕೊಟ್ಟಿದ್ದಾರೆ. ಶರಣರ ನಡೆ ನುಡಿಗಳನ್ನು ಪಾಲಿಸಿದರೆ ಸಮಾಜದಲ್ಲಿ ಸಾಮಾಜಿಕ ಬದಲಾವಣೆಯನ್ನು ಕಾಣಬಹುದು ಎಂದರು.ಈ  ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿ ಸಿ.ಬಿ ರಿಷ್ಯಂತ್, ಸರ್ವಜ್ಞ ಸಮಾಜದ ಅಧ್ಯಕ್ಷ ಪುಷ್ಪರಾಜ್, ಕಾರ್ಯದರ್ಶಿ ತಿಪ್ಪೇಸ್ವಾಮಿ, ಉಪನ್ಯಾಸ ಸೌಭಾಗ್ಯ ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.