ಸಮರ್ಪಕ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ಪ್ರತಿಭಟನೆ

ಮೈಸೂರು,ಏ.16:- ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಬ ರಾಜನ್ನು ಸಮರ್ಪಕವಾಗಿ ಮತ್ತು ನಿಗದಿತ ಅವಧಿಗೆ ಅನುಗುಣವಾಗಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ವಿಜಯನಗರದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಛೇರಿ ಬಳಿ ಪ್ರತಿಭಟನೆ ನಡೆಯಿತು.
ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ಮತ್ತು ನಿಗದಿತ ಅವಧಿಗೆ ಅನುಗುಣವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ರೈತರು ನಷ್ಟ ಅನುಭವಿಸಿದ್ದಾರೆ. ಕೂಡಲೇ ಹತ್ತು ಗಂಟೆಗಳ ಕಾಲ ವಿದ್ಯುತ್ ಒದಗಿಸಬೇಕು. ರಾತ್ರಿ ವೇಳೆ ಸಿಂಗಲ್ ಫೇಸ್ ಕರೆಂಟ್ ನಿರಂತರವಾಗಿ ನೀಡಬೇಕು. ಟ್ರಾನ್ಸ್ ಫರ್ಮರ್ ಗಳು ಪದೇ ಪದೇ ಸುಟ್ಟು ಹೋಗುತ್ತಿದೆ. ದುರಸ್ತಿ ಮತ್ತು ಟ್ರಾನ್ಸ್ ಫರ್ಮರ್ ಅಳವಡಿಕೆಯಲ್ಲಿ ವಿಳಂಬವಾಗುತ್ತಿದೆ ಇವುಗಳನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು.
ಟ್ರಾನ್ಸಫರ್ಮರ್ ದುರಸ್ತಿಗೆ ಮತ್ತು ಅಳವಡಿಕೆ ಕೆಲಸವನ್ನು ಖಾಸಗಿಯವರಿಗೆ ವಹಿಸಿದ್ದು ಅವರು ಸಮರ್ಪಕವಾಗಿ ಕೆಲಸವನ್ನು ನಿರ್ವಹಿಸುತ್ತಿಲ್ಲ. ಈ ಕಾರ್ಯಗಳನ್ನು ನಿಗಮವೇ ನಿರ್ವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಂಬಗಳು ಬಗ್ಗಿ ಹೋಗಿವೆ ಮತ್ತು ತಂತಿಗಳು ಜೋತು ಬಿದ್ದಿವೆ. ಇದರಿಂದ ಜನ, ಜಾನುವಾರುಗಳು ಸಾವು ನೋವಿಗೆ ಒಳಗಾಗುತ್ತಿವೆ. ಇವುಗಳನ್ನು ದುರಸ್ತಿಪಡಿಸಬೇಕು.
ಅಕ್ರಮ-ಸಕ್ರಮ ಯೋಜನೆಯಡಿ ಹಣ ತುಂಬಿದ ರೈತರಿಗೆ ಟ್ರಾನ್ಸಫರ್ಮರ್ ನೀಡುವಲ್ಲಿ ಬಹಳ ವಿಳಂಬವಾಗುತ್ತಿದ್ದು ಕೂಡಲೇ ಇಂತಹ ಪ್ರಕರಣಗಳಿಗೆ ಟ್ರಾನ್ಸ್ ಫರ್ಮರ್ ನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಚೆಸ್ಕಾಂ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳ ರೈತ ಮುಖಂಡರು ಮತ್ತು ಅಧಿಕಾರಿಗಳ ಸಭೆಯನ್ನು ಕೂಡಲೇ ನಿಗದಿ ಮಾಡಿ, ಕರೆದು ಸಮಸ್ಯೆಗಳ ಪರಿಹಾರಕ್ಕೆ ಚರ್ಚೆ ಮಾಡಬೇಕು. ಇಲ್ಲದಿದ್ದಲ್ಲಿ ಸಂಘವು ಚೆಸ್ಕಾಂ ವ್ಯಾಪ್ತಿಗೆ ಬರುವ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಇತರೆ ಜಿಲ್ಲೆಗಳಲ್ಲಿ ಅಹೋರಾತ್ರಿ ತಮ್ಮ ಕಛೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಲೋಕೇಶ್ ರಾಜೇ ಅರಸ್, ಸರಗೂರು ನಟರಾಜ್, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಎನ್.ಪ್ರಸನ್ನ ಗೌಡ, ಬೊಕ್ಕಳ್ಳಿ ನಂಜುಂಡಸ್ವಾಮಿ, ಶೆಟ್ಟಹಳ್ಳಿ ಚಂದ್ರೇಗೌಡ, ನೇತ್ರಾವತಿ, ಪಿ.ಪಳನಿಸ್ವಾಮಿ, ಬನ್ನೂರು ಕೃಷ್ಣಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.