ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತರ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹನೂರು: ಆ.19:- ಸಮರ್ಪಕ ವಿದ್ಯುತ್ ಪೆÇರೈಕೆ ವಿದ್ಯುತ್ ಸಮಸ್ಯೆ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹನೂರು ಪಟ್ಟಣದ ಚೆಸ್ಕಾಂ ಇಲಾಖೆಯ ಕಚೇರಿಯ ಮುಂದೆ ರೈತರು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು.
ತಾಲೂಕು ಘಟಕ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ (ರಿ) ಸಂಘದ ರೈತರು ಜಮೀನುಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಪಟ್ಟಣದ ಟಿ ಕೆಎನ್ ಪೆಟ್ರೋಲ್ ಬಂಕ್ ಸರ್ಕಲ್ ಹತ್ತಿರ ಜಮಾಯಿಸಿದ ರೈತರು ಮೆರವಣಿಗೆ ಸಾಗಿ ಪಟ್ಟಣ ಬಸ್ ನಿಲ್ದಾಣದ ನಾಗಪ್ಪ ಸರ್ಕಲ್ ಹತ್ತಿರ ಕೆಲ ಕಾಲ ಪ್ರತಿಭಟನೆ ನಡೆಸಿದರು.
ನಂತರ ಅಲ್ಲಿಂದ ಮೆರವಣಿಗೆ ಸಾಗಿದ ರೈತ ಸಂಘಟನೆಗಳು ಚೆಸ್ಕಂ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ತಾಲೂಕಿನ ವ್ಯಾಪ್ತಿಯಲ್ಲಿ ವಿದ್ಯುತ್ ಅಭಾವದಿಂದ ಸೂಕ್ತ ನೀರು ಪೂರೈಕೆ ಯಾಗದೆ ಹಾಳಾಗಿರುವ ಬೆಳ್ಳುಳ್ಳಿ ಜೋಳ ಇನ್ನಿತರ ಬೆಳೆಗಳನು ಬೆಳೆದಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸಬೇಕು.
ಕಾಡಂಚಿನ ವ್ಯಾಪ್ತಿಯಲ್ಲಿರುವ ಜಮೀನುಗಳಿಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುತ್ತದೆ ರಾತ್ರಿ ಸಮಯದಲ್ಲಿ ಜಮೀನುಗಳಲ್ಲಿ ಬೆಳೆಗಳಿಗೆ ನೀರು ಒದಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಹಗಲು ವೇಳೆಯಲ್ಲಿ ಸಂಪೂರ್ಣ 3 ಫೇಸ್ ವಿದ್ಯುತ್ ಪೂರೈಕೆಯಾಗಬೇಕು.
ಕೆ ಆರ್ ಪಿ ಕಾನೂನಿನ ಪ್ರಕಾರ 72 ಗಂಟೆಗಳಲ್ಲಿ ಕೆಟ್ಟು ನಿಂತ ಟಿಸಿಗಳು ದುರಸ್ತಿಯಾಗಬೇಕು ಅಥವಾ ಬದಲಿ ಟಿಸಿ ಅಳವಡಿಕೆ ಮಾಡಬೇಕು. ಲೋಡ್ ಸೆಟ್ಟಿಂಗ್ ಕಾರಣ ನೆಪವಡ್ಡಿ ಪದೇಪದೇ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದರಿಂದ ಪಂಪ್ಸೆಟ್ ಗಳು ಕೆಟ್ಟು ಹೋಗುವುದಲ್ಲದೆ ತುಂಬಾ ವಿದ್ಯುತ್ ವ್ಯಥೆಯ ಉಂಟಾಗುತ್ತದೆ.
ಹೊಸ ಸರ್ವಿಸ್ ಪಡೆದು ವಿದ್ಯುತ್ ಪರಿವರ್ತಕಗಳಿಗೆ ಅಳವಡಿಕೆಗಾಗಿ ಅರ್ಜಿ ಸಲ್ಲಿಸುವ ರೈತರ ಪಂಪ್ ಸೆಟ್ ಗಳಿಗೆ ತ್ವರಿತವಾಗಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಬೇಕು ಎಂದು ಈ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ವೇಳೆ ಆಗಮಿಸಿದ ಅಧೀಕ್ಷಕ ಇಂಜಿನಿಯರ್ ತಾರ ಅವರು ಪ್ರತಿಭಟನ ನಿರತರ ರೈತರನ್ನು ಮನವೊಲಿಸಿ ಮಾತನಾಡಿ ರೈತರು ನೀಡುವ ದೂರಿನಂತೆ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲು ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತರು ಹಾಗೂ ಸಾರ್ವಜನಿಕರು ಯಾವುದೇ ವಿದ್ಯುತ್ ಸಂಭಂದಿಸಿದಂತೆ ಮಾಹಿತಿ ಅಥವಾ ಕೆಲಸ ಕಾರ್ಯಗಳ ಬಗ್ಗೆ ಇಲಾಖೆ ಸಿಬ್ಬಂದಿಗಳು ರೈತರಿಗೆ ಸರಿಯಾದ ಮಾಹಿತಿಯನ್ನು ನೀಡಿ ಸಹಕಾರ ನೀಡಬೇಕು. ವಿದ್ಯುತ್ ಸಮಸ್ಯೆಗಳು ಯಾವುದೇ ಇದ್ದರೂ ಆದಷ್ಟು ಬೇಗನೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗರಾಜು, ಎಇಇ ಶಂಕರ್, ಎಇ ರಂಗಸ್ವಾಮಿ, ಭಾರತೀಯ ಕಿಸಾನ್ ಸಂಘದ ಹನೂರು ಘಟಕದ ಅಧ್ಯಕ್ಷ ಹರೀಶ್, ಪ್ರಾಂತ್ಯ ಅಧ್ಯಕ್ಷ ರಾಜೇಂದ್ರ, ಜಿಲ್ಲಾ ಕಾರ್ಯದರ್ಶಿ ಬೋಸ್ಕೋ, ಜಿಲ್ಲಾಧ್ಯಕ್ಷ ಲಿಂಗರಾಜ್, ಶಾಗ್ಯ ಪ್ರಸಾದ್ , ಕೊಳ್ಳೇಗಾಲ ಅಧ್ಯಕ್ಷ ಶಾಂತಮಲ್ಲಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.