ಸಮರ್ಪಕ ವಿದ್ಯುತ್ ಪೂರೈಸದಿದ್ದರೆ ವಿದ್ಯುತ್ ಬಿಲ್ ತುಂಬುವುದಿಲ್ಲ – ಮೋಳೆ ಗ್ರಾಮಸ್ಥರ ಎಚ್ಚರಿಕೆ

ಅಥಣಿ : ನ.17:ತಾಲೂಕಿನ ಮುರುಗುಂಡಿ 33 ಕೆವಿ ವಿದ್ಯುತ್ ಘಟಕದಿಂದ ಸಕಾಲಕ್ಕೆ ನಮ್ಮೂರಿಗೆ ವಿದ್ಯುತ್ ದೊರಕುತ್ತಿಲ್ಲ, ಈ ವಿದ್ಯುತ್ ಸಂಪರ್ಕವನ್ನು ಸಮೀಪದ ಐನಾಪುರ 110 ಕೆವಿ ವಿದ್ಯುತ್ ಘಟಕದಿಂದ ಸರಬರಾಜು ಮಾಡಬೇಕು. ಮೋಳೆ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಸದಿದ್ದರೆ ಮುಂಬರುವ ದಿನಗಳಲ್ಲಿ ವಿದ್ಯುತ್ ಶುಲ್ಕವನ್ನು ತುಂಬುವುದನ್ನು ನಿಷೇಧಿಸಲಾಗುವುದು ಎಂದು ಗ್ರಾಮದ ಹಿರಿಯರಾದ ಬಾಹುಬಲಿ ಟೊಪಗಿ ಹೇಳಿದರು.
ಅವರು ಅಥಣಿ ಹೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಮೋಳೆ ಗ್ರಾಮಕ್ಕೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕವಿದ್ದರೂ ಕೂಡ ಸಮರ್ಪಕವಾದ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಮೇಲಿಂದ ಮೇಲೆ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ವಿದ್ಯುತ್ ಶಕ್ತಿ ಅವಲಂಬಿತ ಕೆಲಸಗಾರರಿಗೆ ತೊಂದರೆಯಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ಬಹಳಷ್ಟು ತೊಂದರೆ ಮತ್ತು ವ್ಯಾಪಾರಸ್ಥರಿಗೆ ನಷ್ಟವಾಗುತ್ತಿದೆ.ಈ ಮೊದಲು ಐನಾಪುರ ಘಟಕದಿಂದ ಸರಬರಾಜು ಮಾಡುತ್ತಿದ್ದ ವಿದ್ಯುತ್ತನ್ನು ಕಡಿತಗೊಳಿಸಿ ಮುರುಗುಂಡಿ ಘಟಕದಿಂದ ಸರಬರಾಜು ಮಾಡಲಾಗುತ್ತಿದೆ. ಏಳೆಂಟು ಊರುಗಳ ಸಂಪರ್ಕ ಹೊಂದಿರುವುದರಿಂದ ಮೇಲಿಂದ ಮೇಲೆ ತೊಂದರೆಗಳಾಗಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಅಧಿಕಾರಿಗಳಿಗೆ ಲಿಖಿತ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸದೆ ಇದ್ದರೆ ಮುಂಬರುವ ದಿನಗಳಲ್ಲಿ ಗ್ರಾಮಸ್ಥರು ವಿದ್ಯುತ್ ಬಿಲ್ಲನ್ನು ಭರಣಾ ಮಾಡುವುದನ್ನು ನಿಷೇಧಿಸಲು ಗ್ರಾಮ ಪಂಚಾಯತ ಸಭೆಯಲ್ಲಿ ನಿರ್ಧರಿಸಿದ್ದೇವೆ. ಕೂಡಲೇ ಐನಾಪುರ ವಿದ್ಯುತ್ ಘಟಕದಿಂದ ವಿದ್ಯುತ್ ಸರಬರಾಜು ಮಾಡದೇ ಇದ್ದರೆ ಉಗ್ರ ಹೋರಾಟ ಕೈಕೊಳ್ಳಬೇಕಾಗುತ್ತದೆ ಎಂದು ಹೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಈ ವೇಳೆ ಗ್ರಾಮದ ಮುಖಂಡರಾದ ಕಾಂತು ಬಡಿಗೇರ, ಡಿ ಎಸ್ ಸಾವಂತ, ದೌಲತ್ ಬೋರ್ಗಾವಿ, ರಮೇಶ ಕುಂಬಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.