ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ

ಬೆಂಗಳೂರು, ಮಾ. ೨೭- ಬೇಸಿಗೆಯಲ್ಲಿ ಲೋಡ್‌ಶೆಡ್ಡಿಂಗ್‌ಗೆ ಅವಕಾಶ ಆಗದಂತೆ ಸಮರ್ಪಕ ವಿದ್ಯುತ್ ಪೂರೈಕೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಸದ್ಯ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಂದರೆಯಿಲ್ಲ. ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುವುದು ಸಾಮಾನ್ಯ ಸಂಗತಿ. ಈ ಬೇಡಿಕೆ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿಯೇ ಇಂಧನ ಇಲಾಖೆ ಯಾವುದೇ ವರ್ಗದ ಗ್ರಾಹಕರಿಗೆ ಲೋಡ್‌ಶೆಡ್ಡಿಂಗ್ ಬಿಸಿ ತಟ್ಟದಂತೆ ಎಚ್ಚರ ವಹಿಸಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಪ್ರತಿನಿತ್ಯ ೩೨೯ ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ವಿದ್ಯುತ್ ಬಳಕೆ ಪ್ರಮಾಣ ೩೦೦ ದಶಲಕ್ಷ ಯೂನಿಟ್ ನಷ್ಟಿತ್ತು ಎಂದು ಹೇಳಿರುವ ಅವರು, ಕಳೆದ ವರ್ಷ ಗರಿಷ್ಠ ಲೋಡ್ ೧೫೩೦೦ ಮೆಗಾವ್ಯಾಟ್ ಆಗಿದ್ದರೆ ಈ ವರ್ಷದ ಗರಿಷ್ಠ ಲೋಡ್ ೧೭ ಸಾವಿರ ಮೆಗಾವ್ಯಾಟ್‌ಗೆ ಏರಿದೆ ಎಂದಿದ್ದಾರೆ.
ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೂ ೭ ತಾಸು ವಿದ್ಯುತ್ ಪೂರೈಕೆಗೆ ಆದೇಶ ನೀಡಲಾಗಿದೆ. ಬೇಸಿಗೆ ಕಾರಣದಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಾಲಿನ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಗರಿಷ್ಠ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ. ಮಳೆ ಅಭಾವದಿಂದ ಜಲಾಶಯಗಳು ನೀರನ್ನು ಬಹಳ ಎಚ್ಚರಿಕೆಯಿಂದ ಸಂರಕ್ಷಿಸಿ ಬಳಸಲಾಗುತ್ತಿದೆ. ಜಲ ವಿದ್ಯುತ್ ಉತ್ಪಾದನೆ ಕೊಂಚ ಮಟ್ಟಿಗೆ ಕುಂಠಿತಗೊಂಡಿದ್ದರೂ ಮಾರ್ಚ್ ಮತ್ತು ಏಪ್ರಿಲ್‌ನ ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ ದಿನಕ್ಕೆ ೨೦ ದಶಲಕ್ಷ ಯೂನಿಟ್ ಲಭ್ಯವಿದೆ. ಹಾಗೆಯೇ ಉತ್ತರ ಪ್ರದೇಶ, ಪಂಜಾಬ್ ರಾಜ್ಯಗಳಿಂದಲೂ ವಿದ್ಯುತ್ ವಿನಿಮಯ ಆಧಾರದ ಮೇಲೆ ಪ್ರತಿದಿನ ಸರಾಸರಿ ೯೦೦ ಮೆಗಾವ್ಯಾಟ್ ವಿದ್ಯುತ್ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿದ್ಯುತ್ ಕಾಯ್ದೆ ಸೆಕ್ಷನ್-೧೧ನ್ನು ಜಾರಿಗೊಳಿಸಿ ಖಾಸಗಿ ವಿದ್ಯುತ್ ಉತ್ಪಾದಕರಿಂದ ಪ್ರಸ್ತುತ ೫೦೦ ಮೆಗಾವ್ಯಾಟ್ ವಿದ್ಯುಚ್ಛಕ್ತಿಯನ್ನು ಪಡೆಯಲಾಗುತ್ತಿದೆ. ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಅಗತ್ಯವಿದೆ ಎಂಬುದನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟ ಕೇಂದ್ರ ಗ್ರಿಡ್‌ನಿಂದಲೂ ಈ ವರ್ಷವೂ ೩೦೨ ಮೆಗಾವ್ಯಾಟ್ ವಿದ್ಯುತ್ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯಾದ್ಯಂತ ಸಮರ್ಪಕ ವಿದ್ಯುತ್ ಸರಬರಾಜಿನ ಮೇಲ್ವಿಚಾರಣೆಗೆ ಮುಖ್ಯ ಇಂಜಿನಿಯರ್ ದರ್ಜೆಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲಾ ಎಸ್ಕಾಂಗಳ ನಿರ್ದೇಶಕರು, ಅಧಿಕಾರಿಗಳು ವಿದ್ಯುತ್ ಸರಬರಾಜಿನ ಮೇಲೆ ನಿಗಾ ವಹಿಸಿದ್ದಾರೆ ಅವರು ಹೇಳಿದ್ದಾರೆ.