ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ


ಸಂಜೆವಾಣಿ ವಾರ್ತೆ
ಹೊಸಪೇಟೆ, ಅ.12: ಜೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿರುವುದನ್ನು ಖಂಡಿಸಿ ರಾಜ್ಯ ರೈತರ ಸಂಘದ ಹಾಗೂ ಹಸಿರು ಸೇನೆಯಿಂದ ನಗರದ ಡ್ಯಾಂ ರಸ್ತೆಯಲ್ಲಿರುವ ಜೆಸ್ಕಾಂ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.
ಜೆಸ್ಕಾಂ ಕಚೇರಿಗೆ ಆಗಮಿಸಿದ ರೈತರ ಗುಂಪು ಮೊದಲು ಕಚೇರಿ ಬಾಗಿಲು ಮುಚ್ಚಲು ಯತ್ನಿಸಿದರು. ಅದಕ್ಕೆ ಪೊಲೀಸರು ಅಡ್ಡಿ ಪಡಿಸಿದ್ದರಿಂದ ಕಚೇರಿಯ ಮುಖ್ಯಗೇಟ್ ನಲ್ಲಿ ಕುಳಿತು, ಪ್ರತಿಭಟನಾ ಧರಣಿ ಆರಂಭಿಸಿದರು.
ಬರಗಾಲದ ನೆಪದಲ್ಲಿ ಬೇಡಿಕೆಗೆ ತಕ್ಕಷ್ಟು ವಿದ್ಯತ್ ಪೂರೈಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ಆದರೆ, ಇದರಿಂದಾಗಿ ಸಕಾಲಕ್ಕೆ ಬೆಳೆಗಳಿಗೆ ನೀರು ಹರಿಸಲಾಗುತ್ತಿಲ್ಲ. ಭತ್ತ, ಬಾಳೆ ಇನ್ನಿತರ ಬೆಳೆಗಳು ಬಾಡುವ ಹಂತದಲ್ಲಿವೆ. ಬೆಳೆ ಹಾನಿಯಾದರೆ, ರೈತರ ಪರಿಸ್ಥಿತಿ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ  ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಜೀರ, ನಾಡಿನ ಎಲ್ಲೆಡೆ ಮಳೆ ಕೊರತೆಯಿಂದ ಬರಗಾಲ ಆವರಿಸಿದೆ. ಈ ಭಾಗದಲ್ಲಿ ಅಲ್ಪಸ್ವಲ್ಪ ನೀರಾವರಿ ಹೊಂದಿದ್ದರಿಂದ ಭಾಗಶಃ ಬೆಳೆಗಳು ತಕ್ಕಮಟ್ಟಿಗಿವೆ. ಅವುಗಳನ್ನು ಉಳಿಸಿಕೊಳ್ಳುವುದು ಸದ್ಯದ ಸವಾಲಾಗಿದೆ.
ಒಂದೆಡೆ ಸರ್ಕಾರ ದಿನದ 7 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ನೀಡುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ, ನೈಜವಾಗಿ 3 ಗಂಟೆಯೂ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ನಿಗದಿತ ಸಮಯಕ್ಕೆ ವಿದ್ಯತ್ ಬಾರುತ್ತಿಲ್ಲ. ನಿಗದಿತ ವೋಲ್ಟ್ ಗಳಲ್ಲಿ ವಿದ್ಯುತ್ ಪ್ರವಹಿಸದ ಕಾರಣ ರೈತರ ಪಂಪ್ ಸೆಟ್ ಗಳು ನಿದಾನಗತಿಯಲ್ಲಿ ತಿರುಗಿ, ಸುಟ್ಟು ಹೋಗುತ್ತಿವೆ. ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿಯಿದ್ದರೂ,  ರೈತರು ಹಗಲಿರುಳೂ ಜಮೀನುಗಳಲ್ಲಿ ಕರೆಂಟ್ ಗಾಗಿ ಕಾಯುವ  ಅನಿವಾರ್ಯತೆ ಎದುರಾಗಿದೆ ಎಂದು ಜೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ಜೆ.ಎನ್.ಕಾಳಿದಾಸ ಮಾತನಾಡಿ, ಈ ಭಾಗದ ರೈತರ ಪರಿಸ್ಥಿತಿ ಬಹಳ ದುರ್ಬಲವಾಗಿದೆ. ನಲ್ಲಾಪುರ ಗುಂಡ್ಲವದ್ದಿಗೇರಿ, ಕಾಕುಬಾಳು, ಚಿನ್ನಾಪುರ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿಯಿದ್ದರೂ, ಬೆಳಿಗ್ಗೆ 6 ಗಂಟೆಗೆ ಸಮಯದಲ್ಲಿ ವಿದ್ಯುತ್ ನೀಡಿದರೆ ಪ್ರಾಣಹಾನಿ ನಿಲ್ಲುತ್ತದೆ. ಈ ಬೇಡಿಕೆಗೆ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ. ಇದೇ ರೀತಿ ಮುಂದುವರೆದರೆ ರೈತರು ವಿಷಾ ಕುಡಿಯುವ ಪರಿಸ್ಥಿತಿ ನಿರ್ಮಾಣ ಮಾಡಿದಂತಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

One attachment • Scanned by Gmail