
ಅಫಜಲಪುರ:ಆ.24: ಕ್ಷೇತ್ರದ ರೈತರು ವಿದ್ಯುತ್ ಅಭಾವ ಎದುರಿಸುತ್ತಿದ್ದಾರೆ. ಹೀಗಾಗಿ ಅವರ ಜಮೀನುಗಳಿಗೆ ಕೆಪಿಟಿಸಿಎಲ್ ನಿಗಮದಿಂದ ನಿಗದಿಪಡಿಸಿ ಪ್ರತಿ ದಿನ 7 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಶಾಸಕ ಎಂ.ವೈ.ಪಾಟೀಲ್ ಮನವಿ ಮಾಡಿದರು.
ಸಚಿವರಿಗೆ ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಭೀಮಾ ಏತ ನೀರಾವರಿ ಆಣೆಕಟ್ಟಿನಿಂದ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತಿದ್ದು ಅನೇಕ ಕುಡಿಯುವ ನೀರಿನ ಯೋಜನೆಗಳು ಈ ನದಿಯ ಮೇಲೆ ಅವಲಂಬನೆಯಾಗಿವೆ. ಸಮರ್ಪಕ ನೀರು ಪೂರೈಕೆಗೆ 4 ಬೃಹತ್ ಆಕಾರದ ಪಂಪ್ ಗಳನ್ನು ಅಳವಡಿಸಲಾಗಿದ್ದು ಸಮರ್ಪಕ
ವಿದ್ಯುತ್ ಪೂರೈಯಾಗದ ಹಿನ್ನೆಲೆ ಕೇವಲ ಒಂದು ಪಂಪ್ ಮಾತ್ರ ಕೆಲಸ ಮಾಡುತ್ತಿದ್ದು ಉಳಿದ 3 ಪಂಪ್ ಗಳನ್ನು ಬಂದ್ ಮಾಡಲಾಗಿದೆ.
ಅಲ್ಲದೆ ಅನೇಕ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳು ಕ್ಷೇತ್ರದಲ್ಲಿದ್ದು, ವಿದ್ಯುತ್ ಅಭಾವದಿಂದಾಗಿ ತೊಂದರೆಯಾಗಿದೆ. ಜನ ಮತ್ತು ಜಾನುವಾರುಗಳಿಗೆ ನೀರಿನ ಅಭಾವ ಕಂಡು ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ 1 ಅಥವಾ 2 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದ್ದು ರೈತರು ಬಿತ್ತಿದ ಬೆಳೆಗಳು ಸುಟ್ಟು ಹೋಗಿವೆ. ಆದ್ದರಿಂದ ಸಮರ್ಪಕ ವಿದ್ಯುತ್ ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಕೆಪಿಟಿಸಿಎಲ್ ನಿಗಮದ ಅಧಿಕಾರಿಗಳ ಜೊತೆ ದೂರವಾಣಿಯ ಮೂಲಕ ಮಾತನಾಡಿದ್ದೇನೆ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಅದನ್ನೂ ತಕ್ಷಣ ಬಗೆಹರಿಸಿ ರೈತರಿಗೆ ನಿಗಮದಿಂದ ನಿಗದಿಪಡಿಸಿದಂತೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲು ಸೂಚನೆ ನೀಡಲಾಗಿದೆ. ಈ ಸಮಸ್ಯೆ ಬಗೆಹರಿಸಿ ಇಲಾಖೆಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.
-ಕೆ.ಜೆ. ಜಾರ್ಜ್ ಇಂಧನ ಸಚಿವರು