ಕಲಬುರಗಿ,ಜೂ.6: ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳಿಗೆ ಹೆಚ್ಚಿನ ರೈಲುಗಳ ಸೌಲಭ್ಯ ಕಲ್ಪಿಸುವಂತೆ ಹಾಗೂ ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ರೈಲುಗಳ ಸೇವೆಯನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಕಾ. ಮಾರುತಿ ಮಾನ್ಪಡೆಯವರ ಅಭಿಮಾನಿಗಳ ಸೇವಾ ಸಂಘ ಹಾಗೂ ಕಲ್ಯಾಣ ಕರ್ನಾಟಕ ಜನ ಜಾಗೃತಿ ವೇದಿಕೆಯ ಪ್ರಮುಖ ಸುನೀಲ್ ಮಾನ್ಪಡೆ ಅವರು ಮಂಗಳವಾರ ಸಂಸದ ಡಾ. ಉಮೇಶ್ ಜಾಧವ್ ಅವರ ಮನೆ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಡಾ. ಉಮೇಶ್ ಜಾಧವ್ ಅವರ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದ ಅವರು, ಕಲ್ಯಾಣ ಕರ್ನಾಟಕದ ಪ್ರಮುಖ ಕೇಂದ್ರವಾಗಿರುವ ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳಿಂದ ಬದುಕಲು ಹಾಗೂ ಉದ್ಯೋಗಕ್ಕಾಗಿ ಸಾವಿರಾರು ಜನರು ವಲಸೆ ಹೋಗುತ್ತಿದ್ದು, ಅವರಿಗೆ ರೈಲುಗಳ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕೋವಿಡ್ ಪೂರ್ವದಲ್ಲಿನ ಎಲ್ಲ ರೈಲುಗಳ ಸಂಚಾರವನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿದ ಅವರು, ಅಲ್ಲದೇ ಹಳೆಯ ರೈಲುಗಳ ಬೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಈಗಿರುವ ರೈಲುಗಳಲ್ಲಿ ವಿಪರೀತ ಜನಸಂದಣಿ ಇರುವುದರಿಂದ ಬೀದರ್- ಬೆಂಗಳೂರು ಮತ್ತು ಕಲಬುರ್ಗಿ- ಬೆಂಗಳೂರು ಸೆಕ್ಟರ್ ನಡುವೆ ಪ್ರಯಾಣಿಸಲು ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕಾಯ್ದಿರಿಸಿದ ಕೋಚ್‍ಗಳಲ್ಲಿ ಪರಿಸ್ಥಿತಿ ಹೆಚ್ಚು ಕೆಟ್ಟದ್ದಾಗಿದ್ದು, ಒಂದು ಬೋಗಿಯಲ್ಲಿ 72 ಜನ ಸಂಚರಿಸಬೇಕಾದ ಬೋಗಿಯಲ್ಲಿ 150ರಿಂದ 200 ಜನರು ಸಂಚಾರ ಮಾಡುತ್ತಿದ್ದಾರೆ. ಸಾಮಾನ್ಯ ಟಿಕೆಟ್ ಪಡೆದ ಬೋಗಿಗಳು ಕಡಿಮೆ ಇದ್ದು, ಇದರಲ್ಲಿ 300ರಿಂದ 400 ಜನರು ಪ್ರಯಾಣಿಸುತ್ತಾರೆ. ಈ ಕುರಿತು ಹಲವಾರು ಮಾಧ್ಯಮಗಳಲ್ಲಿಯೂ ಸಹ ಪ್ರಸಾರಗೊಂಡಿದೆ. ಕುರಿ ಹಿಂಡುಗಳಂತೆ ಪ್ರಾಣಿಗಳ ಸ್ಥಿತಿಯಲ್ಲಿ ಜನರು ಸಂಚರಿಸುವಂತಹ ಸ್ಥಿತಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ರೈಲು ಸಂಚಾರದಲ್ಲಿ ಮಕ್ಕಳು, ಗರ್ಭೀಣಿಯರ ಹಾಗೂ ವಯಸ್ಸಾದವರ ಸ್ಥಿತಿ ಗಂಭೀರವಾಗಿದೆ. ಕಲಬುರ್ಗಿಯಿಂದ ಸಾವಿರಾರು ಜನರು ಬೆಂಗಳೂರಿಗೆ ರೈಲಿನಲ್ಲಿ ಸಂಚರಿಸುತ್ತಾರೆ. ಹೆಚ್ಚಿನವರಿಗೆ ಸಾಮಾನ್ಯ ಬೋಗಿಗಳಲ್ಲಿ ಹೆಜ್ಜೆ ಹಾಕುವುದು ದೈನಂದಿನ ಅಗ್ನಿಪರೀಕ್ಷೆಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮುಖ್ಯವಾಗಿ ಬಡ, ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದ ಜನರು ಉದ್ಯೋಗದ ಹುಡುಕಾಟದಲ್ಲಿ ಪ್ರತಿ ದಿನ ಪ್ರಯಾಣಿಸುವ ವಲಸೆ ಕಾರ್ಮಿಕರು ಒಳಗೊಂಡಿರುತ್ತಾರೆ. ಅನೇಕ ಬಡ ಕಾರ್ಮಿಕರಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಮತ್ತು ಭಾರೀ ದರಗಳನ್ನು ಪಾವತಿಸುವುದು ಅವರ ಸಾಮಥ್ರ್ಯಕ್ಕೆ ಮೀರಿದೆ. ಆದ್ದರಿಂದ ಪ್ರಧಾನಿಯವರು ಬಡವರಿಗಾಗಿ ಕಡಿಮೆ ದರದಲ್ಲಿ ಸುಖಕರ ಪ್ರಯಾಣವೆಂದು ಸುಳ್ಳು ಪ್ರಚಾರ ಬಿಟ್ಟು ವಾಸ್ತವ ಸ್ಥಿತಿ ನೋಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರಸ್ತುತ ಕಲಬುರ್ಗಿಯಿಂದ ಉದ್ಯಾನ್ ಎಕ್ಸ್‍ಪ್ರೆಸ್, ಕರ್ನಾಟಕ ಎಕ್ಸ್‍ಪ್ರೆಸ್, ಬಸವ ಎಕ್ಸ್‍ಪ್ರೆಸ್, ಸೊಲ್ಲಾಪುರ- ಹಾಸನ್ ಎಕ್ಸ್‍ಪ್ರೆಸ್ ಮತ್ತು ಕೊಯಮುತ್ತೂರು ಎಕ್ಸ್‍ಪ್ರೆಸ್ ಸೇರಿ ದಿನನಿತ್ಯ ಐದು ಎಕ್ಸ್‍ಪ್ರೆಸ್ ರೈಲುಗಳು ಬೆಂಗಳೂರಿಗೆ ಸಂಚರಿಸುತ್ತವೆ. ಈ ಮಧ್ಯೆ ಕೆಲವು, ಇತರೆ ರೈಲುಗಳಾದ ನಾಗರಕೋಯಿಲ್ ಎಕ್ಸ್‍ಪ್ರೆಸ್, ಟುಟುಕೋರಿನ್ ವಿವೇಕ್ ಎಕ್ಸ್‍ಪ್ರೆಸ್, ತಿರುವನಂತಪುರಂ ಸೆಂಟ್ರಲ್ ಎಕ್ಸ್‍ಪ್ರೆಸ್, ಎಂಜಿಆರ್ ಸೆಂಟ್ರಲ್- ತಿರುವನಂತಪುರಂ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ಮತ್ತು ಯಶವಂತಪೂರ್ ಎಕ್ಸ್‍ಪ್ರೆಸ್, ಮೈಸೂರು ಸೂಪರ್ ಪಾಸ್ಟ್ ರೈಲುಗಳು ವಾರಕ್ಕೆ ಎರಡು ಬಾರಿ ಸಂಚರಿಸುತ್ತವೆ. ಕೋವಿಡ್ ಸಾಂಕ್ರಮಿಕ ನಂತರ ಚಾಲ್ತಿಯಲ್ಲಿರುವ ಹಲವು ರೈಲುಗಳಲ್ಲಿ ಹಲವು ಕೋಚ್‍ಗಳನ್ನು ಕಡಿಮೆ ಮಾಡಲಾಗಿದ್ದು, ಮತ್ತು ಸಹಜ ಸ್ಥಿತಿಗೆ ಮರಳಿರುವುದರಿಂದ ಕೋಚ್‍ಗಳ ಸಂಖ್ಯೆಯನ್ನು ಅವುಗಳ ಮೂಲ ಸಂಖ್ಯೆಗೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.
ಬಸವಕಲ್ಯಾಣದ ಬಸವಣ್ಣನವರ ಹಾಗೂ ಅನುಭವ ಮಂಟಪದ ಕುರಿತು ಪ್ರತಿ ದಿನ ಪ್ರಧಾನಿ ಹಾಗೂ ಕೇಂದ್ರ ಸಚಿವರು ಹೇಳುತ್ತಾರೆ. ಆದಾಗ್ಯೂ, ಬೀದರ್ ಜಿಲ್ಲೆಯ ಜನರಿಗೆ ರೈಲು ಸಂಚಾರಕ್ಕೆ ವ್ಯವಸ್ಥೆ ಇಲ್ಲದೇ ಇರುವುದು ದುರದೃಷ್ಟಕರ. ಬೀದರ್- ಬೆಂಗಳೂರು ನಡುವೆ ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಾರೆ. ಈ ಎರಡೂ ನಗರಗಳಿಗೆ ಕಾಯ್ದಿರಿಸಿದ ಕೋಟಾಗಳು ಅಗತ್ಯಕ್ಕಿಂತ ಕಡಿಮೆ ಇವೆ. ಇಂತಹ ಪರಿಸ್ಥಿತಿಯಲ್ಲಿ ಕಲಬುರ್ಗಿಯಿಂದ ಎರಡು ಹೊಸ ರೈಲುಗಳ ಸೌಲಭ್ಯ ಕಲ್ಪಿಸಬೇಕು. ನಗರದಲ್ಲಿ ಇನ್ನೊಂದು ಹೊಸದಾಗಿ ರೈಲು ನಿಲ್ದಾಣ ಸ್ಥಾಪಿಸಬೇಕು ಹಾಗೂ ವಿಭಾಗೀಯ ಕಚೇರಿಯನ್ನೂ ಸಹ ಸ್ಥಾಪನೆಯ ಕುರಿತು ಹಿಂದಿನ ಆದೇಶವನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಬೀದರ್‍ನಿಂದ ಬೆಂಗಳೂರಿಗೆ ಇನ್ನೊಂದು ತುರ್ತು ರೈಲು ಸೌಲಭ್ಯ ಅಗತ್ಯವಾಗಿದೆ. ಮುಂಬಯಿ- ಪುಣೆಗೂ ಒಂದು ರೈಲು ಅಗತ್ಯವಾಗಿದೆ. ಈ ಹಿಂದೆ ಕೋವಿಡ್ ಪೂರ್ವದಲ್ಲಿ ಸಂಚರಿಸುತ್ತಿದ್ದ ಕಲಬುರ್ಗಿ- ಹೈದ್ರಾಬಾದ್ ಇಂಟರ್‍ಸಿಟಿ, ಸೊಲ್ಲಾಪುರ ಗುಂತಕಲ್ ಪ್ಯಾಸೆಂಜರ್, ಕಲಬುರ್ಗಿಯಿಂದ ಫಲಕನಾಮಾ ಪ್ಯಾಸೆಂಜರ್ ರೈಲುಗಳನ್ನು ಪುನರ್ ಆರಂಭಿಸುವಂತೆ ಒತ್ತಾಯಿಸಿದ ಅವರು, ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ ಪ್ರಜಾಪ್ರಭುತ್ವದ ಅಡಿಯಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಜಿ.ಎಂ. ಬಡಿಗೇರ್, ಜಿ. ಶಿವಶಂಕರ್, ಸಂತೋಷ್ ಮೇಲ್ಮನಿ, ಶಾಂತಪ್ಪ ಪಾಟೀಲ್ ಸಣ್ಣೂರ್, ಸೋಮಶೇಖರ್ ಸಿಂಗೆ, ಸಂಗಮೇಶ್ ಕಲಬುರ್ಗಿ, ಮಲ್ಲಿಕಾರ್ಜುನ್ ಕೆರಮಗಿ, ಮೌನೇಶ್ ಸಾತಖೇಡ್, ಹಣಮಂತ್ ಚವ್ಹಾಣ್, ಮಲ್ಲೇಶ್ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.