ಕೋಲಾರ, ಜೂ.೭- ಮುಂಗಾರು ಕೃಷಿಗೆ ಅವಶ್ಯಕತೆಯಿರುವ ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕಗಳನ್ನು ಸಮರ್ಪಕವಾಗಿ ರೈತರಿಗೆ ವಿತರಣೆ ಮಾಡಿ ಕೃತಕ ಆಭಾವ ಸೃಷ್ಟಿ ಮಾಡುವ ಖಾಸಗಿ ಅಂಗಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದಿಂದ ಕೃಷಿ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ದೇವರ ದಯೆಯಿಂದ ಈ ಭಾರಿ ರಾಜ್ಯದ ಹಲವು ಕಡೆ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ರೈತರು ತಮ್ಮ ಭೂಮಿಯನ್ನು ಉಳುಮೆ ಮಾಡಿ ಬಿತ್ತನೆಗಾಗಿ ಸನ್ನದ್ಧರಾಗಿದ್ದಾರೆ. ರೋಣಿ ಮಳೆಗೆ ಬಿತ್ತಿದರೆ ಓಣಿ ತುಂಭಾ ಜ್ಲಾಳ್ವ ಎನ್ನುವ ಗಾದೆಯಂತೆ ರೈತರು ಸಂಪ್ರದಾಯದಂತೆ ಬಿತ್ತನೆ ಮಾಡಲು ತುದಿಗಾಲಲಿದ್ದು, ಸರ್ಕಾರ ಅವಶ್ಯಕತೆಯಿರುವ ಬಿತ್ತನೆಭೀಜಗಳಿಗೆ ಯಾವುದೆ ತೊಂದರೆ ಆಗದೆ ರೀತಿ ಪ್ರತಿ ರೈತ ಸಂಪರ್ಕ ಕೇಂದ್ರದ ಮುಖಾಂತರ ರೈತರ ಮನೆಬಾಗಿಲಿಗೆ ತಲುಪಿಸಬೇಕೆಂಧು ಮನವಿ ಮಾಡಿದರು.
ಪ್ರತಿವರ್ಷ ಸರ್ಕಾರದ ಕೃಷಿ ಮಂತ್ರಿಗಳು ಬಿತ್ತನೆಬೀಜ ರಸಗೊಬ್ಬರಕ್ಕೆ ತೊಂದರೆ ಇಲ್ಲ ಅವಶ್ಯಕತೆಯಿರುವಷ್ಟು ದಸ್ತಾನು ಇದೆ ಎಂದು ಹೇಳುತ್ತಾರೆ. ಆದರೆ ಬಿತ್ತನೆ ಸಮಯದಲ್ಲಿ ಬೀಜ ಸಿಕ್ಕರೆ ಗೊಬ್ಬರ ಇಲ್ಲದಂತೆ ರೈತರು ಕೃಷಿ ಇಲಾಖೆ ಮುಂದೆ ಸರತಿ ಸಾಲಿನಲ್ಲಿ ನಿಂತು ನಾಲ್ಕೈದು ದಿನ ಕಾಯಬೇಕಾಗುತ್ತದೆ. ಆಗಲೂ ಸಿಗದೆ ಇದ್ದರೆ ರೈತರ ಆಕ್ರೋಶ ಮುಗಿಲು ಮುಟ್ಟಿದಾಗ ಲಾಠಿ ಚಾರ್ಜ್ ಗೋಲಿಬಾರ್ ಆಗಿರುವ ಉದಾಹರಣೆಗಳು ಕಣ್ಣಮುಂದೆಯೇ ಇದೆ ಎಂದು ನಿದರ್ಶನ ನೀಡಿದರು.
ಜಿಲ್ಲಾಕಾರ್ಯಾದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಬೀಜ ಮತ್ತು ರಸಗೊಬ್ಬರ ಮಾರಾಟಗಾರರು ಅಂಗಡಿ ಮುಂದೆ ರೈತರಿಗೆ ಕಾಣುವಂತೆ ದರಪಟ್ಟಿ ಮತ್ತು ದಸ್ತಾನಿನ ಬಗ್ಗೆ ಮಾಹಿತಿ ಪಲಕ ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಆದೇಶ ಮಾಡುವ ಜೊತೆಗೆ ಕೃಷಿ ಅಧಿಕಾರಿಗಳು ಖಾಸಗಿ ಅಂಗಡಿಗಳ ಮೇಲೆ ನಿಗಾ ಇಟ್ಟು ಪ್ರತಿದಿನ ದಾಸ್ತಾನು ಪರಿಶೀಲನೆ ಮಾಡಿ ಕೃತಕ ಅಭಾವ ಸೃಷ್ಠಿ ಆಗದಂತೆ ಎಚ್ಚರವಹಿಸಬೇಕು ಎಂದರು.
ಪ್ರತಿ ಖಾಸಗಿ ಅಂಗಡಿಯವರು ರೈತರು ಖರೀದಿ ಮಾಡುವ ಬಿತ್ತನೆ ಬೀಜ ರಸಗೊಬ್ಬರಕ್ಕೆ ಕಡ್ಡಾಯ ರಸೀದಿ ನೀಡುವ ಜೊತೆಗೆ ಗುಣಮಟ್ಟ ಪರೀಶೀಲನೆ ಮಾಡಿ ನಕಲಿ ಬಿತ್ತನೆ ಬೀಜದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಅಧಿಕಾರಿ ಬಿತ್ತನೆ ಬೀಜ, ರಸಗೊಬ್ಬರ ದ ಕೊರತೆ ಇಲ್ಲ ರೈತರಿಗೆ ತೊಂದರೆ ಆಗದ ರೀತಿ ಜಾಗೃತಿ ಮೂಡಿಸಿ ಕೃತಕ ಅಭಾವ ಸೃಷ್ಠಿ ಮಾಡುವ ಖಾಸಗಿ ಅಂಗಡಿಗಳ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಯಲ್ಲಪ್ಪ, ಹರೀಶ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವಣ್ಣ, ನರಸಿಂಹಯ್ಯ, ಗಿರೀಶ್, ಚಂದ್ರಪ್ಪ, ತೆರ್‍ನಹಳ್ಳಿ ಆಂಜಿನಪ್ಪ, ಮಾಸ್ತಿ ವೆಂಕಟೇಶ್, ರಾಮಸಾಗರ ವೇಣು, ಸುರೇಶ್‌ಬಾಬು, ಹಸಿರುಸೇನೆ ಜಿಲ್ಲಾದ್ಯಕ್ಷ ಕಿರಣ್, ಪಾರುಕ್‌ಪಾಷ, ಬಂಗಾರಿ ಮಂಜು, ಸುನಿಲ್‌ಕುಮಾರ್, ರಾಜೇಶ್, ಭಾಸ್ಕರ್, ಗುರುಮೂರ್ತಿ, ವಿಜಯಪಾಲ್, ಕದರಿನತ್ತ ಅಪ್ಪೋಜಿರಾವ್, ಮುಂತಾದವರಿದ್ದರು.