ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಗುಬ್ಬಿ, ಜೂ. ೧೭- ತಾಲ್ಲೂಕಿನಲ್ಲಿ ಸಮರ್ಪಕ ಬಸ್ ಸೌಕರ್ಯಕ್ಕೆ ಒತ್ತಾಯಿಸಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಸಿ.ಎಸ್. ಪುರ ಹೋಬಳಿ ಗುಬ್ಬಿ ಮತ್ತು ಸಿ.ಎಸ್.ಪುರ ಮುಖ್ಯರಸ್ತೆಯ ನರಸಿಂಹದೇವರಹಟ್ಟಿ ಗೇಟ್‌ನಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಬಸ್ ತಡೆದು ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು.
ಪ್ರತಿನಿತ್ಯವೂ ಮುಂಜಾನೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವ್ಯವಸ್ಥಿತವಾಗಿ ಬಸ್ ಸೌಕರ್ಯ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳನ್ನು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸಿ.ಎಸ್. ಪುರ ಪೊಲೀಸರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದರು. ದೂರವಾಣಿ ಮೂಲಕ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸೋಮವಾರದ ಒಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದು ಕೇವಲ ಒಂದು ದಿನದ ಸಮಸ್ಯೆ ಆಗಿದ್ದರೆ ಸುಮ್ಮನಾಗುತ್ತಿದ್ದೆವು. ವರ್ಷವಿಡೀ ಇದೇ ಸಮಸ್ಯೆಯಾದರೆ ತರಗತಿಗೆ ಹೋಗುವುದು ಹೇಗೆ..? ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿ ತೋರಿಸುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಭವ್ಯ ಬೇಸರ ವ್ಯಕ್ತಪಡಿಸಿದರು.
ಬಸ್ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಸೋಮವಾರದವರೆಗೆ ಗಡುವು ಪಡೆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.