ಸಮರ್ಥರ ಆಯ್ಕೆಗೆ ಉಮಾಪತಿ ಕರೆ

ಕನಕಪುರ.ಡಿ೮:ರಾಜ್ಯ ಒಕ್ಕಲಿಗರ ಸಂಘಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ಒಕ್ಕಲಿಗರೆ ಆಗಿದ್ದು ಅದರಲ್ಲಿ ಯಾರನ್ನು ನಿಂದನೆ ಮಾಡುವುದಿಲ್ಲ. ಯಾರಿಗೆ ಸಂಘವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ಶಕ್ತಿಯಿದೆಯೊ ಅಂತವರಿಗೆ ಮತದಾರರು ಮತ ನೀಡಬೇಕೆಂದು ಒಕ್ಕಲಿಗರ ಸಂಘದ ಅಭ್ಯರ್ಥಿ ಉಮಾಪತಿ ತಿಳಿಸಿದರು.
ಇಲ್ಲಿನ ಬಿ.ಎಂ. ಪಾರ್ಟಿಹಾಲ್‌ನಲ್ಲಿ ಒಕ್ಕಲಿಗರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ನಡೆಸಿದ ತಾಲ್ಲೂಕು ಒಕ್ಕಲಿಗ ಸಮುದಾಯದವರ ಸಭೆಯ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿರು.
ರಾಜ್ಯದಲ್ಲಿರುವ ಒಕ್ಕಲಿಗ ಸಮುದಾಯದ ಜನರ ಏಳ್ಗೆಗಾಗಿ ನಮ್ಮ ಹಿರಿಯರು ರಾಜ್ಯ ಒಕ್ಕಲಿಗರ ಸಂಘವನ್ನು ಕಟ್ಟಿದ್ದಾರೆ. ಹಲವಾರು ದಾನಿಗಳು ಸಮುದಾಯದ ಅಭಿವೃದ್ಧಿಗೆ ತನು ಮನ ಧನವನ್ನು ಕೊಟ್ಟು ಆಶೀರ್ವಧಿಸಿದ್ದಾರೆ. ಸಂಘದಲ್ಲಿ ಆಸ್ಪತ್ರೆ, ಮೆಡಿಕಲ್ ,ಇಂಜಿನಿಯರ್ ಕಾಲೇಜು, ಹಾಸ್ಟೆಲ್, ಸಾವಿರಾರು ಕೋಟಿ ಆಸ್ತಿಯಿದೆ. ಅದನ್ನು ಜೋಪಾನ ಮಾಡಬೇಕಿದೆ ಎಂದರು.
ಸಂಘವು ಸಮುದಾಯದಾಗಿದ್ದು ನಿಸ್ವಾರ್ಥತತೆಯಿಂದ ಸೇವೆ ಮಾಡುವವರು ಮತ್ತು ಹೊಸ ಚಿಂತನೆಗಳೊಂದಿಗೆ ಕೆಲಸ ಮಾಡುವವರು ಅಲ್ಲಿಗೆ ಹೋಗಬೇಕಿದೆ. ೧೪೧ ಮಂದಿ ಸ್ಪರ್ಧೆಯಲ್ಲಿದ್ದು ಯಾರು ಸಮರ್ಥರು ಅನ್ನಿಸುತ್ತದೋ ಅಂತವರಿಗೆ ಅವಕಾಶ ನೀಡಿ, ಸಮಾಜ ಸೇವೆ ಕುಟುಂಬದಿಂದಲೇ ಬಂದಿರುವ ತಮಗೆ ಒಂದು ಅವಕಾಶ ಕೊಡಬೇಕೆಂದು ಮನವಿ ಮಾಡಿದರು.
ಮುಂದೆ ಸಂಘದ ನಿರ್ದೇಶಕರಾದವರು ಪ್ರತಿ ತಾಲ್ಲೂಕಿನಲ್ಲಿ ಒಂದು ಒಕ್ಕಲಿಗರ ಸಮುದಾಯ ಭವನವನ್ನು ನಿರ್ಮಿಸಿ ಅಲ್ಲಿನ ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು, ಸಮುದಾಯದ ಜನತೆಯ ಆರೋಗ್ಯದ ಕಾಳಜಿವಹಿಸಬೇಕು. ಸಮುದಾಯದ ಜನತೆ ಚುನಾವಣೆಯಲ್ಲಿ ಯಾವುದೆ ಆಮಿಷಗಳಿಗೆ ಒಳಗಾಗದೆ ಉತ್ತಮ ಹಾಗೂ ಯೋಗ್ಯರನ್ನು ಆಯ್ಕೆಮಾಡಬೇಕೆಂದು ಮನವಿ ಮಾಡಿದರು.
ತುಂಗಣಿರವಿ, ಕುಂತಿಕಲ್‌ದೊಡ್ಡಿ ಬಸವರಾಜು, ಮುದ್ದೇಗೌಡ, ದೀಪು, ನಾಗೇಶ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.