ಸಮಯ ವ್ಯರ್ಥ ಮಾಡುವುದೇ ಜೀವನವಲ್ಲ

ಕೆಂಭಾವಿ:ಎ.9:ಸಮಯ ವ್ಯರ್ಥ ಮಾಡುವುದೇ ಜೀವನವಲ್ಲ ಸಮಯಕ್ಕೆ ಮಹತ್ವ ಕೊಟ್ಟಾಗ ನಮ್ಮ ಬದುಕು ಬಂಗಾರವಾಗುತ್ತದೆ ಎಂದು ವೇ ಮೂ ಮಲ್ಲಯ್ಯ ಸ್ವಾಮಿ ವಡಿಗೇರಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಗುರುವಾರ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ ಚಿಂತನಾ ಸಭೆ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು ನಾವು ಮಾಡುವ ಕೆಲಸ ಸತ್ಯ ಶುದ್ಧವಾಗಿರಬೇಕು, ಅಂದಾಗ ಆತ್ಮಸ್ಥೈರ್ಯ, ಆತ್ಮಸಾಕ್ಷಿ, ಆತ್ಮಾವಲೋಕನ, ಆತ್ಮಾನಂದ, ಮನೋಬಲ, ವೃದ್ಧಿಯಾಗುತ್ತದೆ. ಶಿವ ಚಿಂತನೆಯಲ್ಲಿ ತೊಡಗಿದಾಗ ಜೀವನದಲ್ಲಿ ಬರುವ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಸುಲಭ ಸಾಧ್ಯವಾಗಿ ಸನ್ಮಾರ್ಗದಲ್ಲಿ ಸಾಗಲು ಸತ್ಸಂಗ ಪ್ರೇರೇಪಣೆ ನೀಡುತ್ತದೆ ಎಂದವರು. ಶ್ರೀಮಠದ ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯರ ನೇತೃತ್ವದಲ್ಲಿ ಸಮಾಜದ ಪರಿವರ್ತನೆಗಾಗಿ ಪ್ರತಿ ತಿಂಗಳು ಜರುಗುವ ಶಿವಾನುಭವ ಗೋಷ್ಠಿ ಸುಂದರ ಸಮಾಜದ ಪ್ರತೀಕವಾಗಿದೆ ಎಂದು ಹೇಳಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇದೇ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯಪುರ ಜಿಲ್ಲಾ ಘಟಕದಿಂದ ರಾಜ್ಯ ನೇಗಿಲ ಯೋಗಿ ಪ್ರಶಸ್ತಿ ಪುರಸ್ಕøತ ಅಯ್ಯುಬ ಪಟೇಲ್ ಬಳಗಾನೂರ ಇವರನ್ನು ಶ್ರೀಮಠದಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಖ್ಯಾತ ಕಲಾವಿದರಾದ ಸೋಮನಾಥ ಯಾಳಗಿ ಹಾಗೂ ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು. ಡಾ ಯಂಕನಗೌಡ ಪಾಟೀಲ್, ನಿಜಗುಣಿ ವಿಶ್ವಕರ್ಮ, ಅಭಿಷೇಕ ಪಾಟೀಲ ಪತ್ರಕರ್ತ ಇಲಿಯಾಸ್ ಪಟೇಲ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.