ಸಮಯ ಪ್ರಜ್ಞೆ ಹಾಗೂ ಧೈರ್ಯ ತೋರಿದರೆ ಹಾನಿ ತಪ್ಪಿಸಬಹುದು

ತಿ.ನರಸೀಪುರ:ಏ:17: ಅಗ್ನಿ ಅವಘಡಗಳು ಸಂಭವಿಸಿದ ವೇಳೆ ಗಾಬರಿಯಾಗದೇ ಸಮಯ ಪ್ರಜ್ಞೆ ಹಾಗೂ ಧೈರ್ಯ ತೋರಿದರೆ ಹಾನಿ ನಿಯಂತ್ರಣ ಸಾಧ್ಯ ಎಂದು ಪಟ್ಟಣದ ಅಗ್ನಿಶಾಮಕ ಠಾಣಾಧಿಕಾರಿ ಪ್ರದೀಪ್ ಹೇಳಿದರು.
ಪಟ್ಟಣದಲ್ಲಿ ಅಗ್ನಿ ಶಾಮಕ ಸೇವಾ ಸಪ್ತಾಹ ಅಂಗವಾಗಿ ಅಗ್ನಿಶಾಮಕ ಠಾಣೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅಗ್ನಿ ಅನಾಹುತ ಮತ್ತು ಅಗ್ನಿ ದುರಂತ ತಡೆಯುವ ಬಗ್ಗೆ ಅರಿವು ಮೂಡಿಸಲು ಹಾಗೂ ಅಗ್ನಿ ಸುರಕ್ಷತಾ ಉಪಕರಣಗಳ ನಿರ್ವಹಣೆ, ಅಗ್ನಿ ಅವಘಡಗಳನ್ನು ತಗ್ಗಿಸುವ ಪ್ರಮುಖ ಸಾಧನಗಳು ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯ ಬಗ್ಗೆ ಅವರು ಮಾತನಾಡಿದರು.
ಏ.14 ರಿಂದ 20 ರವರೆಗೆ ಅಗ್ನಿಶಾಮಕ ಸೇವಾ ಸಪ್ತಾಹ ನಡೆಯಲಿದ್ದು, ಬೆಂಕಿ ಅನಾಹು ತಗಳು ನಡೆದ ವೇಳೆ ಜನರು ಕೈಗೊಳ್ಳಬೇಕಾದ ಅಗತ್ಯ ತುರ್ತು ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಸಮೀಪದ ಅಗ್ನಿಶಾಮಕ ಠಾಣೆ ಸಂಪರ್ಕಿಸಬೇಕು. ಬೆಂಕಿ ಯಾವ ಮಾದರಿಯದ್ದು ಎಂಬುದರ ಆಧಾರದ ಮೇಲೆ ಯಾವ ರೀತಿ ಬೆಂಕಿ ನಂದಿಸಬೇಕು, ಇಂಧನಗಳ ಬಂಕ್, ವಾಣಿಜ್ಯ ಕಟ್ಟಡಗಳು, ಅಡುಗೆ ಅನಿಲ ಅವಘಡಗಳು ಸಂಭವಿಸಿದಾಗ ಬಳಸಬಹುದಾದ ವಿಧಾನಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಜತೆಗೆ ಇಂಗಾಲದ ಡೈಆಕ್ಸೈಡ್ ಬಳಸಿ ಬೆಂಕಿ ಆರಿಸುವ ಬಗ್ಗೆ ಬೆಂಕಿ ನಂದಿಸುವುದರ ಜತೆಗೆ ದಾಖಲೆಗಳ ರಕ್ಷಣೆ, ಜೀವ ಹಾನಿ ತಡೆಗಟ್ಟುವುದು, ಹರಡುವಿಕೆ ನಿಯಂತ್ರಣ ಮತ್ತಿತರ ವಿಷಯ ಗಳ ಬಗ್ಗೆ ತಿಳಿಸಲಾಗುವುದು ಎಂದರು.
ಠಾಣಾ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹ ಅಗ್ನಿಶಾಮಕ ಠಾಣಾಧಿಕಾರಿ ಎಂ.ಮಹದೇವ, ಪ್ರಮುಖ ಅಗ್ನಿಶಾಮಕ ಕೆ.ವಿ ಲೋಕೇಶ್, ಯೋಗೀಶ್. ಹೆಚ್.ಎಸ್. ನಾಗರಾಜು ಸಿಬ್ಬಂದಿ ವರ್ಗದವರಾದ ನಾಗರಾಜು, ಕುಮಾರ, ಎಸ್ ಪ್ರಸಾದ್, ಜೆ. ಕಿಶೋರ್ ಇದ್ದರು.