ಸಮಯ ಪಾಲಿಸದ ಶಿಕ್ಷಕರಿಗೆ ಚಾಟಿಬೀಸಿ

ದೇವದುರ್ಗ,ಜು.೨೧-
ಶಾವಂತಗಲ್ ಸೇರಿ ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಸಮಯ ಸರಿಯಾಗಿ ಶಾಲೆಗೆ ಬಾರದ ಶಿಕ್ಷಕರಿಗೆ ನೋಟಿಸ್ ನೀಡಿ ಕ್ರಮಜರುಗಿಸುವಂತೆ ಒತ್ತಾಯಿಸಿ ಬಿಇಒ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಮಹಾದೇವಪ್ಪಗೆ ಎಸ್‌ಎಫ್‌ಐ ಮುಖಂಡರು ಗುರುವಾರ ಮನವಿ ಸಲ್ಲಿಸಿದರು.
ಸಮೀದಪ ಶಾವಂತಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರು ಸೇರಿ ಸಹಶಿಕ್ಷಕರು ಶಾಲೆಗೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ತಾಲೂಕಿನ ಬಹುತೇಕ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಇದೇ ಪರಿಸ್ಥಿತಿಯಿದೆ. ಇದರಿಂದ ಮಕ್ಕಳ ಬೋಧನೆ ಹಾಗೂ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು, ವಿದ್ಯಾರ್ಥಿಗಳ ಪಾಲಕರು ಹಲವು ಸಲ ಮನವಿಮಾಡಿದರೂ ಶಿಕ್ಷಕರು ಸುಧಾರಿಸಿಕೊಂಡಿಲ್ಲ ಎಂದು ಆರೋಪಿಸಿದರು.
ಕೂಡಲೇ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರುವಂತೆ ನೋಡಿಕೊಳ್ಳಬೇಕು. ಬೇಜವಾಬ್ದಾರಿ ತೋರುವಂಥ ಶಿಕ್ಷಕರ ವಿರುದ್ಧ ಕ್ರಮಜರುಗಿಸಬೇಕು. ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಅತಿಥಿ ಶಿಕ್ಷಕರ ನೇಮಕ ಮಾಡಬೇಕು. ಎಲ್ಲ ಮಕ್ಕಳಿಗೆ ಸಮರ್ಪಕವಾಗಿ ಕಲಿಕಾ ಉಪಕರಣಗಳನ್ನು ಒದಗಿಸಬೇಕು. ನಿರ್ಲಕ್ಷ್ಯ ಮಾಡಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಎಸ್‌ಎಫ್‌ಐ ಪದಾಧಿಕಾರಿಗಳಾದ ಬಾಷಾಸಾಬ್ ಶ್ಯಾಣೇರದೊಡ್ಡಿ, ಪಕೀರಣ್ಣ, ಶಿವರಾಜ, ತಾಯಪ್ಪ ನಾಯಕ, ಹನುಮಂತ್ರಾಯ ನಾಯಕ, ಬೀರಪ್ಪ ಪೂಜಾರಿ, ಮಾರುತಿ ಇತರರಿದ್ದರು.