ಸಮಯ ನೋಡಿ ಪ್ರಚಾರಕ್ಕೆ ಸಮಲತಾ ಬರ್ತಾರೆ: ಎಚ್.ಡಿ.ಕುಮಾರಸ್ವಾಮಿ

ಸಂಜೆವಾಣಿ ನ್ಯೂಸ್
ಮೈಸೂರು.ಏ.07:- ಸಮಯ ನೋಡಿ ಸುಮಲತಾ ಪ್ರಚಾರಕ್ಕೆ ಬರುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರಿನ ಹೆಬ್ಬಾಳದಲ್ಲಿರುವ ಬಸವಮಾರ್ಗ ವ್ಯಸನಮುಕ್ತ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಎನ್‍ಡಿಎ ಹಾಗೂ ಬಿಜೆಪಿಯನ್ನು ಸುಮಲತಾ ಬೆಂಬಲಿಸಿರುವುದು ಆ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತೆಯೇ ಆಗಲಿದೆ. ನಾವು ಅವರೊಟ್ಟಿಗೆ ಇರುವುದರಿಂದ ನಮಗೂ ಶಕ್ತಿ ಬಂದಂತೆ ಆಗಲಿದೆ. ಸಮಯ ನೋಡಿಕೊಂಡು ಅವರು ಸಹ ಮಂಡ್ಯದಲ್ಲಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ಹೇಳಿದರು.
ಹಿಂದೆ ಎನೂ ಆಗಿತ್ತು. ಆ ತಪ್ಪುಗಳನ್ನು ನೋಡಿ ದೇವೇಗೌಡರು ಆ ಸನ್ನಿವೇಶದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಈಗ ದೇಶದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಿದ್ದೇವೆ. ಈಗಿನ ದೇಶದ ವ್ಯವಸ್ಥೆಯಲ್ಲಿ ಅವರ ನಾಯಕತ್ವ ಅನಿವಾರ್ಯ ಎಂಬ ದೇಶದ ಜನರ ಭಾವನೆಗೆ ದೇವೇಗೌಡರು ಸಹಮತ ವ್ಯಕ್ತಪಡಿಸಿದ್ದಾರೆಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಟೀಕೆಗೆ ಉತ್ತರಿಸಿದರು.
ಬಸವಮಾರ್ಗಕ್ಕೆ ಎಚ್‍ಡಿಕೆ ಮೆಚ್ಚುಗೆ: ಬಸವರಾಜು ಅವರ ನೇತೃತ್ವದಲ್ಲಿ ಬಸವಮಾರ್ಗ ಸಂಸ್ಥೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಾ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿರುವುದು ಶ್ರೇಷ್ಠ ಕಾಯಕ. ಯುವ ಸಮೂಹವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಬಸವಮಾರ್ಗ ಸಂಸ್ಥೆ 38ಕ್ಕೂ ಹೆಚ್ಚಿನ ಉಚಿತ ಶಿಬಿರ ಮಾಡಿದೆ. ಎಲ್ಲರೂ ನಮ್ಮವರೇ ಎನ್ನುವ ಆಶಯ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ದಾರಿ ತಪ್ಪುತ್ತಿರುವ ಯುವ ಸಮುದಾಯವನ್ನು ಸರಿದಾರಿಗೆ ತರುವ ಕೆಲಸಕ್ಕೆ ಶುಭವಾಗಲಿ, ರಾಜ್ಯದ ಎಲ್ಲ ಕುಟುಂಬಗಳು ಸುಖ, ಶಾಂತಿಯಿಂದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಬಸವಮಾರ್ಗ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಾ.ರಾ.ಮಹೇಶ್?, ಸಿ.ಎಸ್.ಪುಟ್ಟರಾಜು, ಬಂಡೆಪ್ಪ ಕಾಶೆಂಪೂರ್, ಶಾಸಕರಾದ ಸಿ.ಎನ್.ಮಂಜೇಗೌಡ, ಮಾಜಿ ಮಹಾಪೌರ ಎಂ.ಜೆ.ರವಿಕುಮಾರ್, ಜೆಡಿಎಸ್ ಮಹಿಳಾ ಘಟಕದ ನಗರಾಧ್ಯಕ್ಷ ಪ್ರೇಮ ಶಂಕರೇಗೌಡ, ಬಸವಮಾರ್ಗ ಸಂಸ್ಥಾಪಕ ಎಸ್.ಬಸವರಾಜು, ಇಂಡಿಯನ್ ಟಿವಿ ಎಂಡಿ ಎಸ್.ವೆಂಕಟೇಶ್ ಕುಮಾರ್, ಸಿಇಒ ಎಸ್.ರಾಜು, ಜೆಡಿಎಸ್ ಮುಖಂಡ ಸಿದ್ದೇಶ್ ಇನ್ನಿತರರು ಉಪಸ್ಥಿತರಿದ್ದರು.