ಸಮಯದ ಬೆಲೆ ಮಹತ್ತರ, ಸದ್ವಿನಿಯೋಗ ಮುಖ್ಯ

ಶಿವಮೊಗ್ಗ.ಏ.೩೦; ಪ್ರತಿಯೊಬ್ಬರ ಜೀವನದಲ್ಲಿ ಸಮಯ ಬಹಳ ಮುಖ್ಯ. ಬದುಕಿನಲ್ಲಿ ಮಹತ್ತರ ಪಾತ್ರ ವಹಿಸುವ ಸಮಯದ ಸದ್ವಿನಿಯೋಗ ಮಾಡಿಕೊಂಡರೆ ಯಶಸ್ಸಿನ ಮೆಟ್ಟಿಲು ಹತ್ತಲು ಸಾಧ್ಯ ಎಂದು ರಾಷ್ಟ್ರೀಯ ತರಬೇತುದಾರ ವಿಲಿಯಂ ಡಿಸೋಜಾ ಹೇಳಿದರು.ಶಿವಮೊಗ್ಗ ನಗರದಲ್ಲಿ ರೋಟರಿ ಸಂಸ್ಥೆಯ ಸದಸ್ಯರ ಆರ್‌ಎಂಬಿ ವ್ಯವಹಾರಿಕ ಸಂಸ್ಥೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವ್ಯವಹಾರದಲ್ಲಿ ಎಲ್ಲ ಉದ್ಯಮಿಗಳು ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇದರಿಂದ ಉತ್ತಮ ಪ್ರತಿಫಲ ಸಿಗುತ್ತದೆ. ಯಾವುದೇ ಉದ್ಯಮದಾರರಿಗೆ ಮೊದಲು ಗುರಿ, ಛಲ ಪ್ರಾಮಾಣಿಕತೆ, ಮೌಲ್ಯಗಳು ಹಾಗೂ ನೈತಿಕತೆ ಬಹಳ ಮುಖ್ಯ ಆಗಿರುತ್ತವೆ. ಇದೆಲ್ಲವನ್ನು ರೂಡಿಸಿಕೊಂಡರೆ ವ್ಯವಹಾರದಲ್ಲಿ ಅಭಿವೃದ್ಧಿ ನಿಶ್ಚಿತ ಎಂದು ತಿಳಿಸಿದರು.ವ್ಯವಹಾರದಲ್ಲಿ ಗ್ರಾಹಕರೊಂದಿಗೆ, ಸಿಬ್ಬಂದಿಯೊಂದಿಗೆ ನಮ್ರತೆ, ವಿನಯತೆ ಹಾಗೂ ಸರಳತೆ ಸೌಜನ್ಯದೊಂದಿಗೆ ನಾವುಗಳು ನಡೆದುಕೊಂಡಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಯಶಸ್ವಿ ಉದ್ಯಮದಾರರು ಯಾವಾಗಲೂ ಕೆಲವು ಸೂತ್ರಗಳನ್ನು ಪಾಲಿಸಬೇಕಾಗುತ್ತದೆ. ಆಧ್ಯಾತ್ಮಿಕತೆ, ಪ್ರಸನ್ನತೆ, ತನ್ಮಯತೆ ಹಾಗೂ ನಾವು ಬೆಳೆಯುವುದರ ಜೊತೆಗೆ ಇತರನ್ನು ಬೆಳೆಸಬೇಕು ಎಂದರು.ಜವಾಬ್ದಾರಿ, ಹೊಣೆಗಾರಿಕೆ, ಪ್ರಾಮಾಣಿಕತೆ, ನಂಬಿಕೆ ಹಾಗೂ ಸಮಗ್ರತೆ ಇವೆಲ್ಲವೂ ರೂಡಿಸಿಕೊಂಡಾಗ ನಾವುಗಳು ವ್ಯವಹಾರದಲ್ಲಿ ಉನ್ನತ ಸ್ಥಾನವನ್ನು ತಲುಪಿಸುವುದು ಸುಲಭ. ನಾವು ಯಾವುದೇ ಕಾರ್ಯ ಮಾಡಿದ್ದಲ್ಲಿ ಪ್ರದರ್ಶನವಾಗಬಾರದು, ಅದು ನಿದರ್ಶನವಾಗಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಆರ್‌ಎಂಬಿ ಸಂಸ್ಥೆಯ ಅಧ್ಯಕ್ಷ ವಸಂತ್ ಹೋಬಳಿದಾರ್ ಮಾತನಾಡಿ, ಯಾವುದೇ ವ್ಯವಹಾರದಲ್ಲಿ ಪ್ರಾಮಾಣಿಕತೆ ಹಾಗೂ ಸರಳತೆ ರೂಢಿಸಿಕೊಳ್ಳಬೇಕು. ಉತ್ತಮ ವ್ಯವಹಾರಿಕ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಆರ್ ಎಂ ಬಿ ಶಿವಮೊಗ್ಗ ಸಂಸ್ಥೆಯ ಕಾರ್ಯದರ್ಶಿ ಮೋಹನ್, ಖಜಾಂಚಿ ಆನಂದ್, ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಚೇರ್ಮನ್ ವಿಜಯಕುಮಾರ್, ಮಂಜುನಾಥ ಕದಂ, ಕುಮಾರ್ ಎಸ್ ಕೆ, ರಾಕೇಶ್ ಗೌಡ ಹಾಗೂ ಎಲ್ಲ ಆರ್ ಎಂ ಬಿ ಸದಸ್ಯರು ಉಪಸ್ಥಿತರಿದ್ದರು.