ಸಮಯಕ್ಕೆ ಸರಿಯಾಗಿ ಬಸ್ ಬಿಡಲು ಆಗ್ರಹಿಸಿ ಪ್ರತಿಭಟನೆ


(sಸಂಜೆವಾಣಿ ವಾರ್ತೆ)
ಬೈಲಹೊಂಗಲ,ಜು.7: ತಾಲೂಕಿನ ಯರಡಾಲ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಬಿಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಬುಧವಾರ ಬಸ್‍ಗಳನ್ನು ಅಡ್ಡಗಟ್ಟಿ ದಿಢೀರ್ 2 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
ಸರಕಾರದ ಶಕ್ತಿ ಯೋಜನೆಯಿಂದ ಬೈಲಹೊಂಗಲ ತಾಲೂಕು ಕೇಂದ್ರದಿಂದ ಎಂ. ಕೆ. ಹುಬ್ಬಳ್ಳಿ ಹಾಗೂ ಎಂ.ಕೆ.ಹುಬ್ಬಳ್ಳಿ ಕಡೆಯಿಂದ ಬೈಲಹೊಂಗಲಕ್ಕೆ ಬರುವ ಬಸ್‍ಗಳು ಪ್ರಯಾಣಿಕರಿಂದ ತುಂಬಿ ಬರುವದರಿಂದ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಹಲವಾರು ದಿನಗಳಿಂದ ತುಂಬಾ ತೊಂದರೆಯಾಗಿದೆ.
ಯರಡಾಲದಿಂದ ನೇಗಿನಹಾಳಕ್ಕೆ, ಹಾಗೂ ಬೈಲಹೊಂಗಲಕ್ಕೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹೋಗಲು ಆಗುತ್ತಿಲ್ಲ. ನಿತ್ಯ ಸರಿಯಾಗಿ 9.30 ಗಂಟೆಗೆ ಬೈಲಹೊಂಗಲದಿಂದ ಯರಡಾಲ ಗ್ರಾಮಕ್ಕೆ ಬರಬೇಕಾದ ಬಸ್ 10 ಅಥವಾ 10.30 ಗಂಟೆಗೆ ಬರುತ್ತಿದೆ. ನೇಗಿನಹಾಳದಲ್ಲಿ ಶಾಲಾ ಕಾಲೇಜು ಬಿಟ್ಟ ನಂತರ ಯಾವದೇ ಬಸ್ ಇಲ್ಲದ ಕಾರಣ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ. ಈಗಾಗಿ ಯರಡಾಲಕ್ಕೆ ಬರಲು ಸರಿಯಾಗಿ 5-00 ಘಂಟೆಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ತೆರಳಬೇಕಾದರೆ ಶಾಲಾ, ಕಾಲೇಜು ಆರಂಭವಾಗಿ ಒಂದು ಗಂಟೆಗಳ ಬಳಿಕ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪಾಲಕರು ಹಾಗೂ ವಿದ್ಯಾರ್ಥಿಗಳು ಸುಮಾರು ಎರಡು ಗಂಟೆಗೂ ಅಧಿಕ ಕಾಲ ಬಸ್ ತಡೆಗಟ್ಟಿ ಸಂಚಾರ ತಡೆ ನಡೆಸಿ ಪ್ರತಿಭಟಿಸಿದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳ ಮನವೊಲಿಸಿ ಘಟಕ ವ್ಯವಸ್ಥಾಪಕರಿಗೆ ಕರೆ ಮಾಡಿ ಸಮಯಕ್ಕೆ ಸರಿಯಾಗಿ ಬಸ್ ಬಿಡಲು ವ್ಯವಸ್ಥೆ ಕಲ್ಪಿಸಲು ಕೋರಿಕೊಂಡರಲ್ಲದೇ ಅವರು ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.