ಸಮಯಕ್ಕೆ ಸರಿಯಾಗಿ ಪೂರೈಕೆಯಾಗದ ಬಿತ್ತನೆ ಬೀಜ

ಮುಳಬಾಗಿಲು, ಅ. ೪- ಮುಂಗಾರು ಆರಂಭಗೊಂಡು ಉತ್ತಮ ಮಳೆಯಾಗುತ್ತಿದ್ದರೂ ಸರಿಯಾದ ಸಮಯಕ್ಕೆ ಮಳೆಯಾಗದೆ ೨ ತಿಂಗಳು ಕಳೆಯುತ್ತಿದ್ದರೂ ಬಿತ್ತನೆ ಮಾತ್ರ ಶೇಕಡ ೫೦ ರಷ್ಟು ಸಾಧಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ.
ಈಗ ಎಡಬಿಡದೆ ಮಳೆಯಾಗುತ್ತಿದ್ದು ತೇವಾಂಶ ಹೆಚ್ಚಾಗಿರುವುದರಿಂದ ಇನ್ನೂ ೧೦ -೧೫ ದಿನಗಳ ಕಾಲ ಹೊಲಗಳಿಗೆ ರೈತರು ಬಿತ್ತನೆ ಕಾರ್ಯಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಇದರಿಂದ ಬಿತ್ತನೆಗೆ ಹಿನ್ನಡೆಯಾಗುತ್ತಿದೆ ಜುಲೈ ಅಂತ್ಯಕ್ಕೆ ಶೇಕಡ ೪೯.೭ ರಷ್ಟು ಮಾತ್ರ ಬಿತ್ತನೆಯಾಗಿದ್ದು ಇದರಲ್ಲಿ ನೆಲಗಡಲೆ ಬಿತ್ತನೆಯಾಗಿ ಗಿಡ ಹೂ ಬಿಟ್ಟು ಕಾಯಿಕಟ್ಟುವ ಹಂತದಲ್ಲಿದ್ದು ತೇವಾಂಶ ಹೆಚ್ಚಾದರೆ ನೀರು ಬುಡ್ಡೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಏಕದಳ ಧಾನ್ಯ ೧೨೪೭೦ ಹೆಕ್ಟೇರ್ ಪ್ರದೇಶ ಗುರಿಯಿದ್ದು ಇದರಲ್ಲಿ ೬೭೨೦ ಹೆಕ್ಟೇರ್ ಪ್ರದೇಶದಲ್ಲಿ ಮಾತ್ತ ಬಿತ್ತನೆಯಾಗಿದ್ದು ತೇವಾಂಶ ಹೆಚ್ಚಾಗಿರುವುದರಿಂದ ಬೆಳೆಗಿಂತ ಕಳೆಯೇ ಹೆಚ್ಚಾಗಿ ಬರುವ ಸಾಧ್ಯತೆಗಳು ಹೆಚ್ಚಾಗಿದ್ದು ಕಳೆ ಕೀಳಲು ಒಂದೆಡೆ ಮಳೆ ಇನ್ನೊಂದಡೆ ತೇವಾಂಶದಿಂದ ಹಿನ್ನಡೆಯಾಗಿದೆ. ದ್ವಿದಳಧಾನ್ಯ ೮೩೮ ಹೆಕ್ಟೇರ್ ಪೈಕಿ ಕೇವಲ ೩೪೮ ಹೆಕ್ಟೇರ್, ಎಣ್ಣೆಕಾಳುಗಳು ೭೨೧೬ ಹೆಕ್ಟೇರ್ ಪೈಕಿ ೪೩೨೨ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ರಾಗಿ ೧೨೪೭೦ ಹೆಕ್ಟೇರ್ ಪ್ರದೇಶದ ಪೈಕಿ ಕೇವಲ ೬೭೨೦ ಹೆಕ್ಟೇರ್ ಪ್ರದೇಶದಲ್ಲಿ ಕಳೆದ ೧ ವಾರದ ಹಿಂದೆ ಬಿತ್ತನೆ ಮಾಡಿದ್ದು ಈಗ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ತೇವಾಂಶ ಹೆಚ್ಚಾಗುವುದರ ಜೊತೆಗೆ ರಾಗಿ ಮೊಳಕೆಗಿಂತ ಕಳೆಯೇ ಹಚ್ಚಾಗಿ ಬಂದು ಕಳೆ ಕೀಳಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದ್ದು ರೈತನ ಬದುಕು ಅತಂತ್ರವಾಗಿದೆ.
ಬಿತ್ತನೆಯಾಗಿರುವ ಬೆಳೆಗಳು ಹೆಕ್ಟೇರ್‌ಗಳಲ್ಲಿ : ರಾಗಿ ೬೭೨೦, ತೊಗರಿ ೩೪೭, ಅವರೆ ೩೭, ಅಲಸಂದಿ ೧೮೯, ನೆಲಗಡಲೆ ೪೩೨೨ ಇತರೆ ಬೆಳೆಗಳು ೧೬೧ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು ಒಟ್ಟಾರೆ ತಾಲೂಕಿನಲ್ಲಿ ೨೩೯೯೩ ಹೆಕ್ಟೇರ್ ಪ್ರದೇಶದ ಗುರಿಯಲ್ಲಿ ೧೧೭೭೬ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು ಇದೇ ರೀತಿ ಮಳೆಯಾದರೆ ಬಿತ್ತನೆಯಾಗಿರುವ ಬೆಳೆಗಳು ನಷ್ಟಕ್ಕೆ ಒಳಗಾಗುವ ಸಾಧ್ಯತೆಯೂ ಅಧಿಕವಾಗಿದೆ.
ಜಿಲ್ಲೆಯ ವಿವರ: ಮುಳಬಾಗಿಲು ತಾಲೂಕಿನಲ್ಲಿ ೨೩೯೯೩ ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿಯಲ್ಲಿ ೧೧೭೭೬ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಗಿದ್ದು ಶೇಕಡ ೪೯.೭, ಬಂಗಾರಪೇಟೆಯಲ್ಲಿ ೧೪೬೧೩ ಹೆಕ್ಟೆರ್ ಪ್ರದೇಶದ ಪೈಕಿ ೬೭೪೪ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಶೇ. ೪೬.೧೫, ಕೆ.ಜಿ.ಎಫ್‌ನಲ್ಲಿ ೮೧೨೮ ಹೆಕ್ಟೇರ್ ಪ್ರದೇಶದ ಪೈಕಿ ೪೫೯೭ ಬಿತ್ತನೆಯಾಗಿದ್ದು ಶೇಕಡ ೫೬.೫೬, ಕೋಲಾರ ೧೭೯೯೩ ಹೆ. ಪೈಕಿ ೬೭೯೩ ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಶೇಕಡ ೩೭.೭೫, ಮಾಲೂರು ೧೫೦೨೦ ಹೆ.ಪೈಕಿ ೫೪೬೪ ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಶೇಕಡ ೩೬.೩೮, ಶ್ರೀನಿವಾಸಪುರ ೧೫೦೧೦ ಹೆ. ಪ್ರದೇಶದ ಪೈಕಿ ೩೧೫೯ ಬಿತ್ತನೆಯಾಗಿದ್ದು ಶೇಕಡ ೨೧.೦೫ ರಷ್ಟು ಬಿತ್ತನೆಯಾಗಿದ್ದು ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ೪೦.೬೬ ರಷ್ಟು ಮಾತ್ರ ಬಿತ್ತನೆಯಾಗಿದೆ.
ಮಳೆಯ ವಿವರ: ಮುಳಬಾಗಿಲಿನಲ್ಲಿ ಜನವರಿ ೧ ರಂದು ೯.೬ ಮಿ.ಮೀ, ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಮಳೆಯಾಗಿಲ್ಲ, ಏಪ್ರಿಲ್‌ನಲ್ಲಿ ೨ ದಿನ ಮಳೆಯಾಗಿದ್ದು ೧೦.೨ ಮಿ.ಮೀ, ಮೇ ತಿಂಗಳಲ್ಲಿ ೧೧ ದಿನ ಮಳೆಯಾಗಿದ್ದು ೧೫೯.೨ ಮಿ.ಮೀ, ಜೂನ್‌ನಲ್ಲಿ ೯ ದಿನ ಮಳೆಯಾಗಿದ್ದು ೧೩೦.೨ ಮಿ.ಮೀ, ಜುಲೈ ೧ ರಿಂದ ೨೦ ರವರೆಗೂ ೭ ದಿನ ಮಳೆಯಾಗಿ ಕೇವಲ ೩೬ ಮಿ.ಮೀ ಮಳೆಯಾದರೆ ಜುಲೈ ೨೭ ರಂದು ಒಂದೇ ದಿನ ೧೧೪.೨ ಮಿ.ಮೀ, ೩೧ ರಂದು ೬೫ ವಿ.ಮೀ ಮಳೆಯಾಗಿ ಒಟ್ಟಾರೆ ಜುಲೈ ತಿಂಗಳಲ್ಲಿ ೨೧೫ ಮಿ.ಮೀ ಮಳೆ ದಾಖಲಾಗಿದೆ.
ಆಗಸ್ಟ್ ೧ – ೭೨ ಮಿ.ಮೀ, ಆ ೨- ೧.೨ ಮಿ.ಮೀ ಮಳೆಯಾಗಿದ್ದು, ಬುಧವಾರವೂ ಉತ್ತಮ ಮಳೆಯಾಗುತ್ತಿದೆ.
ಪ್ರತಿಕ್ರಿಯೆ:
ಮಳೆಉತ್ತಮವಾಗಿ ಆಗುತ್ತಿದ್ದು ಬಿತ್ತನೆ ಸಂದರ್ಭದಲ್ಲಿ ಮಳೆ ಬಾರದೆ ಇದ್ದಿದ್ದು ಈಗ ಮಳೆಯಾಗುತ್ತಿದ್ದರೂ ತೇವಾಂಶ ಹೆಚ್ಚಾಗಿರುವುದರಿಂದ ಬಿತ್ತನೆ ಪ್ರಮಾಣ ಕಡಿಮೆಯಿದ್ದು ಮಳೆ ನಿಂತ ತಕ್ಷಣವೇ ರಾಗಿ ಬಿತ್ತನೆ ನಡೆಯಲಿದೆ ನೆಲಗಡಲೆ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆ ಕಾಲಾವದಿ ಮುಗಿದಿದೆ.

  • ಎಸ್.ರವಿಕುಮಾರ್, ಸಹಾಯಕ ನಿರ್ದೇಶಕ ಕೃಷಿ ಇಲಾಖೆ. ಮುಳಬಾಗಿಲು.

  • ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ರಾಗಿ, ಅಲಸಂದಿ ಸೇರಿದಂತೆ ಈಗ ಬೇಕಾಗಿರುವ ಬಿತ್ತನೆ ಕಾಳುಗಳ ದಾಸ್ತಾನು ಇದ್ದು ಮಳೆ ನಿಂತ ತಕ್ಷಣ ಬಿತ್ತನೆ ಪ್ರಮಾಣ ಹೆಚ್ಚಾಗಲಿದೆ.
  • ಬಿ.ಎಂ.ಶುಭ, ಸಹಾಯಕ ಕೃಷಿ ಅಧಿಕಾರಿ ಮುಳಬಾಗಿಲು.