ಸಮಯಕ್ಕೆ ಬೆಲೆ ಕೊಡುವವರನ್ನು ಇಡೀ ಜಗತ್ತು ಗುರುತಿಸುತ್ತದೆ: ಸೂಲಿಬೆಲೆ

ವಿಜಯಪುರ:ಡಿ.27:ಸಮಯವನ್ನು ಯಾರು ಪರಿಪಾಲನೆ ಮಾಡುತ್ತಾರೆ, ಯಾರು ಸಮಯಕ್ಕೆ ಬೆಲೆ ಕೊಡುತ್ತಾರೊ ಅಂತಹವರನ್ನು ಇಡೀ ಜಗತ್ತೆ ಗುರುತಿಸುವಂತಹ ಸಮಯ ಬರುತ್ತದೆ ಎಂದು ಶ್ರೀ ಸಿದ್ಧೇಶ್ವರ ಅಪ್ಪನವರು ಸದಾ ಹೇಳುತ್ತಿದ್ದರು ಎಂದು ಖ್ಯಾತ ವಾಗ್ಮಿ ಹಾಗೂ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ “ಸ್ವಚ್ಛತೆ-ಸಮಯ ಪಾಲನೆ-ವ್ಯಸನಮುಕ್ತಿ” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ 4ನೇ ಗೋಷ್ಠಿಯಲ್ಲಿ ತಮ್ಮ ಅನುಭಾವದ ನುಡಿಗಳನ್ನಾಡಿದರು.

ಜ್ಞಾನಯೋಗಾಶ್ರಮದಲ್ಲಿ ಮಾತ್ರ ಅಲ್ಲ. ಎಲ್ಲ ಭಕ್ತ ವೃಂದದ ಹೃದಯದಲ್ಲೂ ಶ್ರೀ ಸಿದ್ಧೇಶ್ವರ ಅಪ್ಪನವರು ನೆಲೆಸಿದ್ದಾರೆ. ಅವರು ನಮ್ಮನ್ನು ಅಗಲಿ ಎಷ್ಟು ಬೇಗ ಒಂದು ವರ್ಷ ಉರುಳಿತು ಗೊತ್ತೆ ಆಗಲಿಲ್ಲ. ಅದಕ್ಕೆ ಸಮಯ ಬಹಳ ಮುಖ್ಯವಾದದ್ದು ಅದನ್ನು ನಾವು ಅರಿತುಕೊಳ್ಳಬೇಕು ಎಂದರು.

ಅವರ ಸಾನಿಧ್ಯವಹಿಸಿದ್ದಾಗ ಶಾಂತಿಯನ್ನು ಹುಡುಕುವ ಪ್ರಮೇಯ ಇರುತ್ತಿರಲಿಲ್ಲ ಸಹಜವಾಗಿ ಆ ವಾತಾವರಣ ಶಾಂತವಾಗುತ್ತಿತ್ತು. ಅದು ಅಪ್ಪನವರ ವ್ಯಕ್ತಿತ್ವಕ್ಕೆ ಇದ್ದ ಶಕ್ತಿ. ಅವರ ಜೊತೆ ಐದು ನಿಮಿಷ ಮಾತನಾಡಿದರು ಸಾಕು ನಮ್ಮ ತಲೆಯಲ್ಲಿ ಹೊಸ ಚಿಂತನೆಗಳನ್ನು ಬಿತ್ತುತ್ತಿದ್ದರು. ಅವರ ಜೊತೆಯಲ್ಲಿದ್ದಷ್ಟು ಸಮಯ ನಾನು ಬಹಳ ಆನಂದದಿಂದ ಹೆಮ್ಮೆಯಿಂದ ಕಳೆದಿದ್ದೇನೆ. ವಿಜಯಪುರದ ಜನರನ್ನು ಕಂಡರೆ ನನಗೆ ಸದಾ ಹೊಟ್ಟೆ ಉರಿ ಏಕೆಂದರೆ ಸದಾ ನೀವು ದೇವರ ಜೊತೆ ಇದ್ದದ್ದೇ ನಿಮ್ಮ ಪುಣ್ಯ. ಅವರು ಎಂದಿಗೂ ನಮ್ಮೊಂದಿಗೆ ಇರಬೇಕು ಎಂಬ ಆಶಯ ನಮ್ಮೆಲ್ಲರದು. ಆದರೆ ಏನು ಮಾಡುವುದು ಕಾಲವನ್ನು ಯಾರು ತಡೆಯಲು ಸಾಧ್ಯವಿಲ್ಲ. ನಾವು ಕಾಲದ ಹಿಂದೆ ಓಡಬೇಕು. ಸಮಯ ಎನ್ನುವುದು ರಾಮನನ್ನು ಕಾಯಲಿಲ್ಲ, ಕೃಷ್ಣನನ್ನು ಕಾಯಲಿಲ.್ಲ ಯಾರನ್ನು ಕಾಯಲಿಲ್ಲ. ಎಷ್ಟೇ ಶ್ರೀಮಂತರಿರಲಿ, ಬಡವರಿರಲಿ ಅದು ನಿಲ್ಲುವುದಿಲ್ಲ. ಅದು ತನ್ನ ಪಾಡಿಗೆ ತಾನು ಸದಾ ಚಲಿಸುತ್ತಲೇ ಇರುತ್ತದೆ. ಎಲ್ಲಿ ಕಾಲದ ಜೊತೆ ನಾವು ಸಮಯ ಪರಿಪಾಲನೆ ಮಾಡುತ್ತೇವೆಯೊ ಎಲ್ಲಿ ಕಾಲದ ಜೊತೆ ನಿರಂತರತೆ ಇರುತ್ತದೆಯೊ ಅಲ್ಲಿ ಖಂಡಿತ ದೇವರಿರುತ್ತಾನೆ. ಅದರಂತೆ ಶ್ರೀ ಸಿದ್ಧೇಶ್ವರ ಅಪ್ಪನವರು ತಮ್ಮ ಜೀವನದೂದ್ದಕ್ಕೂ ಸಮಯವನ್ನು ಪರಿಪಾಲನೆ ಮಾಡಿದಂತವರು ಎಂದರು.

ದೇವರ ಸ್ವರೂಪಿ ಶ್ರೀ ಸಿದ್ಧೇಶ್ವರ ಅಪ್ಪನವರು ಇರುವಷ್ಟು ದಿನದಲ್ಲಿ ನಾವು ಹೇಗೆ ಬದುಕಬೇಕು. ಸಿಕ್ಕ ಸಮಯವನ್ನು ಹೇಗೆ ಬಳಸಿಕೊಳ್ಳಬೇಕು. ಇಲ್ಲಿಗೆ ಬಂದ ನಮ್ಮ ಉದ್ದೇಶವೇನು ಕೊನೆಗೆ ನಾವು ಹೋಗಬೇಕಾದದ್ದು ಎಲ್ಲಿಗೆ ಎಂದು ಅರ್ಥಪೂರ್ಣವಾಗಿ ತಮ್ಮ ಜೀವನದೂದ್ದಕ್ಕೂ ತಿಳಿಸಿದ್ದಾರೆ. ಸಮಯದ ಪ್ರಾಮುಖ್ಯತೆ ಬಗ್ಗೆ ತಿಳಿಸಿದ್ದಾರೆ. ಅದರ ಅರಿವು ನಮಗೆಲ್ಲ ಇಂದು ಅರ್ಥವಾಗುತ್ತದೆ ಎಂದರು.

ನಮ್ಮ ನಿಜವಾದ ಮನೆ ಮೇಲಿದೆ. ಆದರೆ ನಾವೆಲ್ಲ ಇಲ್ಲಿ ಭೂಮಿ ಮೇಲೆ ಕಟ್ಟಿದ ಮನೆಯೆ ನಮ್ಮ ಸ್ವಂತ ಮನೆ, ಸ್ವಂತ ಊರು ಅಂದುಕೊಂಡಿದ್ದೇವೆ ಅದು ನಿಜವಲ್ಲ ನಿಜವಾದ ನಮ್ಮ ಮನೆ ಇರುವುದು ಮೇಲೆ ಅದನ್ನು ನಾವು ಅರಿತುಕೊಂಡು ಬದುಕಬೇಕು. ಇಲ್ಲಿ ನಾವಿರುವುದು ಬರೀ ಕ್ಷಣಿಕ ಮಾತ್ರ ಹುಟ್ಟು-ಸಾವಿನ ನಡುವೆ ಇರುವ ಅವಧಿಗಷ್ಟೆ ಈ ಭೂಮಿ ಮೇಲಿರುವ ಮನೆ ನಮ್ಮದು ಇದನ್ನೆಲ್ಲ ನಾವು ತಿಳಿಯಬೇಕು ಎಂದರು. ನಾವು ಬಂದಿದ್ದೇಕೆ ಎನ್ನುವುದನ್ನು ತಿಳಿದುಕೊಳ್ಳಬೇಕು. ನಾವು ಹಾದಿ ತಪ್ಪಿ ಇಲ್ಲಿ ಬಂದಿದ್ದೇವೆ. ಇಲ್ಲಿ ಬಂದವರಿಗೆಲ್ಲ ಗುರುವಾಗಿ ಹಾದಿ ತೋರಿಸಿದವರು ಶ್ರೀ ಸಿದ್ಧೇಶ್ವರ ಅಪ್ಪನವರು. ಯಾರು ಅವರ ಚರಣದಡಿ ಬಂದು ಅವರ ತತ್ವಗಳನ್ನು ಪಾಲಿಸಿದ್ದಾರೊ ಅವರಿಗೆಲ್ಲ ನಿಜವಾದ ಮನೆಯ ವಿಳಾಸ ತಿಳಿದಿರುತ್ತದೆ ಎಂದರು.

ಶ್ರೀ ಸಿದ್ಧೇಶ್ವರ ಅಪ್ಪಾಜಿಯವರು ತರುಣರೊಂದಿಗೆ ಸಮಾಜವನ್ನು ನಿರ್ಮಿಸುವಲ್ಲಿ ಸದಾ ಮುಂದಿರುತ್ತಿದ್ದರು. ಯುವಕರಲ್ಲಿ ಅವರ ಜವಬ್ದಾರಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದರು. ಅವರು ಎಲ್ಲಿಯೇ ಹೋಗಲಿ ಪ್ರವಚನ ನೀಡಲಿಕ್ಕೆ ಅಲ್ಲಿದ್ದ ಯುವಕರಲ್ಲಿ ಹೊಸ ಚೈತನ್ಯವನ್ನು ಹುಟ್ಟು ಹಾಕುತ್ತಿದ್ದರು. ಸಮಾಜವನ್ನು ಕಟ್ಟುವಲ್ಲಿ ಯುವಜನತೆಯನ್ನು ಪ್ರೇರೆಪಿಸುತ್ತಿದ್ದರು ಅಷ್ಟೊಂದು ಮಹಾನ್ ಶಕ್ತಿ ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಹತ್ತಿರ ಇತ್ತು ಎಂದು ನುಡಿದರು.

ಇನ್ನು ಶ್ರೀಗಳು ನಾವು ಯಾವಾಗಲೂ ವ್ಯಸನಮುಕ್ತ ಸಮಾಜವನ್ನು ಕಟ್ಟಬೇಕು ಎಂದು ಹೇಳುತ್ತಿದ್ದರು. ಆದರೆ ಈಗನ ತರುಣ ಪೀಳಿಗೆ ಎಷ್ಟು ಚಟಕ್ಕೆ ದಾಸರಾಗಿದ್ದಾರೆ ಎಂದರೆ ಗುಟುಕಾ ಬಿಡಿ ಎಂದರೆ ಏನು ಬೇಕಾದರು ಬಿಡುತ್ತೀನಿ ಗುಟಕಾ ಬಿಡುವುದಿಲ್ಲ ಎನ್ನುತ್ತಾರೆ. ಈಗಿನ ಸಣ್ಣ ಮಕ್ಕಳನ್ನು ನೋಡಿ ಸದಾ ಮೊಬೈಲ್ ಹಿಡಿದುಕೊಂಡು ಇರುತ್ತಾರೆ. ಆ ಮಕ್ಕಳಿಗೆ ಕೇಳಿ ತಾಯಿ ಅಪ್ಪುಗೆಯಲ್ಲಿ ಸುಖವಿದೆಯೋ ಅಥವಾ ಮೊಬೈಲ್‍ನಲ್ಲಿ ಇದೆಯೊ ಎಂದರೆ ಮಕ್ಕಳು ಹೇಳುತ್ತಾರೆ ಮೊಬೈಲ್‍ನಲ್ಲಿ ಎಂದು ಉತ್ತರ ಕೊಡುತ್ತಾರೆ. ಎಲ್ಲಿ ಸಾಗುತ್ತಿದೆ ಸಮಾಜ, ಮತ್ತು ನಮ್ಮ ಮಕ್ಕಳು ಎಂದು ಚಿಂತಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಆದರೆ ಇದಕ್ಕೆಲ್ಲ ಕಾರಣ ತಂದೆ-ತಾಯಂದಿರೆ. ನಾವು ಹೇಗೆ ಬೆಳೆಸುತ್ತೆವೊ ಹಾಗೆ ನಮ್ಮ ಮಕ್ಕಳು ಬೆಳೆಯುತ್ತವೆ. ಅವರ ಅಭಿವೃದ್ಧಿಗೂ ಮತ್ತು ಅವರ ಅವನತಿಗೂ ನಾವೇ ಕಾರಣ. ಬರೀ ನಾವು ಮಕ್ಕಳನ್ನು ತೆಗಳುವುದರಿಂದ ಉಪಯೋಗವಿಲ್ಲ ಬದಲಾವಣೆ ಬರಬೇಕಿದೆ. ಪ್ರತಿ ಮನೆಯೂ ಸಹ ನಮ್ಮ ಮಕ್ಕಳನ್ನು ತಯಾರ ಮಾಡುವ ಫ್ಯಾಕ್ಟರಿಗಳಾಗಬೇಕು. ಪ್ರತಿ ತಂದೆ ತಾಯಿಯೂ ತಮ್ಮ-ತಮ್ಮ ಮಕ್ಕಳನ್ನು ಕೆಟ್ಟ ಚಟಗಳಿಗೆ ಬಲಿಯಾಗದಂತೆ ನೋಡಿಕೊಂಡು ಅವರನ್ನು ಸಮಾಜ ಕಟ್ಟುವಲ್ಲಿ, ಸಾಧನೆ ಮಾಡುವಲ್ಲಿ ಅವರನ್ನು ಸಮಾಜ ಕಟ್ಟುವ ನಿರ್ಮಾಪಕರನ್ನಾಗಿ ಬೆಳೆಸಬೇಕು. ಅಂದಾಗ ಮಾತ್ರ ಶ್ರೀ ಸಿದ್ಧೇಶ್ವರ ಆಶಯ ಪೂರ್ಣವಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ನಿಡಸೋಸಿ ಜಗದ್ಗುರು ಶ್ರೀ ದುರುದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ಪೂಜ್ಯ ಶ್ರೀ ನಿಜಲಿಂಗೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ಸಿದ್ಧೇಶ್ವÀರ ಅಪ್ಪನವರಿಗೆ ಸ್ವಚ್ಛತೆ ಬಗ್ಗೆ ವಿಶೇಷವಾದ ಕಾಳಜಿ ಇತ್ತು. ಎಲ್ಲೆಡೆಯೂ ಸ್ವಚ್ಛತೆಯನ್ನು ಬಯಸುತ್ತಿದ್ದರು. ಅವರು ಯಾವಾಗಲೂ ಜನರ ಮನಸ್ಸು ಸ್ವಚ್ಛವಾಗಿರಬೇಕು, ಮನೆಯೂ ಸ್ವಚ್ಛವಾಗಿರಬೇಕು, ಊರು ಸ್ವಚ್ಛವಾಗಿರಬೇಕು ಎಂದು ತಮ್ಮ ಮಾತುಗಳಲ್ಲಿ ಹೇಳುತ್ತಿದ್ದರು ಎಂದು ಹೇಳಿದರು.

ಯುವಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅಪ್ಪನವರು ಅವರು ಮಾಡಬೇಕಾದ ಕೆಲಸ, ಜವಾಬ್ದಾರಿಗಳ ಬಗ್ಗೆ ಸದಾ ಜಾಗೃತಿ ಮೂಡಿಸುವಂತಹ ಕೆಲಸ ಮಾಡಿದ್ದಾರೆ. ಸದಾ ತಮ್ಮ ಮಾತುಗಳಲ್ಲಿ ಯುವಕರು ಸ್ವಚ್ಛತೆಗೆ, ಸಮಯ ಪಾಲನೆಗೆ ಒತ್ತು ನೀಡಬೇಕೆಂದು ಹೇಳುತ್ತಿದ್ದರು. ಅವರ ತತ್ವಗಳನ್ನು ಪಾಳಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಸ್ವಚ್ಛತೆ, ಸಮಯ ಪಾಲನೆ, ಹಾಗೂ ವ್ಯಸನಮುಕ್ತ ಸಮಾಜಕ್ಕೆ ಶ್ರೀ ಸಿದ್ಧೇಶ್ವರ ಅಪ್ಪನವರು ಸದಾ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು. ಸ್ವಸ್ಥ ಸಮಾಜ ಅಭಿವೃದ್ಧಿಯ ಪಥವನ್ನು ಪ್ರಾರಂಭಿಸುತ್ತದೆ. ನಾವು ನಮ್ಮ ಜೀವನದಲ್ಲಿ ಸಮಯ ಪಾಲನೆ, ಮತ್ತು ಯುವಕರು ಚಟಗಳಿಂದ ದೂರವಿರಬೇಕು. ನಮ್ಮ ಪರಿಸರ, ಸಮಾಜವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವ ಮೂಲಕ ಉತ್ತಮ ಸಮಾಜ, ಸದೃಢÀ ಸಮಾಜದ ನಿರ್ಮಾಣಕ್ಕೆ ಕಾರಣಿಕರ್ತರಾಗಬೇಕು ಎಂದು ಹೇಳಿದರು.

ಜಂಬುನಾಥ ಕಂಚ್ಯಾಣಿ ಸ್ವಾಗತಿಸಿ ಪರಿಚಯಿಸಿದರು, ಪೂಜ್ಯ ಶ್ರೀ ಶರಣಾನಂದ ಮಹಾಸ್ವಾಮೀಜಿ ನಿರೂಪಿಸಿದರು.