ಸಮನ್ವಯ ಸಾಧಿಸಿ ಕೌಶಲ್ಯ ತರಬೇತಿ ನೀಡಿ – ಕರಾಳೆ

ಧಾರವಾಡ, ಮಾ. 31: ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಸಲಹೆಯ ಅನುಗುಣವಾಗಿ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕೈಗಾರಿಕೆಗಳಲ್ಲಿ ಉದ್ಯೋಗಿಗಳು ಅಗತ್ಯವಿರುವ ವಿಭಾಗಗಳನ್ನು ಗುರುತಿಸಿ ಅವುಗಳ ಜೊತೆಗೆ ಉದ್ಯೋಗಾಕಾಂಕ್ಷಿಗಳನ್ನು ಹೊಂದಿಕೆಮಾಡಿ ಸಂಪನ್ಮೂಲ ವ್ಯಕ್ತಿಗಳ ಸಮನ್ವಯದೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕಾರ್ಯ ಅನುಷ್ಠಾನವಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯ ಮಿಷನ್ ತ್ರೈಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಜಿಲ್ಲೆಯಲ್ಲಿ ಕೌಶಲ್ಯಾಭಿವೃಧ್ಧಿ ತರಬೇತಿ ಕಾರ್ಯಗಳನ್ನು ಚುರುಕುಗೊಳಿಸಲು ರಚಿಸಿರುವ ಯೋಜನೆ, ಮಾಹಿತಿ ಕ್ರೋಢೀಕರಣ, ಕೌನ್ಸೆಲಿಂಗ್, ತರಬೇತಿ, ಸ್ವಯಂ ಉದ್ಯೋಗ, ಕೈಗಾರಿಕಾ ಉದ್ಯೋಗಗಳು, ಗ್ರಾಮಪಂಚಾಯತಿಗಳೊಂದಿಗೆ ಸಮನ್ವಯ, ಕೃಷಿ, ಸಣ್ಣ ಕೈಗಾರಿಕೆಗೆ ಹೀಗೆ ವಿವಿಧ ವಲಯಗಳನ್ನು ಒಗ್ಗೂಡಿಸಿ ಸಂಬಂಧಿಸಿದ ಇಲಾಖೆಯಿಂದ ಹಿಮ್ಮಾಹಿತಿ ಪಡೆದು ಜಿಲ್ಲಾ ಕೌಶಲ್ಯ ಯೋಜನೆ ರೂಪಿಸಬೇಕು.
ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿ ಕ್ಷೇತ್ರವಾರು ಉದ್ಯೋಗಗಳ ಪಟ್ಟಿಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ.ಎಚ್.ಚಂದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 45,201 ಅಭ್ಯರ್ಥಿಗಳು ಕೌಶಲ್ಯ ಅಭಿವೃದ್ಧಿ ತರಬೇತಿಗಾಗಿ ತಿತಿತಿ.ಞoushಚಿಟಞಚಿಡಿ.ಛಿom ವೆಬ್ ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆ, ಆತ್ಮನಿರ್ಭರ್, ಸಂಜೀವಿನಿ, ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಹಾಗೂ ಪ್ರಧಾನಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ದೀನದಯಾಳ ಅಂತ್ಯೋದಯ ಯೋಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಪ್ರಗತಿ ಮಾಹಿತಿಯನ್ನು ಸಭೆಗೆ ನೀಡಿದರು.

ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್.ಮೂಗನೂರಮಠ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಘಾಳಿ ಮತ್ತಿತರು ಉಪಸ್ಥಿತರಿದ್ದರು.