
ಕಲಬುರಗಿ:ಜು.03:ಯಾವುದೇ ಜಾತಿ, ಧರ್ಮ, ಪ್ರದೇಶ ದೊಡ್ಡದಲ್ಲ. ಬದಲಿಗೆ ಮಾನವೀಯತೆಯಿಂದ ಬದುಕುವದೇ ಶ್ರೇಷ್ಠ ಜೀವನವಾಗುತ್ತದೆ ಎಂದು ಪ್ರತಿಯೊಬ್ಬರು ಸೌಹಾರ್ಧತೆಯುತವಾಗಿ ಬದುಕುವ ಕಲೆಯನ್ನು ಸಾರಿದ ಸಂತ ಶಿಶುನಾಳ ಶರೀಫರು ಸಮನ್ವಯತೆಯ ಸಾಕಾರ ಮೂರ್ತಿಯಾಗಿ ಕಂಡುಬರುತ್ತಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ಶ್ರೇಷ್ಠ ಸಂತ ಶಿಶುನಾಳ ಶರೀಫ್‍ರ ಜನ್ಮದಿನಾಚರಣೆ, ಸ್ಮರಣೋತ್ಸವದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಕೋಮು ಸಂಘರ್ಷಗಳುಂಟಾಗಿ ವಿಷಮಯ ವಾತವಾರಣವಾಗುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಶರೀಫರ ತತ್ವಗಳು ಔಷಧದಂತೆ ಕಾರ್ಯನಿರ್ವಹಿಸುತ್ತವೆ. ಇವರನ್ನು ‘ಕರ್ನಾಟಕದ ಕಬೀರ’, ‘ಜಾನಪದ ಸಂತ ಕವಿ’, ‘ಭಾವೈಕ್ಯತೆಯ ಹರಿಕಾರ’ ಎಂಬ ಮುಂತಾದ ಹೆಸರುಗಳಿಂದ ಕರೆಯುವದನ್ನು ಗಮನಿಸಿದರೆ, ಅವರ ಮೇರು ವ್ಯಕ್ತಿತ್ವ ನಮಗೆ ಕಂಡುಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ಎಸ್.ಘತ್ತರಗಿ, ಕ.ರಾ.ಪ್ರಾ.ಶಾ.ಶಿ.ಸಂಘದ ರಾಜ್ಯ ಕಾರ್ಯದರ್ಶಿ ಪರಮೇಶ್ವರ ಬಿ.ದೇಸಾಯಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಉಪನ್ಯಾಸಕರಾದ ಅಶ್ವಿನಿ ಜೆ.ಪಾಟೀಲ, ಅರ್ಚನಾ ಎಂ.ಹೀರಾಪುರ ಹಾಗೂ ವಿದ್ಯಾರ್ಥಿಗಳಿದ್ದರು.