ಸಮನ್ವಯತೆಯಿಂದ ನಿಗದಿತ ಗುರಿ ಸಾಧಿಸಿ: ಜಿಲ್ಲಾಧಿಕಾರಿ

ಧಾರವಾಡ, ಡಿ.29- ಜಿಲ್ಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ಪುರಸ್ಕøತ ಅನೇಕ ಕಾಮಗಾರಿ, ಯೋಜನೆಗಳು ಅನುಷ್ಠಾನದಲ್ಲಿದ್ದು, ಇಲಾಖಾ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೂಡಿ ಕೆಲಸ ಮಾಡಿ, ನಿಗದಿತ ಪೂರ್ಣ ಗುರಿ ಸಾಧಿಸಬೇಕು. ಕಾಮಗಾರಿ ಮತ್ತು ಯೋಜನೆಗಳ ಪ್ರಗತಿಯನ್ನು ನಿರಂತರವಾಗಿ ನಿಗಾವಹಿಸಲು ಹಾಗೂ ಇಲಾಖೆಗಳಲ್ಲಿ ಸಮನ್ವಯ ಸಾಧಿಸಲು ಪ್ರತಿ ತಿಂಗಳ ನಾಲ್ಕನೇಯ ಸೋಮವಾರ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಸಭೆ ಜರುಗಿಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗದಲ್ಲಿ ಜಿಲ್ಲೆಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಜಿಲ್ಲೆಯಲ್ಲಿ ಲೊಕೋಪಯೋಗಿ, ಜಲಮಂಡಳಿ, ರೈಲ್ವೆ, ಸ್ಮಾರ್ಟ ಸಿಟಿ, ಬಿ.ಆರ್.ಟಿ.ಎಸ್, ಕೆ.ಯು.ಐ.ಡಿ.ಎಫ್.ಸಿ, ಕೆ.ಐ.ಡಿ.ಬಿ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ರಸ್ತೆ, ಕುಡಿಯುವ ನೀರು, ಸಾರಿಗೆ ಸಂಚಾರ, ವಿದ್ಯುತ್, ರಾಷ್ಟ್ರೀಯ ಹೆದ್ದಾರಿ, ಸೇತುವೆ ಮುಂತಾದ ಮೂಲಸೌಕರ್ಯಗಳ ನಿರ್ಮಾಣ ಹಾಗೂ ಉನ್ನತಿಕರಣದ ಕಾಮಗಾರಿಗಳು ನಡೆಯುತ್ತಿವೆ.
ಅಧಿಕಾರಿಗಳು ಯೋಜನಾ ಅವಧಿಯಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಸ್ಥಳೀಯವಾಗಿ ಅನುಷ್ಠಾನ ಹಂತದಲ್ಲಿ ಹಾಗೂ ತಾಂತ್ರಿಕ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತಂದರೆ ತಾವೇ ಖುದ್ದಾಗಿ ಪರಿಶೀಲಿಸಿ ಕ್ರಮಕೈಗೊಳ್ಳುವದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಹೆಸ್ಕಾಂ ಹಾಗೂ ಜಲಮಂಡಳಿ, ಮಹಾನಗರ ಪಾಲಿಕೆಗಳು ಬಡಾವಣೆ ನಿರ್ಮಾಣಮಾಡಲು ಅನುಮಪತಿ ಪಡೆಯದೆ ಅನಧಿಕೃತವಾಗಿ ವಸತಿ (ಲೇಔಟ್)ಬಡಾವಣೆ ನಿರ್ಮಿಸುವವರಿಗೆ ಯಾವುದೇ ಮೂಲಸೌಕರ್ಯ ನೀಡಬಾರದು ಮತ್ತು ಅನುಮತಿ ಪಡೆಯದೆ ನಿಯಮ ಬಾಹಿರವಾಗಿ ನಿರ್ಮಿಸಿರುವ ಲೇಔಟಗಳಿಗೆ ನೋಟಿಸ್ ಜಾರಿ ಮಾಡಿ, ಅಧಿಕೃತ ಅನುಮತಿ ಪಡೆಯುವವರೆಗೆ ವಿದ್ಯುತ್ ಸೇರಿ ಎಲ್ಲ ಸೌಕರ್ಯ ತಡೆಹಿಡಿಯುವ ಕ್ರಮ ಕೈಗೊಳ್ಳಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವಳಿನಗರದ ಅನೇಕ ರಸ್ತೆಗಳನ್ನು ಒತ್ತುವರಿ ಮಾಡಲಾಗಿದೆ ಮತ್ತು ಪುಟಪಾತ್‍ಗಳ ಮೇಲೆ ಅಂಗಡಿಗಳನ್ನು ನಿರ್ಮಿಸಲಾಗಿದೆ. ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಮಹಾನಗರ ಪಾಲಿಕೆ ಈಗಾಗಲೇ ಗುರುತಿಸಿರುವ ಒತ್ತುವರಿ ಹಾಗೂ ಪುಟಪಾತ್ ಮೇಲಿನ ಅಂಗಡಿಗಳ ತೆರವು ಕಾರ್ಯಚರಣೆ ಮಾಡಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲಮಾಡಬೇಕು. ಮತ್ತು ಅನಗತ್ಯವಾಗಿ ಉಂಟಾಗುವ ಜನದಟ್ಟಣೆ, ವಾಹನದಟ್ಟಣೆ ಆಗುವುದನ್ನು ನಿಲ್ಲಿಸಬೇಕೆಂದು ಅವರು ತಿಳಿಸಿದರು.
ಈಗಾಗಲೇ ಒಂದು ಇಲಾಖೆಯಿಂದ ನಿರ್ಮಿಸಿರುವ ರಸ್ತೆ ಸೇರಿ ವಿವಿಧ ರೀತಿಯ ಮೂಲಸೌಕರ್ಯಗಳಿಗೆ ಮತ್ತೊಂದು ಯೋಜನೆಯ ಕಾರಣ ಹೇಳಿ ನಿರ್ಮಿತ, ಸುಸಜ್ಜಿತ ಸೌಕರ್ಯಗಳಿಗೆ ಹಾನಿ ಮಾಡುವ ಯಾವುದೆ ಇಲಾಖೆ, ಸಂಸ್ಥೆ ಹಾಗೂ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ಮತ್ತು ಅವರಿಗೆ ದಂಡ ವಿಧಿಸಿ ಎಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಮಹಾನಗರ ಕಾನೂನು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ ರಾಮರಾಜನ್.ಕೆ. ಮಾತನಾಡಿ, ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಮತ್ತು ಸರಕಾರಿ ರಸ್ತೆ-ಜಾಗ ಅತಿಕ್ರಮಣ, ಒತ್ತುವರಿ ಮಾಡಿದವರನ್ನು ತೆರವುಗೊಳಿಸಲು ಪೊಲೀಸ್ ಇಲಾಖೆ ನೆರವು ಬಯಸಿದರೆ ಅಗತ್ಯವಿರುವಷ್ಟು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ನೀಡಲಾಗುವುದೆಂದು ಅವರು ಹೇಳಿದರು.
ಸಭೆಯಲ್ಲಿ ಸ್ಮಾರ್ಟ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ, ಬಿಆರ್‍ಟಿಎಸ್ ಯೋಜನೆಯ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ, ಮಹಾನಗರ ಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿನಾಯಕ ಪಾಲನಕರ, ಲೊಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಎಸ್.ಬಿ.ಚೌಡಣ್ಣವರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ರೆಹಮತ ನದಾಫ ಸೇರಿದಂತೆ ಹೆಸ್ಕಾಂ, ಕೆಐಡಿಬಿ, ಜಲಮಂಡಳಿ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಎನ್.ಡಬ್ಲು.ಕೆ.ಎಸ್.ಆರ್.ಟಿ.ಸಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಯೋಜನೆಗಳ ಪ್ರಗತಿ ವಿವರಿಸಿದರು.