ಸಮತೆಯ ಸಾಕಾರ ರೂಪಿ ಶಿವಯೋಗಿ ಸಿದ್ಧರಾಮೇಶ್ವರ

ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನಕ್ಕೆ ತನ್ನದೇ ಆದ ಭವ್ಯ ಪರಂಪರೆ ಇದೆ. ಏಕೆಂದರೆ ದೇಸೀ ಭಾಷೆಯಲ್ಲಿ ಸಮಾಜದಲ್ಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ವಚನ ಸಾಹಿತ್ಯ ಅಲ್ಲಿ ರಚನೆಯಾಯಿತು. ಅಲ್ಲದೆ ಸಮಾಜದಲ್ಲಿದ್ದ ಅಂಧಕಾರ, ಮೌಢ್ಯಗಳನ್ನು ದೂರ ಮಾಡಿ ಸ್ವಾಸ್ಥö್ಯ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿದವರು ವಚನಕಾರರು. ಬಸವಣ್ಣನ ನಾಯಕತ್ವದಲ್ಲಿ ದೊಡ್ಡದೊಂದು ಆಂದೋಲನ ನಡೆದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಲಿಂಗ ತಾರತಮ್ಯ-ಹೀಗೆ ಸರ್ವ ರಂಗಗಳಲ್ಲಿರುವ ಸಮಸ್ಯೆಗಳಿಗೆ ದಿವ್ಯ ಔಷಧಿಯನ್ನು ನೀಡಿದ ಮಹಾ ವ್ಯಕ್ತಿಗಳ ಸಮಾಗಮ ನಡೆದ ಕಾಲಘಟ್ಟವಿದು. ಮಹಾವ್ಯಕ್ತಿಗಳ ಜೀವನದ ಸಂದೇಶವನ್ನು ಅವರ ನಡೆ-ನುಡಿಯಲ್ಲಿ, ಸಾಧನೆ ಸಿದ್ಧಿಗಳಲ್ಲಿ ಕಾಣುತ್ತೇವೆ. ಸಾಧಕರು ತಮ್ಮ ಪರಿಸರಕ್ಕೆ ಅನುಗುಣವಾಗಿ ಬದುಕಿದರೂ ಆ ಪರಿಸರವನ್ನು ಮೀರಿ ಮೇಲೇರುತ್ತಾರೆ. ಅವರ ಬದುಕು ಅಂದಿಗೆ ಮಾತ್ರವಲ್ಲದೆ ಸಾರ್ವಕಾಲಿಕ ಸತ್ಯವಾಗಿ ಇಂದಿಗೂ ಕೂಡ ಮಾರ್ಗದರ್ಶಕವಾಗಿವೆ. ಇಂತಹ ಮಾರ್ಗದರ್ಶನದ ಬದುಕು ನಡೆಸಿದವರು ಶಿವಯೋಗಿ ಸಿದ್ಧರಾಮೇಶ್ವರರು. ವಿಶ್ವವಿಭೂತಿ ಬಸವಣ್ಣನವರು ಸ್ಥಾಪಿಸಿದ ಮನುಕುಲೋದ್ಧಾರದ ಸಂಕೇತವಾದ ಅನುಭವಮಂಟಪದ ಮೊದಲನೇ ಪೀಠಾಧ್ಯಕ್ಷರಾಗಿ ವೈರಾಗ್ಯಮೂರ್ತಿ ಅಲ್ಲಮಪ್ರಭುಗಳು, 2 ನೇ ಪೀಠಾಧ್ಯಕ್ಷರಾಗಿ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು 3 ನೇ ಪೀಠಾಧ್ಯಕ್ಷರಾಗಿ ಸಮ್ಯಕ್‌ಜ್ಞಾನಿ ಸಮತೆಯ ಸಾಕಾರಮೂರ್ತಿ ಸಿದ್ಧರಾಮೇಶ್ವರರು ಕಂಗೊಳಿಸುತ್ತಾರೆ. ಶಿವಶರಣ ಶ್ರೇಷ್ಟರಲ್ಲೊಬ್ಬರಾದ ಸಿದ್ಧರಾಮೇಶ್ವರರು ಸಮಾಜಸೇವೆ, ಸಾಹಿತ್ಯಸೇವೆ ಮತ್ತು ಧಾರ್ಮಿಕಪ್ರಜ್ಞೆಯ ತ್ರಿವೇಣಿ ಸಂಗಮವಾಗಿ, ಕರ್ಮಯೋಗದಿಂದ-ಶಿವಯೋಗಕ್ಕೆ, ಶಿವಯೋಗದಿಂದ-ಜ್ಞಾನಯೋಗಕ್ಕೇರಿದ ಮಹಾವೈರಾಗ್ಯಮೂರ್ತಿ. ಶರಣ ಸಮೂಹದಲ್ಲಿ ವಿಶಿಷ್ಟ ವ್ಯಕ್ತಿತ್ವದಿಂದ ಬೆಳಗಿ ಸಮತೆ, ಸಮ್ಯಕ್‌ಜ್ಞಾನ, ಸದ್ಭಕ್ತಿಗಳ ಸಮ್ಮಿಲನವಾಗಿ, ಮಾನವೀಯ ಅನುಕಂಪ, ನಿರ್ಲಿಪ್ತ ಕರ್ಮಮಾರ್ಗ, ವೈಚಾರಿಕ ದೃಷ್ಠಿಯನ್ನೊಳಗೊಂಡಿರುವ ಸಿದ್ಧರಾಮೇಶ್ವರರ ಜನನವೇ ಒಂದು ಪವಾಡದಂತಿದೆ. ಮನುಷ್ಯ ಭವಸಾಗರದಿಂದ ದಿವ್ಯಸಾಗರದೆಡೆಗೆ ಏರಬಲ್ಲ ಎಂಬುದಕ್ಕೆ ಇವರ ಬದುಕು ನಿದರ್ಶನ.ಶಿವಭಕ್ತರಾದ ಸುಗ್ಗಲಾದೇವಿ ಮತ್ತು ಮುದ್ದುಗೌಡರ 72 ನೇ ಇಳಿವಯಸ್ಸಿನಲ್ಲಿ ಜನಿಸಿದ ಸಿದ್ಧರಾಮೇಶ್ವರರು ಬಾಲ್ಯದಲ್ಲಿ ಎಲ್ಲ ಮಕ್ಕಳಂತೆ ಆಟ-ಪಾಠಗಳಲ್ಲಿ ತೊಡಗಿಸಿಕೊಳ್ಳದೆ ಸದಾ ಏನನ್ನೋ ಚಿಂತಿಸುವAತೆ ತೋರುತ್ತಿದ್ದುದು ತಂದೆ ತಾಯಿಗಳಿಗೆ ಕೊರಗುಂಟಾಯಿತು. ಮೌನಿಯಾಗಿದ್ದ ಬಾಲಕ ಮರಳಿನ ಲಿಂಗ ಮಾಡಿ ಪೂಜಿಸಿ ಆನಂದಿಸುತ್ತಿದ್ದ. ಜಗತ್ತಿನ ಕಣ್ಣಿಗೆ ಮುಗ್ಧನಾಗಿ ಕಂಡರೂ ಅಂತರAಗದಲ್ಲಿ ಶುದ್ಧ ಭಕ್ತಿಭಾವ, ಚೈತನ್ಯದ ಚಿಲುಮೆಯಂತೆ ಚಿಮ್ಮುತ್ತಿತ್ತು. ಒಮ್ಮೆ ಸಿದ್ಧರಾಮನ ಭಕ್ತಿಯನ್ನು ಒರೆಗೆ ಹಚ್ಚುವ ಪ್ರಸಂಗ ಬಂದಿತು. ಒಂದು ಸುಂದರ ಸಂಜೆ ಸಿದ್ಧರಾಮ ಪ್ರಕೃತಿಯ ಸುಂದರ ದೃಶ್ಯವನ್ನು ತನ್ಮಯತೆಯಿಂದ ನೋಡುತ್ತಿದ್ದಾಗ ತೇಜೋಪುಂಜವಾದ ಜಂಗಮರೂಪಿಯೊಬ್ಬರ ದರ್ಶನವಾಗಿ ಅವರ ಬೆನ್ನು ಹತ್ತುತ್ತಾನೆ. ಆಗ ಆ ಜಂಗಮರು ನಿನ್ನಿಂದ ಲೋಕಕಲ್ಯಾಣವಾಗಬೇಕಾಗಿದೆ ಹೋಗು ಎಂದ ಮಾತಿನ ಪರಿಣಾಮ ಸಿದ್ಧರಾಮ ಜನಸೇವೆಗಾಗಿ ಟೊಂಕಕಟ್ಟಿ ನಿಂತು ಶಿವಾಲಯ, ಕೆರೆ, ಬಾವಿಗಳನ್ನು ನಿರ್ಮಿಸುವ ಕೆಲಸದಲ್ಲಿ ನಿರತನಾಗುತ್ತಾನೆ. ಅವನಲ್ಲಿದ್ದ ದೈವೀ ಗುರಿಯು ಮಂಕಾಗಿ ಹೊಗಳಿಕೆಗೆ ಮಾರುಹೋಗಿ ಮನಸ್ಸು ಕೀರ್ತಿ ಬಯಸಲು ಆರಂಭಿಸಿತು. ಈ ದಿಸೆಯಲ್ಲಿಯೇ ಕಲ್ಯಾಣದೆಡೆಗೆ ಪ್ರಯಾಣ ಬೆಳೆಸಿದ್ದ ಅಲ್ಲಮಪ್ರಭುಗಳು ಸಿದ್ಧರಾಮನ ಮನಸ್ಸಿನಲ್ಲಿ ಆವರಿಸಿದ್ದ ಅಜ್ಞಾನದ ಪೊರೆಯನ್ನು ದೂರ ಮಾಡಲೆಂದು ಸೊನ್ನಲಿಗೆಗೆ ಬಂದರು. ಅರಿವಿನ ಪರಿಮಳವನ್ನು ಪಸರಿಸಲು ಬಂದ ಜ್ಞಾನಿಗಳಾದ ಪ್ರಭುದೇವರು ಆತನು ಮಾಡುತ್ತಿದ್ದ ಅಸ್ಥಿರವಾದ ಕಾರ್ಯಗಳ ಬಗ್ಗೆ ಈ ವಚನದ ಮೂಲಕ ತಿಳಿ ಹೇಳುತ್ತಾರೆ.

 ತನುವೆಂಬ ಏರಿಗೆ ಮನವೆಂಬ ಕಟ್ಟೆ

 ಆಚಾರವೆಂಬ ಸೋಪಾನ,

 ಪರಮಾನಂದವೆAಬ ಸುಜಲವ ತುಂಬಿ!

 ಕೆರೆಯ ಕಟ್ಟಬಲ್ಲವರಾರನೂ ಕಾಣೆ!

 ನಾ ಕಟ್ಟಿದ ಕೆರೆ ಸ್ಥಿರವಾಯಿತ್ತು ಗುಹೇಶ್ವರಾ ನಿಮ್ಮಾಣೆ!ಭೌತಿಕ ಕೆರೆಯನ್ನು ಕಟ್ಟುವುದಕ್ಕಿಂತ ಅಂತರಂಗದ ಕೆರೆಯನ್ನು ಕಟ್ಟುವ ಕೆಲಸವಾಗಬೇಕು ಎಂಬ ನುಡಿಯಿಂದ ಸಿದ್ಧರಾಮೇಶ್ವರರಿಗೆ ಜ್ಞಾನೋದಯವಾಯಿತು. ಪ್ರಭುದೇವರೊಡಗೂಡಿ ಕಲ್ಯಾಣಕ್ಕೆ ಬಂದ ಸಿದ್ಧರಾಮೇಶ್ವರರು ಬಸವಣ್ಣ, ಚೆನ್ನಬಸವಣ್ಣನವರಿಂದ ಇಷ್ಟಲಿಂಗದ ಮಹತ್ವವನ್ನು ಅರಿತುಕೊಂಡು ಷಟ್‌ಸ್ಥಲಬ್ರಹ್ಮಿಯಾದ ಚೆನ್ನಬಸವಣ್ಣನವರಿಂದ ಅರಿವು-ಆಚಾರ-ಅನುಭಾವದ ಕುರುಹಾದ ಇಷ್ಟಲಿಂಗ ದೀಕ್ಷಾ ಸಂಸ್ಕಾರವನ್ನು ಪಡೆದು ಕರ್ಮಯೋಗಿಯಾಗಿದ್ದವರು ಶಿವಯೋಗಿಯಾದರು.ಕಲ್ಯಾಣಕ್ಕೆ ಬಂದ ನಂತರ ಶರಣರ ಕಾಯಕ ನಿಷ್ಠೆ, ಸರ್ವ ಸಮಾನತೆ, ತ್ರಿವಿಧ ದಾಸೋಹ, ಧಾರ್ಮಿಕ ಆಚರಣೆ, ಸಾಮಾಜಿಕ ಅಭ್ಯುದಯ ಈ ಮೊದಲಾದ ವಿಚಾರಗಳಲ್ಲಿ ಪಾಂಡಿತ್ಯವನ್ನು ಪಡೆದು ವಚನಗಳ ಮೂಲಕ ಅವುಗಳನ್ನು ಬಿತ್ತರಿಸುವ ಕಾರ್ಯದಲ್ಲಿ ನಿರತರಾದರು. ಸಾಧನಾ ಮಾರ್ಗದಲ್ಲಿ ಮುಂದುವರೆದ ಇವರು ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ವಚನಾಂಕಿತದಲ್ಲಿ ಸಾಕಷ್ಟು ವಚನಗಳನ್ನು ರಚಿಸಿದ್ದು 1378 ವಚನಗಳು ಲಭ್ಯವಿವೆ ಮತ್ತು ಬಸವಸ್ತೋತ್ರ ತ್ರಿವಿಧಿ, ಮಿಶ್ರಸ್ತೋತ್ರ ತ್ರಿವಿಧಿ, ಅಷ್ಟಾವರಣ ಸ್ತೋತ್ರ ತ್ರಿವಿಧಿಗಳನ್ನು ರಚಿಸಿದ್ದಾರೆ. ಅವರ ಒಂದೊAದು ವಚನವೂ ಭಾಷಾ ಸೌಂದರ್ಯ, ಭಾವದ ಮಕರಂದ, ಅರಿವಿನ ಆಗರ, ಅನುಭಾವದ ಕಂಪಿನಿAದ ಕೂಡಿದ್ದು ಓದುಗರ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ಸಿದ್ಧರಾಮನದು ಕವಿ ಹೃದಯ. ಉತ್ಸಾಹ, ಲವಲವಿಕೆ ಅವರ ವಚನಗಳಲ್ಲಿ ಕಂಡುಬರುತ್ತದೆ. ಹೇಳಬೇಕಾದ ವಿಷಯವನ್ನು ಮನಮುಟ್ಟುವಂತೆ ಹೇಳುವುದು ವಚನಗಳಲ್ಲಿನ ಮುಖ್ಯ ಗುಣವಾಗಿದೆ. ಲೌಕಿಕ ಮತ್ತು ಪಾರಮಾರ್ಥ ಜೀವನಕ್ಕೆ ಅನ್ವಯಿಸುವ ಗುಣ ಚಿತ್ತಸಮತೆ ಎಂದಿರುವ ಅವರು ಸಮತೆಯ ಕುರಿತು ಈ ವಚನದ ಮೂಲಕ ತಿಳಿಸುತ್ತಾರೆ. 

 ಆರೇನೆಂದರೂ ಓರಂತಿಪ್ಪದೇ ಸಮತೆ

 ಆರು ಜರಿದರೂ ಅವರೆನ್ನ ಮನದ ಕಾಳಿಕೆ

 ಕಳೆದರೆಂಬುದೆ ಸಮತೆ

 ಆರು ಸ್ತೋತ್ರವ ಮಾಡಿದರೂ ಅವರೆನ್ನ ಜನ್ಮದ 

 ಹಗೆಗಳೆಂಬುದೇ ಸಮತೆ 

 ಇಂತಿದು ಗುರುಕಾರುಣ್ಯ ವಚನ-ಮನ-ಕಾಯದಲ್ಲಿ 

 ಅಹಿತವಿಲ್ಲದೆ ಕಪಿಲಸಿದ್ಧಮಲ್ಲಿಕಾರ್ಜುನ

 ನಿಮ್ಮವರ ನೀವೆಂಬುದೇ ಸಮತೆ

ಮನುಷ್ಯ ನೋವು-ದು:ಖ ತೆಗಳಿಕೆ ಬಂದಾಗ ಕುಗ್ಗದೆ ಸುಖ-ನಲಿವು ಬಂದಾಗ ಹಿಗ್ಗದೆ ತನ್ನ ಚಿತ್ತ ಸಮತೆಯನ್ನು ಕಾಯ್ದುಕೊಳ್ಳಬೇಕು ಎಂದಿರುವರು. ಸಿದ್ಧರಾಮನಲ್ಲಿರುವ ಸಮತಾಗುಣವನ್ನು ಕುರಿತು ಸಿದ್ದಯ್ಯ ಪುರಾಣಿಕರು ತಮ್ಮ ‘ಶರಣ ಚರಿತಾಮೃತ’ ದಲ್ಲಿ ಹೀಗೆಂದಿದ್ದಾರೆ. ಸಮಾನತೆಯನ್ನು ಹಾರೈಸಿ, ಸಮತೆಯನ್ನು ಅರಸಿ, ಸಮತೆಯನ್ನು ಸಾಧಿಸಿ, ಸಮತೆಯೇ ಸಾಕಾರವಾದಂತಿದ್ದ ಸಿದ್ಧರಾಮೇಶ್ವರರು ಶರಣ ಸಮೂಹದಲ್ಲಿಯೇ ವಿಶಿಷ್ಟ ವ್ಯಕ್ತಿತ್ವದಿಂದ ಬೆಳಗಿದ್ದಾರೆ.ನೈತಿಕತೆಯ ನೆಲೆಗಟ್ಟಿನ ಮೇಲೆ ಸ್ವಾಸ್ಥö್ಯ ಸಮಾಜದ ಕನಸು ಕಂಡು ಒಬ್ಬ ಆದರ್ಶ ಸಮಾಜ ಸುಧಾರಕಾರಾಗಿ ಕಂಗೊಳಿಸುವ ಸಿದ್ಧರಾಮನಲ್ಲಿ ಬಸವಣ್ಣನಲ್ಲಿದ್ದ ಕವಿ, ಚೆನ್ನಬಸವಣ್ಣನಲ್ಲಿದ್ದ ಜ್ಞಾನಿ ಕಂಡುಬರುತ್ತಾನೆ. ಇವರ ಕಾರ್ಯಗಳಿಂದ ಸೊನ್ನಲಿಗೆ ಪವಿತ್ರ ಕೇಂದ್ರವಾಗಿ, ಧರ್ಮದ ನೆಲೆವೀಡಾಗಿ, ಲಿಂಗದ ಬೀಡಾಗಿ, ದಿವ್ಯಕ್ಷೇತ್ರವಾಗಿ ಬೆಳಗಿತು. ಬಸವಣ್ಣನವರು ಹಮ್ಮಿಕೊಂಡಿದ್ದ ಸಮಸ್ತ ಕಾರ್ಯಗಳಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದಲ್ಲದೆ ಎಲ್ಲರಿಗೂ ಬಸವಧರ್ಮವೇ ದಾರಿದೀಪವೆಂದು ಹಾಡಿ ಸಾರ್ವಕಾಲಿಕ ಸತ್ಯ ಸಾರಿದ್ದಾರೆ. ಸಮತೆಯ ಸಾಕಾರ ರೂಪಿ ಶಿವಯೋಗಿ ಸಿದ್ಧರಾಮೇಶ್ವರರ ಜೀವನ ತತ್ವಗಳು ಸರ್ವರ ಸರ್ವಾಂಗೀಣ ಪ್ರಗತಿಗೆ ಮಾರ್ಗದರ್ಶಕವಾಗಿವೆ. ಇಂದು ನಾಡಿನಾದ್ಯಂತ ಮಕರ ಸಂಕ್ರಾAತಿ. ಸಂಕ್ರಮಣ ಎಂದರೆ ಬದಲಾವಣೆ. ಈ ಶುಭ ದಿನದಂದು ನಮ್ಮಲ್ಲಿರುವ ದುರ್ಗುಣಗಳನ್ನು ತೊಡೆದು ಸನ್ಮಾರ್ಗದೆಡೆಗೆ ಸಾಗಬೇಕಾದರೆ ಸಿದ್ಧರಾಮೇಶ್ವರರ ಜ್ಞಾನದ ಮೇರುಚಿಂತನೆಯನ್ನು ಅನುಸರಿಸಬೇಕಾದ ಅವಶ್ಯಕತೆಯಿದೆ.

 -ಡಾ. ಗೀತಾ ಬಸವರಾಜು

 ಉಪನ್ಯಾಸಕರು

 ಎ.ವಿ.ಕೆ ಮಹಿಳಾ ಕಾಲೇಜು

 ದಾವಣಗೆರೆ