ಸಮಗ್ರ ಬೆಳೆ ಪದ್ಧತಿಗಳ ವಿಚಾರ ಸಂಕಿರಣ

ಕಲಬುರಗಿ,ಮಾ.23-ಇಲ್ಲಿನ ಕೃಷಿ ಮಹಾವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ಕೃಷಿ ಮಹಾವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಮತ್ತು ವಲಯ ಕೃಷಿ ಸಂಶೋಧನಾ ಕೇಂದ್ರ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ “ಸಮಗ್ರ ಬೆಳೆ ಪದ್ಧತಿಗಳ ವಿಚಾರ ಸಂಕೀರ್ಣ ಮತ್ತು ಪ್ರಾತ್ಯಕ್ಷಿತೆ ಕ್ಷೇತ್ರೋತ್ಸವ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಮತ್ತು ಶಿಕ್ಷಣ ನಿರ್ದೇಶಕ ಡಾ. ಎಂ. ಜಿ. ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತೋಟಗಾರಿಕೆಯ ವಿವಿಧ ಬೆಳೆಗಳ ವೈವಿಧ್ಯತೆಯ ಬಗ್ಗೆ ವಿದ್ಯಾರ್ಥಿಗಳ ಜೊತೆ ತೋಟಗಾರಿಕೆ ಕ್ಷೇತ್ರದಲ್ಲಿ ಚರ್ಚಿಸಿದರು. ಅನುಭವ ಕಲಿಕೆ ಕಾರ್ಯಕ್ರಮದ ಮಹತ್ವ, ಉದ್ದೇಶ, ಗುರಿ, ಸಾಧನೆ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.ಇನ್ನೂ ಹೆಚ್ಚಿನ ಸಾಧನೆ, ಸಂಶೋಧನೆ ಮಾಡುವಂತೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಮ್. ಎಮ್. ಧನೋಜಿ ಅವರು ತೋಟಗಾರಿಕೆ ಬೆಳೆಗಳ ಬಗ್ಗೆ ಸವಿಸ್ತಾರವಾಗಿ ಹಾಗೂ ವಿದ್ಯಾರ್ಥಿಗಳ ಕಾರ್ಯವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ರಾಜು ಜಿ. ತೆಗ್ಗೆಳ್ಳಿ ಅವರು ವಿದ್ಯಾರ್ಥಿಗಳು ಪ್ರಾಯೋಗಿ ತರಬೇತಿಯನ್ನು ಪಡೆದುಕೊಂಡು ತಮ್ಮ ಜಮೀನಿನಲ್ಲಿ ಕೂಡ ಹೊಸ ಹೊಸ ಬೆಳೆಗಳನ್ನು ಬೆಳೆಯಲು ಸಲಹೆ ನೀಡಿದರು. ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಬಿ. ಎಮ್. ದೊಡಮನಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಡೀನ್ ಡಾ.ಸುರೇಶ ಎಸ್ ಪಾಟೀಲ್ ಅವರು, ಕಲಿಕೆಯಲ್ಲಿ ಗಳಿಕೆ ಹಾಗೂ ನಮ್ಮ ತೋಟ ನಮ್ಮ ಊಟದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ವಿದ್ಯಾರ್ಥಿಗಳ ಅನುಭವ ಕಲಿಕೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಿಜ್ಞಾನಿ (ತೋಟಗಾರಿಕೆ) ಡಾ. ವಾಸುದೇವ ನಾಯ್ಕ ಅವರು ವಿದ್ಯಾರ್ಥಿಗಳ ಶ್ರಮದಿಂದ ಇಷ್ಟೆಲ್ಲಾ ಸಾಧನೆ ಮಾಡಲಾಯಿತು. ಇದರಂತೆ ರೈತರು ಸಹ ಇದರ ಲಾಭವನ್ನು ಪಡೆಯುವಂತೆ ಸಲಹೆ ನೀಡಿದರು. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಉಮಾದೇವಿ ಮತ್ತು ಮಾಲತಿ ಪ್ರಾರ್ಥನಾ ಗೀತೆಯನ್ನು ಹಾಡಿದರು. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅಮರ ಎಸ್., ಸಾಯಿರಾಮ, ಸಚಿನ, ನಿರ್ಮಲಾ ಮತ್ತು ಮನೋಜಕುಮಾರ ಇವರು ಅನುಭವ ಕಲಿಕೆಯ ಬಗ್ಗೆ ತಮ್ಮ ಅನುಭವದ ಮಾತುಗಳನ್ನು ವಿಡಿಯೋ ಮೂಲಕ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದರು. ಅಲ್ಲದೇ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ ಕೃಷಿ ಆವರಣದ ಎಲ್ಲಾ ಸಿಬ್ಬಂದಿಯವರಿಗೆ ಧನ್ಯವಾದಗಳನ್ನು ತಿಳಿಸಿದರು. ಅಂತಿಮವಾಗಿ ಸಹಾಯಕ ಪ್ರಾಧ್ಯಾಪಕ ಡಾ. ಮಹಾಂತೇಶ ಜೋಗಿ ಅನುಭವ ಕಲಿಕೆ ಬಗ್ಗೆ ಸವಿಸ್ತಾರವಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು ವಂದನಾರ್ಪಣೆಯನ್ನು ಮಾಡಿದರು.