ಸಮಗ್ರ ತನಿಖೆಗೆ ಬೊಮ್ಮಾಯಿ ಸೂಚನೆ

ಬೆಂಗಳೂರು, ಮೇ ೩- ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ದುರಂತ ದುಃಖಕರ. ಈ ಘಟನೆ ಸಂಭವಿಸಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿರುವ ಗೃಹ ಸಚಿವ ಬಸವರಾಜಬೊಮ್ಮಾಯಿ, ಈ ಘಟನೆಯ ಬಗ್ಗೆ ಸಮಗ್ರ ತನಿಖಾ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ ಎಂದರು.
ನಗರದಲ್ಲಿಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಮ್ಮಿಕೊಂಡಿರುವ ರಾಸಾಯನಿಕ ಸಿಂಪಡಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ದುರ್ಘಟನೆ ನಡೆಯಬಾರದಿತ್ತು ಈ ದುರಂತದ ಬಗ್ಗೆ ನೋವಿದೆ. ಈ ಘಟನೆ ಏಕಾಯಿತು, ಏನಾಯಿತು ಎಂಬುದಕ್ಕಿಂತ ಸಾವುಗಳಾಗಿರುವುದು ನೋವು ತಂದಿದೆ. ಇಡೀ ಘಟನೆಯ ಬಗ್ಗೆ ವಸ್ತುಸ್ಥಿತಿ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದರು.
ಎಲ್ಲ ಸಾವುಗಳು ಆಕ್ಸಿಜನ್ ಕೊರತೆಯಿಂದ ಆಗಿಲ್ಲ. ಬೇರೆ ಬೇರೆ ಕಾರಣಗಳಿವೆ ಎಂದು ಹೇಳಲಾಗುತ್ತಿದೆ. ದುರಂತಕ್ಕೆ ಆಕ್ಸಿಜನ್ ಕೊರತೆ ಅಥವಾ ಬೇರೆ ಕಾರಣಗಳಿವೆಯೇ ಎಂಬ ಬಗ್ಗೆ ವರದಿ ಬಂದ ನಂತರ ಗೊತ್ತಾಗಲಿದೆ ಎಂದರು.
ಈ ದುರಂತದ ಬಗ್ಗೆ ಪೊಲೀಸ್ ಮಹಾನಿರ್ದೇಶಕರು ವರದಿ ಸಲ್ಲಿಸಿದ ನಂತರ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಎಂದು ಅವರು ಹೇಳಿದರು.