ಸಮಗ್ರ ಗ್ರಾಮೀಣ ಅಭಿವೃದ್ಧಿಯ ಪಣ ತೊಡಲು ಕರೆ

ನರಗುಂದ,ನ8 : ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಓ ಗಳು ಜೊತೆಗೂಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಮಗ್ರ ಗ್ರಾಮೀಣ ಅಭಿವೃದ್ಧಿಗೆ ಪಣ ತೊಟ್ಟಾಗ ಮಾತ್ರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಸಾಧ್ಯವೆಂದು ಪದ್ಮಶ್ರೀ ಪುರಸ್ಕೃತ ರಾಜಸ್ಥಾನದ ಉದಯಪುರ ಜಿಲ್ಲೆಯ ಪಿಪಲಾಂತ್ರಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ಯಾಮಸುಂದರ ಪಾಲಿವಾಲ ಹೇಳಿದರು.

ನರಗುಂದ ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ಜಿಲ್ಲಾ ಪಂಚಾಯತ ಹಾಗೂ ನರಗುಂದ ತಾಲೂಕು ಪಂಚಾಯತ ಸಹಯೋಗದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓ ಗಳಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಮತ್ತು ನೀರು ನಿರ್ವಹಣೆ ಕುರಿತಾದ ಸಂವಾದದಲ್ಲಿ ಸಂವಾದಕರಾಗಿ ಭಾಗವಹಿಸಿ ಮಾತನಾಡಿದರು.

ಗ್ರಾಮ ಪಂಚಾಯತ ಮಟ್ಟದಲ್ಲಿ ಸಿಮೆಂಟ್ ಮತ್ತು ಕಾಂಕ್ರೆಟ್ ಕೆಲಸಗಳನ್ನು ಬಿಟ್ಟು ಹೆಚ್ಚು-ಹೆಚ್ಚು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು. ಅಂದಾಗ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಅಂರ್ತಜಲ ಮಟ್ಟ ಹೆಚ್ಚುತ್ತದೆ ಎಂದು ತಿಳಿಸಿದರು. ಅಲ್ಲದೆ ಸಾರ್ವಜನಿಕ ಕೆಲಸ ಮಾಡುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ರೂಪಾಯಿ ಬೇರೆಯವರಿಂದ ತಗೆದುಕೊಳ್ಳದೇ ಹಾಗೂ ಒಂದು ರೂಪಾಯಿ ತಮ್ಮ ಕೈಯಿಂದಾನೂ ಹಾಕದೇ ಕೇವಲ ಸರ್ಕಾರದ ಯೋಜನೆಗಳನ್ನು ಸದೂಪಯೋಗಪಡಿಸಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಹೇಳಿದರು.

ರಾಜಸ್ಥಾನದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಐದು ವರ್ಷಗಳವರೆಗೆ ಒಬ್ಬರೇ ಅಧಿಕಾರ ಚಲಾಯಿಸುತ್ತಾರೆ. ಆದ್ರೆ ಕರ್ನಾಟಕದಲ್ಲಿ ಇದು ಭಿನ್ನವಾಗಿದೆ. ಐದು ವರ್ಷಗಳ ಅಧಿಕಾರವಧಿಯಲ್ಲಿ ಇಬ್ಬರು ಅಥವಾ ಮೂವರು ಗ್ರಾಮ ಪಂಚಾಯತ ಅಧ್ಯಕ್ಷರಾಗೋದು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕೆಲಸಕಾರ್ಯಗಳಿಗೆ ಹಿನ್ನಡೆಯಾಗಿದೆ. ಈ ಬಗ್ಗೆ ಕರ್ನಾಟಕ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಸಂಬಂಧಪಟ್ಟವರ ಜೊತೆ ನಾನೇ ಮಾತನಾಡಿ ಅಭಿವೃದ್ಧಿಪೂರಕ ತೀರ್ಮಾನವನ್ನು ಕೈಗೊಳ್ಳಲು ಸಹಕರಿಸುತ್ತೇನೆ ಎಂದು ಪಾಲಿವಾಲ ತಿಳಿಸಿದರು.

ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಗಳು ರಚನಾತ್ಮಕವಾಗಿ ಕೆಲಸ ಮಾಡಿದ್ರೆ ಗ್ರಾಮಗಳ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿಯಾಗುತ್ತದೆ. ರಚನಾತ್ಮಕವಾಗಿ ಕೆಲಸ ಮಾಡುವ ಗ್ರಾಮ ಪಂಚಾಯತಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತ ಅಧಿಕಾರಿಗಳು ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೂ ಗುರ್ತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ ಮಾತನಾಡಿ, ಶ್ಯಾಮಸುಂದರ ಪಾಲಿವಾ¯ ಅವರು ಪಿಪಲಾಂತ್ರಿ ಗ್ರಾಮ ಪಂಚಾಯತ ಅಧ್ಯಕ್ಷರಾಗುವ ಮೂಲಕ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಹೆಣ್ಣು ಮಗು ಜನಿಸಿದ್ರೆ 111 ಸಸಿಗಳನ್ನು ನೆಡುವ ಮೂಲಕ ಹೆಣ್ಣುಭ್ರೂಣ ಹತ್ಯೆ ತಡೆಗಟ್ಟುವುದರ ಜೊತೆಗೆ ಪರಿಸರ ಸಂರಕ್ಷಣೆ ಪಾಠವನ್ನು ತಿಳಿಸಿದ್ದಾರೆ. ರಾಜಸ್ಥಾನದ ಪಿಪಲಾಂತ್ರಿ ಗ್ರಾಮದಲ್ಲಿ ಅಂರ್ತಜಲಮಟ್ಟ ಕುಸಿದು ಹೋಗಿತ್ತು. ಸಾವಿರ ಅಡಿಗೆ ಸಿಗುತ್ತಿದ್ದ ಅಂತರ್ಜಲ ಪಾಲಿವಾಲ ಅವರ ಪರಿಸರ ಸಂರಕ್ಷಣೆ ಕಾರ್ಯದಿಂದ ಈಗ 15 ರಿಂದ 20 ಅಡಿಗೆ ನೀರು ಸಿಗುವಂತ್ತಾಗಿದೆ ಎಂದು ಪಾಲಿವಾಲ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನರಗುಂದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ.ಇನಾಮದಾರ ಮಾತನಾಡಿ, ಕೇವಲ 8 ನೇ ತರಗತಿ ಪಾಸಾದ ಪಾಲಿವಾಲ ಅವರು ದೇಶವೇ ಮೆಚ್ಚುವಂತ ಕೆಲಸಗಳನ್ನು ಪಿಪಲಾಂತ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮಾಡಿದ್ದಾರೆ. ಪಿಪಲಾಂತ್ರಿ ಗ್ರಾಮ ಪಂಚಾಯತಿಯ 04 ಗ್ರಾಮ ಗಳಲ್ಲಿ ಹಸರೀಕರಣ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಗದಗ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ಕುಮಾರ ಪೂಜಾರ, ಜಿಲ್ಲಾ ಪಂಚಾಯತ ಎಡಿಪಿಸಿ ಕಿರಣಕುಮಾರ್, ನರಗುಂದ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಆನಂದ ಬೋವಿ, ನರಗುಂದ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಪಿಡಿಓ ಗಳು, ತಾಲೂಕಿನ ನರೇಗಾ ಸಿಬ್ಬಂದಿ ವರ್ಗ ಮತ್ತು ತಾಲೂಕು ಪಂಚಾಯತ ಸಿಬ್ಬಂದಿ ಹಾಜರಿದ್ದರು, ಪ್ರದೀಪ ಕದಂಬ ನಿರೂಪಿಸಿದರು.