ಸಮಗ್ರ ಕೃಷಿಯ ಸಂಪತ್ತು : ಜಂಟಿ ಕೃಷಿ ನಿದೇರ್ಶಕರಿಂದ ಬೆಳೆ ವೀಕ್ಷಣೆ

ಸಿರುಗುಪ್ಪ ಜ 06 : ಬೆಳೆ ಆಧಾರಿತ ಪದ್ಧತಿಯಲ್ಲಿ ಬೆಳೆ ಉತ್ಪಾದನೆ ಮುಖ್ಯ ಗುರಿಯಾಗಿದ್ದು, ಇತರೆ ಪದ್ಧತಿಗಳು ಬೆಳೆ ಉತ್ಪಾದನೆಗೆ ಪೂರಕವಾಗಿರುವ ಪದ್ಧತಿಯೇ ಸಮಗ್ರ ಕೃಷಿ.
ತಾಲೂಕಿನ ಸಿರಿಗೇರಿ ಗ್ರಾಮದ ಪ್ರಗತಿಪರ ರೈತ ಗೋಡೆ ಸಂಪತ್ ಕುಮಾರ ಗೌಡ ಅವರ ತಮ್ಮ ಜಮೀನಿನಲ್ಲಿ ಬೆಳೆಯೊಂದಿಗೆ ಮರ ಆಧಾರಿತ, ತೋಟಗಾರಿಕೆ ಆಧಾರಿತದ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡು ಕೃಷಿಯನ್ನು ಜಿಲ್ಲಾ ಕೃಷಿ ಅಧಿಕಾರಿಗಳ ತಂಡ ವೀಕ್ಷಿಸಿ ಇತರೆ ರೈತರೊಂದಿಗೆ ಸಮಾಲೋಚಿಸಿದರು.
ಮರ ಆಧಾರಿತ ಸಮಗ್ರ ಕೃಷಿ ಪದ್ಧತಿ : 4ಸಾವಿರ ಮಹಾಗನಿ, 9ಸಾವಿರ ಶ್ರೀಗಂಧ, 500ಹೆಬ್ಬೇವು, ಒಂದು ಸಾವಿರ ಟೀಕ್‍ವುಡ್, 20 ಬೆಟ್ಟದ ನೆಲ್ಲಿಕಾಯಿ, ವಿವಿಧೋದ್ದೇಶ ಮರಗಳನ್ನು ಬೆಳೆದು ಅವುಗಳಿಂದ ಮೇವು, ಕಟ್ಟಿಗೆ ಮತ್ತು ಉರುವಲುಗಳನ್ನು ಪಡೆಯಬಹುದು.
ತೋಟಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿ : ಈ ಪದ್ಧತಿಯಲ್ಲಿ 50 ತೆಂಗು, 400 ನುಗ್ಗೆ, 100 ಪಪ್ಪಾಯಿ, 70ಮಾವು, 100ಸೀತಾಫಲ, 300ಸಪೋಟ, 250 ಸೀಬೆಹಣ್ಣು, 100 ಜಂಬು ನೇರಳೆ, 100 ಬಾಳೆ, 50 ಬೆಣ್ಣೆ ಹಣ್ಣು, 100 ಕಿತ್ತಳೆ, 250 ನಿಂಬೆಗಿಡ, 20 ಹಲಸಿನ ಗಿಡ, 10ಕರಿಬೇವು, 100ಮೋಸಂಬಿ ಬೆಳೆಗಳು ಮುಖ್ಯ ಪಾತ್ರವಹಿಸುತ್ತವೆ.
ಅಂತರ ಬೆಳೆ : ಈರುಳ್ಳಿ, ಕೊತ್ತಂಬರಿ ಸೊಪ್ಪು, ಹೀರೆಕಾಯಿ, ಸೌತೆಕಾಯಿ, ಹಸಿಮೆಣಸಿನಕಾಯಿ ಬೆಳೆ, ತೊಗರಿ ಬೆಳೆಗಳು ಬೆಳೆದಿದ್ದಾರೆ.


ಈ ಭಾಗದಲ್ಲಿ ರೈತರು ಅತಿ ಹೆಚ್ಚಾಗಿ ಭತ್ತವನ್ನು ನೆಚ್ಚಿಕೊಂಡು ವಿವಿಧ ಭತ್ತದ ತಳಿಗಳನ್ನು ಬೆಳೆಯಲು ಮುಂದಾಗಿದ್ದಾರೆ, ಮಣ್ಣಿಗೆ ಅತಿ ಹೆಚ್ಚು ನೀರನ್ನು ಬಿಡುವುದರಿಂದ ಬಹುಬೇಗನೆ ಮಣ್ಣಿನ ಫಲವತ್ತತೆ ಕಳೆದು ಸವಳು ಭೂಮಿಯಾಗುತ್ತದೆ, ನಿರತಂರ ಭತ್ತವನ್ನು ಬೆಳೆಯುವುದರಿಂದ ವರ್ಷದಿಂದ ವರ್ಷಕ್ಕೆ ಇಳುವರಿ ಕುಂಠಿತಗೊಂಡು ನಷ್ಟ ಅನುಭವಿಸಬೇಕಾಗುತ್ತದೆ, ಆದ್ದರಿಂದ ಭತ್ತಕ್ಕೆ ಪರ್ಯಾಯವಾಗಿ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಲ್ಲಿ ನಿರಂತರ ಆದಾಯವನ್ನು ಪಡೆದು ಸದೃಢವಾಗಬಹುದು.
-ಶರಣಪ್ಪ ಮುದುಗಲ್, ಜಿಲ್ಲಾ ಜಂಟಿ ಕೃಷಿ ನಿದೇರ್ಶಕ ಬಳ್ಳಾರಿ.

ನೀರಾವರಿ ಭಾಗದ ರೈತರು ಭತ್ತವನ್ನು ಕಡಿಮೆ ಮಾಡಿಕೊಂಡು ಭತ್ತಕ್ಕೆ ಪರ್ಯಾಯ ಬೆಳೆಗಳನ್ನು ಬೆಳೆಯುವುದರಿಂದ ವಾತಾವರಣದಲ್ಲಿ ಪರಿಸರ ಮಾಲಿನ್ಯ ತಡೆಯುವುದರೊಂದಿಗೆ ಮುಂದಿನ ಪೀಳಿಗೆಗೆ ಫಲವತ್ತತೆ ಭೂಮಿಯನ್ನು ಉಳಿಸುವ ಅನಿರ್ವಾಯತೆ ಇದೆ, ಇದಕ್ಕಾಗಿ ಭೂಮಿಯ ಫಲವತ್ತೆಯನ್ನು ಹೆಚ್ಚಿಸುವುದರೊಂದಿಗೆ ಉತ್ತಮ ಇಳುವರಿಯನ್ನು ನೀಡುವ ಬೆಳೆಗಳನ್ನು ಬೆಳೆಯುವಂತೆ ತಿಳಿಸಿದರು.
-ಚಂದ್ರಶೇಖರ, ಜಿಲ್ಲಾ ಉಪ ಕೃಷಿ ನಿದೇರ್ಶಕ, ಬಳ್ಳಾರಿ


ಕೃಷಿ ಉತ್ಪಾದನೆ, ರೈತರ ಆರ್ಥಿಕ ಪರಿಸ್ಥಿತಿ ಹಾಗೂ ಜೀವನಮಟ್ಟ ಸುಧಾರಿಸಲು ಸಮಗ್ರ ಕೃಷಿ ಪದ್ಧತಿಗಳು ತುಂಬಾ ಸಹಕಾರಿಯಾಗಿದೆ. ಅನಿಶ್ಚಿತ ಮಳೆ, ಹವಾಮಾನ ವೈಪರೀತ್ಯಗಳಿಂದ ಕೃಷಿ ಉತ್ಪಾದನೆಯ ಸುಸ್ಥಿರತೆಯನ್ನು ಕಳೆದುಕೊಳ್ಳುತ್ತಿದ್ದು, ಕೇವಲ ಬೆಳೆಗಳಿಂದ ಬರುತ್ತಿರುವ ಉತ್ಪಾದನೆಯು ಹಾಗೂ ಆದಾಯ ಕುಂಠಿತಗೊಳ್ಳುತ್ತಿದ್ದು, ಬೆಳೆಗಳ ಜೊತೆಗೆ ಕೃಷಿ ಅವಲಂಬಿತ ಉಪಕಸುಬುಗಳ ಸೂಕ್ತ ಸಂಯೋಜನೆಯಿಂದ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಸುಸ್ಥಿರ ಉತ್ಪಾದನೆ ಪಡೆದು ಆದಾಯವನ್ನು ಉತ್ತಮಪಡಿಸುವುದರ ಜೊತೆಗೆ ವರ್ಷ ಪೂರ್ತಿ ರೈತರ ಕುಟುಂಬಕ್ಕೆ ಉದ್ಯೋಗ ಸೃಷ್ಟಿಸಿ ಸ್ವಾವಲಂಬಿ ಜೀವನೋಪಾಯ ಪಡೆಯುವುದೇ ಸಮಗ್ರ ಕೃಷಿ ಪದ್ಧತಿಯಾಗಿದೆ.

  • ಎ.ಎಂ.ಬಸವಣ್ಣೆಪ್ಪ, ವಿಜ್ಞಾನಿ ಮತ್ತು ಮುಖ್ಯಸ್ಥ ಕೃಷಿ ಸಂಶೋಧನ ಕೇಂದ್ರ, ಸಿರುಗುಪ್ಪ

ಸಾಮಾನ್ಯ ಕೃಷಿಯೊಂದಿಗೆ ನಾನಾ ರೀತಿಯ ಬೆಳೆಗಳನ್ನು ಬೆಳೆಯುವುದರಿಂದ ನಮಗೆ ಮತ್ತು ಭೂಮಿಗೆ ಅನುಕೂಲವಾಗುವಂತ ಬೆಳೆಗಳನ್ನು ಬೆಳೆಯಬಹುದು ಎಂದು ಮಾಹಿತಿಯನ್ನು ಪಡೆದುಕೊಂಡು ನಮ್ಮ 6.90 ಸೆಂಟ್ಸ್ ಜಮೀನಿನಲ್ಲಿ ಬೆಳೆಯೊಂದಿಗೆ ಅರಣ್ಯ ಕೃಷಿ, ತೋಟಗಾರಿಕೆ ಕೃಷಿಯನ್ನು ಅಳವಡಿಸಿಕೊಂಡು ಸಮಗ್ರ ಪದ್ಧತಿಯ ಕೃಷಿಯನ್ನು ಅಳವಡಿಸಿಕೊಂಡು ಉತ್ತಮ ಲಾಭವನ್ನು ಪಡೆಯುತ್ತಿದ್ದೇನೆ ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವ ನಿರೀಕ್ಷೆ ಇದೆ.
-ಗೋಡೆ ಸಂಪತ್ ಕುಮಾರ ಗೌಡ, ಪ್ರಗತಿ ಪರ ರೈತ, ಸಿರಿಗೇರಿ ಗ್ರಾಮ, ಸಿರುಗುಪ್ಪ

ಸಿರುಗುಪ್ಪ ತಾಲೂಕು ಕೃಷಿ ಸಹಾಯಕ ನಿದೇರ್ಶಕ ನಜೀರ್ ಅಹಮ್ಮದ್, ಕೃಷಿ ಅಧಿಕಾರಿ ಸೌಮ್ಯ ಅವರು ವೀಕ್ಷಿಸಿದರು.