‘ಸಮಗ್ರ ಕರಾವಳಿ-ಮೀನುಗಾರಿಕೆ ಅಭಿವೃದ್ಧಿ ಪ್ರಾಧಿಕಾರ ರಚನೆ’

ಮಂಗಳೂರು, ನ.೧೨- ಮೀನುಗಾರರ ಹಿತರಕ್ಷಣೆಯ ನಿಟ್ಟಿನಲ್ಲಿ ‘ಸಮಗ್ರ ಕರಾವಳಿ ಮತ್ತು ಮೀನುಗಾರಿಕೆ ಅಭಿವೃದ್ಧಿ ಪ್ರಾಧಿಕಾರ’ ರಚಿಸಲು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಸೆಂಥಿಲ್ ವೇಲ್ ಹೇಳಿದ್ದಾರೆ.

ಮೀನುಗಾರಿಕಾ ಮಹಾವಿದ್ಯಾಲಯದ ವತಿಯಿಂದ ಬುಧವಾರ ನಡೆದ ವಿವಿಧ ಮೀನುಗಾರಿಕಾ ಸಂಘಟನೆಗಳ ಜೊತೆಗಿನ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರಾವಳಿಯ ಮೀನುಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೀನುಗಾರರ ಅಭಿವೃದ್ಧಿಯ ನಿಟ್ಟಿನಲ್ಲಿ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದರೂ ಕೂಡ ಮೀನುಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ಮೀನುಗಾರರು ಒಂದಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದು. ರಾಜ್ಯ ಮೀನುಗಾರಿಕಾ ಸಚಿವರ ಅಧ್ಯಕ್ಷತೆಯ ಈ ಪ್ರಾಧಿಕಾರದಲ್ಲಿ ದ.ಕ.ಜಿಲ್ಲಾಧಿಕಾರಿ, ಎನ್‌ಎಂಪಿಟಿ ಅಧ್ಯಕ್ಷರು, ಬಂದರು ಅಧ್ಯಕ್ಷರು, ರಾಜ್ಯ ಪರಿಸರ ಇಲಾಖೆ (ಸಿಆರ್‌ಝಡ್) ಕಾರ್ಯದರ್ಶಿ, ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ, ಮೀನುಗಾರಿಕಾ ಕಾಲೇಜಿನ ಡೀನ್, ಮಿನುಗಾರಿಕಾ ಇಲಾಖೆಯ ನಿರ್ದೇಶಕ ಮತ್ತು ಅರಣ್ಯ ಇಲಾಖೆಯ ಕಾರ್ಯದರ್ಶಿ ಉದ್ದೇಶಿತ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು. ಯಾವ ಸರಕಾರ ಅಧಿಕಾರಕ್ಕೆ ಬಂದರೂ ಅಷ್ಟೆ, ಮೀನುಗಾರರ ಸಮಸ್ಯೆಯು ಹಾಗೇ ಉಳಿಯುತ್ತದೆ. ರಾಜ್ಯ ಸರಕಾರ ಮೀನುಗಾರರ ಪರ ಕಾಳಜಿ ವಹಿಸುತ್ತಿಲ್ಲ. ಮಂಗಳೂರು ದಕ್ಕೆಯಲ್ಲಿ ೧೨೦೦ ಯಾಂತ್ರೀಕೃತ ಮತ್ತು ೮೦೦ ನಾಡದೋಣಿಗಳಿವೆ. ದೇಶದ ಆರ್ಥಿಕತೆಗೆ ಸಾಕಷ್ಟು ಕೊಡುಗೆಯನ್ನೂ ಮೀನುಗಾರಿಕಾ ವಲಯವು ನೀಡುತ್ತಿದೆ. ಆದರೆ ಮೀನುಗಾರರ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಎಸಗುತ್ತಿದೆ ಎಂದು ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ, ಟ್ರಾಲ್‌ಬೋಟ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಜಿಲ್ಲಾ ಬಿಜೆಪಿ ಮುಖಂಡ ನಿತಿನ್ ಕುಮಾರ್ ಹೇಳಿದರು. ಮಂಗಳೂರು ದಕ್ಕೆಯಲ್ಲಿ ಮೀನುಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಳಿವೆ ಬಾಗಿಲು ಬಳಿ ಹೂಳು ತುಂಬಿದೆ. ಅದನ್ನು ಮೇಲೆತ್ತದ ಕಾರಣ ಸಮಸ್ಯೆ ಬಿಗಡಾಯಿಸಿದೆ. ಕರಾವಳಿಯಲ್ಲಿ ಸದ್ಯ ೧೨ ಮೀನುಗಾರಿಕಾ ಬಂದರ್‌ಗಳಿವೆ. ಇಲ್ಲಿನ ಹೂಳೆತ್ತಲು ಸುಸಜ್ಜಿತ ಡ್ರಜ್ಜರ್ ಅಗತ್ಯವಿದೆ ಎಂದ ನಿತಿನ್ ಕುಮಾರ್, ಡ್ರಜ್ಜರ್‌ನ ನಿರ್ವಹಣೆಯನ್ನು ಯಾರು ಮಾಡುವುದು ಎಂಬ ಸಮಸ್ಯೆ ಇದೆ. ಸರಕಾರ ಅಥವಾ ಸರಕಾರೇತರ ಸಂಸ್ಥೆಗಳು ಡ್ರಜ್ಜರ್ ನಿರ್ವಹಣೆಯ ಜವಾಬ್ದಾರಿ ವಹಿಸುವ ಅಗತ್ಯವಿದೆ ಎಂದರು. ಹಿಂದೆ ಮಂಗಳೂರು ಅಡಕೆ, ಹೆಂಚು ಉದ್ಯಮಕ್ಕೆ ಹೆಸರುವಾಸಿಯಾಗಿತ್ತು. ಈಗ ಮೀನುಗಾರಿಕೆಗೆ ಪ್ರಸಿದ್ಧಿ ಪಡೆದಿದೆ. ಮೀನುಗಾರಿಕಾ ವಲಯ ಪ್ರಸಿದ್ಧಿ ಪಡೆದಷ್ಟೇ ಸಮಸ್ಯೆಯನ್ನೂ ಎದುರಿಸುತ್ತಿದೆ. ರೈತರಿಗೆ ಸರಕಾರ ಯಾವೆಲ್ಲಾ ಪರಿಹಾರ ನೀಡುತ್ತಿದೆಯೋ, ಮೀನುಗಾರರಿಗೂ ಅದೇ ರೀತಿಯ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪರ್ಸಿನ್ ಬೋಟ್ ಅಸೋಸಿಯೇಶನ್ ಅಧ್ಯಕ್ಷ ಮೋಹನ್ ಬೆಂಗ್ರೆ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಂವಹನದ ಕೊರತೆಯಿಂದ ಮಂಗಳೂರು ಬಂದರ್ ದಕ್ಕೆಯ ೩ನೆ ಹಂತದ ವಾರ್ಫ್ ಕಾಮಗಾರಿ ಪೂರ್ಣಗೊಂಡಿಲ್ಲ. ದಕ್ಕೆಗೆ ಹೋಗುವ ರಸ್ತೆ ಕಾಮಗಾರಿಯೂ ಬಾಕಿಯು ಳಿದಿದೆ ಎಂದರು. ಮೀನುಗಾರರ ಸಂಘಟನೆಯ ಮುಖಂಡ ಮಾತನಾಡಿ ಬೃಹತ್ ಕೈಗಾರಿಕೆಗಳ ವಿಷಯುಕ್ತ, ಕಲುಷಿತ ತ್ಯಾಜ್ಯ ನೀರನ್ನು ನದಿ, ಸಮುದ್ರಗಳಿಗೆ ಬಿಡಲಾಗುತ್ತಿದೆ. ಇದರ ಬಗ್ಗೆ ವೈಜ್ಞಾನಿಕವಾದ ವರದಿ ತಯಾರಿಸುವ ಬಗ್ಗೆ ಮೀನುಕಾರಿಕಾ ಕಾಲೇಜಿನ ತಜ್ಞರು ಮಾಡಬೇಕಿದೆ ಎಂದರು. ಬಂದರು ಇಲಾಖೆಯ ಡಾ.ಲಕ್ಷ್ಮಿಪತಿ ಎಂ.ಟಿ. ಮೀನುಗಾರಿಕಾ ಬಂದರಿನಲ್ಲಿ ಹೂಳೆತ್ತುವ ಬಗ್ಗೆ ಅಧ್ಯಯನ ನಡೆಸಿ ವರದಿ ತಯಾರಿಸಿ ಸಂಬಂಧ ಪಟ್ಟ ಸಂಸ್ಥೆಗೆ ಕಳುಹಿಸಲಾಗಿದ್ದು, ಸಂಸ್ಥೆಯಿಂದ ಪ್ರತಿಕ್ರಿಯೆ ಬಂದ ಬಳಿಕ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್, ನವ ಮಂಗಳೂರು ಬಂದರಿನ ಅಧೀಕ್ಷಕ ಎಂಜಿನಿಯರ್ ಶ್ರೀಕರ ಕಾಪು, ಎನ್‌ಎಂಪಿಟಿ ಅಧಿಕಾರಿಗಳಾದ ಶೈಲೇಂದ್ರ, ಶೇಖರ ನಾಯಕ್, ಮೀನುಗಾರಿಕಾ ಕಾಲೇಜಿನ ಡಾ. ರಾಮಚಂದ್ರ ನಾಯಕ್, ಮೀನುಗಾರರ ಸಂಘಟನೆಯ ಶಶಿಕುಮಾರ್ ಬೆಂಗರೆ ಮತ್ತಿತರರು ಉಪಸ್ಥಿತರಿದ್ದರು.