ಸಮಗ್ರ ಅಭಿವೃದ್ಧಿಗೆ ಸಂವಿಧಾನದ ಆಶಯವೇ ಪ್ರೇರಣೆ: ದಯಾನಂದ ಅಗಸರ

Oplus_0

ಕಲಬುರಗಿ:ಏ.15: ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಅವರ ಸಂವಿಧಾನ ದೇಶದ ಆಸ್ತಿಯಾಗಿದ್ದು, ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನ ಶಕ್ತಿ ಮತ್ತು ಚೈತನ್ಯ ನೀಡುತ್ತಿದೆ. ದೇಶದ ಎಲ್ಲಾ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಸಂವಿಧಾನದ ಆಶಯವೇ ಪ್ರೇರಣೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ರಾಧಾಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ ಭಾರತ ರತ್ನ, ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ. ಬೀಮರಾವ್ ಅವರ 133ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಸ್ಪ ಸಮರ್ಪಿಸಿ ಮಾತನಾಡಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಬದುಕಿನ ಪುಸ್ತಕ ಮತ್ತು ಸಾಹಿತ್ಯ ಕೃತಿಗಳಲ್ಲಿನ ವಿಚಾರಗಳಲ್ಲಿ ಅವರ ನಿಸ್ವಾರ್ಥ ಬದುಕು ಅಡಗಿದೆ. ಸಮಾಜವನ್ನು ಸಮಾನು ದೃಷ್ಠಿಯಿಂದ ನೋಡುವ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಮಾನವ ಕಲ್ಯಾಣಕ್ಕಾಗಿ ಚಿಂತಿಸಿದರು. ಅವರ ಶಿಸ್ತು, ಅಧ್ಯಯನ ಮತ್ತು ಬರವಣಿಗೆಯಿಂದ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ದೇಶ ಮತ್ತು ರಾಜ್ಯಗಳ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮತ್ತು ವಿಜ್ಞಾನ ಕ್ಷೇತ್ರಗಳ ಪ್ರಗತಿಗೆ ಅವರ ದೂರದೃಷ್ಠಿ ಚಿಂತನೆ ಮೂಲವಾಗಿದೆ. ಅದರ ಹಿನ್ನೆಲೆಯಲ್ಲಿ ಇಂದು ಕೃಷಿ, ಕೈಗಾರಿಕೆ, ವಾಣಿಜ್ಯ, ರಾಜಕೀಯ, ಉದ್ಯಮ ಮತ್ತು ಸೇವಾ ಕ್ಷೇತ್ರಗಳು ಪ್ರಗತಿ ಸಾಧಿಸಿವೆ. ಆದರಿಂದಲೇ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಅವರ ಸಂವಿಧಾನದ ಆಶಯಗಳ ಕುರಿತು ಇಡೀ ಜಗತ್ತು ಮಾತನಾಡುವ ಮೂಲಕ ಗೌರವಿಸುತ್ತಿವೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಅರ್ಥೈಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಅವರ ತತ್ವ ಮತ್ತು ಸಿದ್ಧಾಂತಗಳ ಅಂಶಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಸಂವಿಧಾನ ಓದುವ ಮೂಲಕ ಪ್ರತಿಯೊಬ್ಬರು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ ಮಾತನಾಡಿ ಇಡೀ ಜಗತ್ತಿನ ಅಭಿವೃದ್ಧಿಗೆ ಹಲವು ಚಿಂತಕರು ಶ್ರಮಿಸಿದ್ದಾರೆ. ಅದರಲ್ಲಿ ಬುದ್ಧ, ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನ ಬೆಳವಣಿಗೆ ಮತ್ತು ಮಾನವ ಸಮಾಜದ ಉದ್ಧಾರಕ್ಕಾಗಿ ಇಡೀ ಬದುಕನ್ನು ಸೆವೆಸಿದ್ದಾರೆ. ಡಾ.ಬಿ. ಆರ್. ಅಂಬೇಡ್ಕರ್ ಅವರೊಬ್ಬ ಶಿಕ್ಷಣ ತಜ್ಞ, ಆರ್ಥಿಕ ಚಿಂತಕ, ರಾಜಕೀಯ ಮೇಧಾವಿಯಾಗಿ ಸುಮಾರು 21 ವಿಷಯಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಇಡೀ ವಿಶ್ವವೇ ಅವರನ್ನು ವಿಶ್ವಜ್ಞಾನಿ ಎಂದು ಸಂಬೋಧಿಸುತ್ತಿದೆ. ಅವರು ಮೂಕನಾಯಕ, ಬಹಿಷ್ಕøತ ಭಾರತ, ಸಮತ ಮತ್ತು ಜನತ ಪತ್ರಿಕೆಗಳನ್ನು ಪ್ರಕಟಿಸಿ ನೊಂದ ದುರ್ಬಲ ಜನರ ಪರವಾಗಿ ಹೋರಾಟ ನಡೆಸಿದರು. ಸಮಾನತೆ, ಜಾತ್ಯಾತೀತ ತತ್ವಗಳನ್ನು ಹೆಚ್ಚು ಬಿಂಬಿಸಿದರು. ವಂಚಿತ ಸಮುದಾಯಗಳ ಏಳಿಗೆ ಕನಸು ಕಂಡ ಡಾ. ಬಿ. ಆರ್. ಅಂಬೇಡ್ಕರ್ ಹೋರಾಟದಿಂದ ದಲಿತರಿಗೆ ಕುಡಿಯುವ ನೀರು, ಶಿಕ್ಷಣ, ಉದ್ಯೋಗ, ಕಾರ್ಮಿಕರ ರಕ್ಷಣೆ ಸಿಕ್ಕಿತು. ಮಹಿಳೆಯರಿಗೆ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆದು ಗೌರವದ ಬದುಕು ನಡೆಸಲು ಸಾಧ್ಯವಾಯಿತು ಎಂದರು.
ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ. ಚಂದ್ರಕಾಂತ್ ಯಾತನೂರು ಅತಿಥಿಗಳನ್ನು ಸ್ವಾಗತಿಸಿ ಪ್ರಾಶ್ತಾವಿಕವಾಗಿ ಮಾತನಾಡಿ ಭಾರತ 75 ವರ್ಷಗಳ ಸುವರ್ಣ ಸಂಭ್ರಮದಲ್ಲಿ ಪ್ರಬಲ ರಾಷ್ಟ್ರವಾಗಿ ಬೆಳೆಯುತ್ತಿದೆ. ಭಾರತೀಯ ಸಂಸ್ಕøತಿ ಮತ್ತು ಭೌಗೋಳಿಕ ಹಿನ್ನಲೆಯಿಂದ ವೈವಿಧ್ಯತೆಯನ್ನು ಪಡೆದಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ಸಂವಿಧಾನ ಸರ್ವರನ್ನು ಒಗ್ಗೂಡಿಸಿದೆ. ಸರ್ವರಿಗೂ ಸೌಲಭ್ಯಗಳನ್ನು ನೀಡಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ಶ್ರೀರಾಮುಲು, ಕಾನೂನು ನಿಕಾಯದ ಡೀನ್ ಪ್ರೊ. ದೇವಿದಾಸ್ ಮಾಲೆ, ಪ್ರೊ. ವಾಘ್ಮೋರೆ ಶಿವಾಜಿ, ಐಕ್ಯೂಎಸಿ ನಿರ್ದೇಶಕ ಪ್ರೊ. ಕೆರೂರ್, ಪ್ರೊ. ರಮೇಶ್ ರಾಥೋಡ್, ಪ್ರೊ. ಜಿ. ಎಂ. ವಿದ್ಯಾಸಾಗರ್ ಸೇರಿದಂತೆ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.