ಸಮಕಾಲಿನ  ನೆಲೆಯಲ್ಲಿ ಬಯಲಾಟ ಪುನಶ್ಚೇತನಗೊಳ್ಳಬೇಕು: ಡಾ.ಸುಜಾತ ಅಕ್ಕಿ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ಸೆ.11 ಗಂಡು ಮೆಟ್ಟಿನ ಜಾನಪದ ಕಲೆ ಬಯಲಾಟವು ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಯಲ್ಲಿ ಪುನಶ್ಚೇತನಗೊಳ್ಳಬೇಕು ಎಂದು ಏಕೀಕರಣ ಟ್ರಸ್ಟಿನ ಅಧ್ಯಕ್ಷೆ ಡಾ.ಸುಜಾತ ಅಕ್ಕಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಂಡೇ ರಂಗನಾಥೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರಾವಣ ಶನಿವಾರ ಹಮ್ಮಿಕೊಂಡಿದ್ದ   ಬಯಲ ಬೆಳಗು ಬಯಲಾಟ  ಪ್ರಾಯೋಗಿಕ  ಅದ್ಯಯನ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬದಲಾದ ಕಾಲ ಘಟ್ಟದಲ್ಲಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಬಯಲಾಟ ರೂಪುಗೊಳ್ಳಬೇಕಿದೆ. ಈಗಿನ ಒತ್ತಡದ ಬದುಕಿನಲ್ಲಿ  ಹಿಂದಿನ ಕಾಲದಂತೆ ಬೆಳಗಾಗುವವರೆಗೂ ಬಯಲಾಟ ನೋಡುವ ವ್ಯವಧಾನ ಯಾರಿಗೂ ಇರುವುದಿಲ್ಲ,
ಕೃಷಿ ಸಂಸ್ಕ್ರತಿಯಿಂದ ಬಂದ ಈ ಬಯಲಾಟ ಕಲೆ ಬದುಕಿನ ಮೌಲ್ಯಗಳನ್ನು  ತಿಳಿಸುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಯಲಾಟ ಸಹಾಯಕಾರಿಯಾಗಿದೆ. ಇದಕ್ಕೆ ಹೊಸ ಪಠ್ಯ ರಚಿಸುವ ಮೂಲಕ ಯುವ ಜನಾಂಗಕ್ಕೆ ಬಯಲಾಟ ಕಲಿಸಬೇಕಿದೆ. ಪ್ರದರ್ಶನದ ಸಮಯ ಒಂದರಿಂದ ಒಂದೂವರೆ ತಾಸಿನ ಒಳಗೆ ಅಳವಡಿಸಬೇಕು, ಕಡಿಮೆ ವಾದ್ಯ ಪರಿಕರಗಳನ್ನು ಬಳಸಿ ಅಧ್ಯಯನ ಶಿಸ್ತು ಪ್ರದರ್ಶನಕ್ಕೆ ಬಯಲಾಟ ರೂಪುಗೊಳ್ಳಬೇಕಿದೆ. ರಂಗ ಸಜ್ಜಿಕೆಯಲ್ಲಿ ಅನಾವಶ್ಯಕ ಜನರ ಓಡಾಟ ಮೈಕ್  ಕಿತ್ತು ಹೋಗುವಂತೆ ಕಿರುಚೋದು, ಮಾತುಗಳು ಪ್ರೇಕ್ಷಕರಿಗೆ ಸರಿಯಾಗಿ ಕೇಳದೇ ಇರೋದು  ಇವೆಲ್ಲವುಗಳನ್ನು ತಪ್ಪಿಸಿ ಆಧುನಿಕತೆಗೆ  ಒಗ್ಗಿಸಿಕೊಳ್ಳುವ ನಿಟ್ಟಿನಲ್ಲಿ  ಬಯಲಾಟ ಕಲೆಯನ್ನು ಪ್ರಸ್ತುತಗೊಳಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಕಲಾವಿದರು ಹೊಸ ಹೊಸ ಆಯಾಮಗಳನ್ನು ಮೈಗೂಡಿಸಿಕೊಳ್ಳುವ ಅಗತ್ಯತೆ ಇದೆ ಎಂದು ಒತ್ತಿ ಹೇಳಿದರು.
ತಂಬ್ರಹಳ್ಳಿ ಪೋಲಿಸ್ ಠಾಣೆಯ ಪಿಎಸ್ಐ.ಶ್ರೀಮತಿ ಸುವರ್ಥ ಪಧಾಧಿಕಾರಿಗಳಿಗೆ ಕಂಕಣ ಕಟ್ಟುವ ಮೂಲಕ ಕಾರ್ಯಕ್ರಮ  ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಶಿಸಿ ಹೋಗುತ್ತಿರುವ ಬಯಲಾಟ ಕಲೆಯನ್ನು ಉಳಿಸಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಆರಂಭವಾಗುವ  ಈ ಅಧ್ಯಯನ ಕೇಂದ್ರ  ಯುವ ಜನಾಂಗಕ್ಕೆ ಸಹಕಾರಿಯಾಗಲಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹೆಚ್ ಬಿ.ನಾಗನಗೌಡ್ರು ಮಾತನಾಡಿ ಆಟಗಳಲ್ಲೇ ದೊಡ್ಡಾಟ ಎಂದರೆ ಬಯಲಾಟ ಗ್ರಾಮೀಣ ಪ್ರದೇಶದಲ್ಲಿ ಇದಕ್ಕೆ ತನ್ನದೇ ಆದ ಸಾಂಸ್ಕೃತಿಕ  ಮೆರಗು ಇದೆ. ದಾರ್ಮಿಕ ಚಿಂತನೆಯುಳ್ಳ ಮಹಾಪುರುಷರ ಕಥೆಗಳನ್ನು ಹೆಣೆದು ಧರ್ಮದ ಹಾದಿಯಲ್ಲಿ  ನಡೆಯುವಂತೆ ಸಮಾಜದ ಜನರಿಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಬಯಲಾಟಕ್ಕೆ ಶಕ್ತಿ ಇದೆ. ಸುಜಾತ ಅವರ ತಂದೆ ಅಕ್ಕಿ ಕೊಟ್ರಪ್ಪನವರು ಕೂಡ ಬಯಲಾಟ ಕಲಾವಿದರು. ನಮ್ಮೂರಿನಲ್ಲೇ ಹುಟ್ಟಿ ಬೆಳೆದು ಅನೇಕ ನಾಟಕ, ಬಯಲಾಟ, ಸಾಹಿತ್ಯದ ಪುಸ್ತಕಗಳನ್ನು ಬರೆದು ರಾಜ್ಯದಾದ್ಯಂತ ಹೆಸರು ಮಾಡಿರುವ ಸುಜಾತ ಅಕ್ಕಿಯವರು  ಬಯಲಾಟ ಕಲೆ ನೇಪತ್ಯಕ್ಕೆ ಸರಿಯುತ್ತಿರುವ ದಿನಗಳಲ್ಲಿ ತನ್ನೂರಿನಲ್ಲಿ ಕಲೆ ಉಳಿಯಬೇಕು ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಬಯಲಾಟ ಅಧ್ಯಯನ ಕೇಂದ್ರ ಯಶಸ್ವಿಯಾಗಿ ನಡೆಯಲಿ ಎಂದು ಶುಭ  ಹಾರಿಸಿದರು.
ಪ್ರಗತಿ ಪರ ಚಿಂತಕ ಗಣೇಶ್ ರಾವ್ ಹವಾಲ್ದಾರ್ ಮಾತನಾಡಿ ಮಹಾರಾಷ್ಟ್ರ ರಾಜ್ಯದ ಜಯದೇವಿ ತಾಯಿ ಲಿಗಾಡೆ ತಾಯಿಯ ಪದಗಳು ಎನ್ನುವ ವಚನಗಳನ್ನು ಬರೆಯುವದರ ಮೂಲಕ ಕರ್ನಾಟಕದ ಏಕೀಕರಣಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾಳೆ. ಕನ್ನಡಿಗರಾದ ನಾವುಗಳು ಏಕೀಕರಣಕ್ಕೆ ಹೋರಾಡಿದ ಮಹನೀಯರ ಕನ್ನಡದ ಪುಸ್ತಕಗಳನ್ನು ಓದುವುದರ ಮುಖಾಂತರ ನಮ್ಮ ತಾಯಿ ಭಾಷೆಯನ್ನು ಗೌರವಿಸೋಣ ಎಂದರು.
ಶಿಕ್ಷಕ ಅಕ್ಕಿ ಬಸವರಾಜ್ ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣದ  ಹೋರಾಟ ಮಾಡಿದ ಮಹನೀಯರ ಕವಿ ಸಾಹಿತಿಗಳ ಕುರಿತು  ಉಪನ್ಯಾಸ ನೀಡಿದರು. ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳಿಗೆ  ಯಾರದೋ ಭಾಷೆಯನ್ನು ಬೆಳೆಸುತ್ತಾ ನಮ್ಮ ನಾಡಿನ ಸಂಸ್ಕ್ರತಿ,ಜಾನಪದ  ಕಲೆ, ಬಯಲಾಟ ನಾಟಕ  ಎಲ್ಲವನ್ನೂ ಮರೆಯುತ್ತಿದ್ದೇವೆ. ಇಂತಹ ಸಮಯದಲ್ಲಿ ಡಾ.ಸುಜಾತ ಅಕ್ಕಿಯವರು  ಬಯಲಾಟ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವ ಮೂಲಕ ನಮ್ಮ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುವ ಹಂಬಲ ಶ್ಲಾಘನೀಯವಾದದ್ದು ಎಂದರು.
ಸುಕ್ಷೇತ್ರ ನಂದಿಪುರದ ಚರಂತೇಶ್ವರ ಸ್ವಾಮೀಜಿ ಬಯಲಾಟ ಅದ್ಯಯನ ಕೇಂದ್ರದ ಪದಾಧಿಕಾರಿಗಳಿಗೆ  ಕಲಾ ಪ್ರತಿಜ್ಞಾವಿಧಿ ಬೋದಿಸಿದರು.
ಗ್ರಾಪಂ ಅಧ್ಯಕ್ಷೆ ಏಣಿಗಿ ಪೂರ್ಣಿಮಾ ಹನುಮೇಶಿ, ಉಪಾಧ್ಯಕ್ಷೆ ಮ್ಯಾಗಳಮನಿ ರುದ್ರಮ್ಮ ದೊಡ್ಡಬಸಪ್ಪ, ಸದಸ್ಯರಾದ ಎಸ್ ಮೆಹಬೂಬ್, ಬಣಕಾರ ಬಸಮ್ಮ, ಸಪ್ಪರದ ಕಮಲಾಕ್ಷಿ, ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಉದಯಭಾಸ್ಕರ್ , ಅಧ್ಯಯನ ಕೇಂದ್ರದ ಅದ್ಯಕ್ಷ ಕೊಳ್ಳಿ ಶೇಷಾರೆಡ್ಡಿ, ಉಪಾಧ್ಯಕ್ಷ ಕಡ್ಡಿ ಕೊಟ್ರೇಶ್, ಸೊಬಟಿ ಹರೀಶ್, ಸುಣಗಾರ ಪರಶುರಾಮ, ತಳವಾರ ವಿಠ್ಠಲ, ಬಣಕಾರ ಮಲ್ಲಿಕಾರ್ಜುನ, ನಿಜಲಿಂಗ ಹರಿಜನ, ಜ್ಯೋತಿ ಬಸವರಾಜ್, ಕೊನ್ನಾರಿ ಪ್ರಭಾಕರ, ಚಣ್ಣದ ವಿರೇಶ್, ಸಿಂದೋಗಿ ನಾಗರಾಜ್, ಹಾಗೂ ಚಿಲುಗೋಡು, ಯಡ್ರಾಮನಹಳ್ಳಿ ಶೀಗೇನಹಳ್ಳಿ ಗ್ರಾಮಗಳ ಬಯಲಾಟ ಕಲಾವಿದರು ಭಾಗವಹಿಸಿದ್ದರು.
ಶೀಗೇನಹಳ್ಳಿ ಗ್ರಾಮದ ಬಾಬು ಸಾಬ್ ಮತ್ತು ಬಯಲಾಟ ಕಲಾವಿದರ ಬಳಗದಿಂದ ಪ್ರಾರ್ಥನೆ ಜರುಗಿತು.ಗ್ರಂಥಾಲಯ ಮೇಲ್ವಿಚಾರಕ ಟಿ.ಪಾಂಡುರಂಗ ಸ್ವಾಗತಿಸಿದರು. ಹುಸೇನ್‌ ಭಾಷಾ ನಿರೂಪಿಸಿದರು. ಟ್ರಸ್ಟ್‌ನ ಪ್ರಕಾಶ್ ಕಡ್ಡಿ ವಂದಿಸಿದರು.