ಸಭೆ, ಸಮಾರಂಭ : ಬಿಬಿಎಂಪಿ ನಿರ್ಬಂಧ

ಬೆಂಗಳೂರು,ಡಿ.೨- ರಾಜಧಾನಿ ಬೆಂಗಳೂರಿನಲ್ಲಿ ಹೊರಾಂಗಣ ಮತ್ತು ಒಳಾಂಗಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜನರ ಪ್ರಮಾಣವನ್ನು ತಗ್ಗಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಭೆ ಸಮಾರಂಭಗಳಿಗೆ ಸೇರುವ ಜನರ ಸಂಖ್ಯೆಯನ್ನು ಕಡಿತಗೊಳಿಸುವ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಹೀಗಾಗಿ ನಾವು ಸರ್ಕಾರಕ್ಕೆ ಈ ಕುರಿತಂತೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದರು.

ಮುಂದಿನ ದಿನಗಳಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನ ಗುಂಪುಗೂಡಿ ಸಂಭ್ರಮಾಚರಣೆ ನಡೆಸುವುದರಿಂದ ಸೋಂಕು ಉಲ್ಬಣಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಗುಂಪುಗೂಡಲು ಅವಕಾಶ ನೀಡದೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಇನ್ನೂ, ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ಕೈಗೆ ಸೀಲ್ ಹಾಕುವ ಯಾವುದೇ ಪ್ರಸ್ತಾವನೆ ಬಂದಿಲ್ಲ. ಆದರೆ, ವಿದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ಕೊರೊನಾ ತಪಾಸಣೆಗೆ ಒಳಪಡಿಸುವುದು, ಕ್ವಾರಂಟೈನ್ ಹಾಗೂ ಐಸೋಲೇಷನ್‌ಗೆ ಒಳಪಡಿಸುವುದರತ್ತ ಗಮನ ಹರಿಸಿದ್ದೇವೆ ಎಂದು ಅವರು ಹೇಳಿದರು.

ನಗರಕ್ಕೆ ಓಮಿಕ್ರಾನ್ ವಕ್ಕರಿಸದಂತೆ ಎಚ್ಚರಿಕೆ ವಹಿಸುವಂತೆ ಎಲ್ಲ ವಲಯದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅಪಾರ್ಟ್‌ಮೆಂಟ್‌ಗಳು, ಕೊಳಚೆ ಪ್ರದೇಶಗಳಿಗೆ ತೆರಳಿ ಕೊರೋನಾ ತಪಾಸಣೆ ನಡೆಸಿ ಯಾವುದೇ ಭಾಗದಲ್ಲಿ ಸೋಂಕಿನ ಸೂಚನೆ ಕಂಡುಬಂದರೆ ತಕ್ಷಣ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ರವಾನಿಸುವುದರ ಜತೆಗೆ ಸೋಂಕು ಉಲ್ಬಣಗೊಳ್ಳದಂತೆ ಎಚ್ಚರ ವಹಿಸುವಂತೆ ಸೂಚಿಸಿದ್ದೇನೆ ಎಂದರು.

ಇನ್ನೂ, ನಗರದಲ್ಲಿ ಪ್ರತಿನಿತ್ಯ ಸುಮಾರು ೧೫೦ ರಷ್ಟು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಅದರಲ್ಲಿ ಕೆಲವು ಆಯ್ದ ಸ್ಯಾಂಪಲ್‌ಗಳನ್ನು ಮಾತ್ರ ಜಿನೋಮ್ ಸಿಕ್ವೇನ್ಸ್ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದ ಅವರು, ಅದರಲ್ಲೂ ಓಮಿಕ್ರಾನ್ ಕಾಣಿಸಿಕೊಂಡಿರುವ ರಾಷ್ಟ್ರಗಳಿಂದ ಬರುವ ಪ್ರಯಾಣಿಕರ ೧೦ ರಿಂದ ೧೫ ಮಂದಿಯ ಸ್ಯಾಂಪಲ್‌ಗಳನ್ನು ಜಿನೋಮ್ ಸಿಕ್ವೇನ್ಸ್‌ಗೆ ಕಳುಹಿಸಲಾಗುತ್ತಿದೆ ಎಂದು ಅವರು ವಿವರಣೆ ನೀಡಿದರು.

ತಪ್ಪಿತಸ್ಥರಿಗೆ ಶಿಕ್ಷೆ

ಥಣಿಸಂದ್ರದಲ್ಲಿ ರಸ್ತೆ ಗುಂಡಿಯಿಂದ ಬೈಕ್ ಸವಾರರೊಬ್ಬರು ಮೃಪಟ್ಟಿರುವುದು ದುಃಖದ ವಿಷಯ, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಆದರೆ, ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಬಿಬಿಎಂಪಿ ಅಕಾರಿಗಳ ತಪ್ಪು ಕಂಡುಬಂದಿಲ್ಲ. ವರದಿ ತರಿಸಿಕೊಂಡು ಪರಿಶೀಲನೆ ನಡೆಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೌರವ್ ಗುಪ್ತ ತಿಳಿಸಿದರು.