ಸಭೆ-ಸಮಾರಂಭಗಳನ್ನು ತ್ಯಜಿಸುವಂತೆ ಡಾ.ಶಶಿಕಲಾ ಸಲಹೆ

ಕಲ್ಲಬೆಟ್ಟುವಿನಲ್ಲಿ ೧೦೪ ಮಂದಿಗೆ ಉಚಿತ ಕೋವಿಡ್ ಲಸಿಕೆ

ಮೂಡುಬಿದಿರೆ, ಎ.೨೦- ದ.ಕ. ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ಇವುಗಳ ವತಿಯಿಂದ ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕಿನ ಆಶ್ರಯದಲ್ಲಿ ಬ್ಯಾಂಕಿನ ಸಭಾಂಗಣದಲ್ಲಿ ಸೋಮವಾರ ನಡೆದ ಉಪಕೇಂದ್ರ ಮಟ್ಟದ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ೪೫ ವರ್ಷ ಮೇಲ್ಪಟ್ಟ ೧೦೪ ಮಂದಿಗೆ ಲಸಿಕೆಯನ್ನು ನೀಡಲಾಯಿತು.

ಬ್ಯಾಂಕಿನ ಅಧ್ಯಕ್ಷ ಪ್ರವೀಣ್ ಕುಮಾರ್ ದೀಪ ಬೆಳಗಿಸಿ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶಶಿಕಲಾ ಪ್ರಾಸ್ತಾವಿಕವಾಗಿ ಮಾತನಾಡಿ ಕೊರೋನಾ ಇದೆಯೋ ಇಲ್ಲವೋ ಎಂಬ ಸಂಶಯ ಬೇಡ. ಬಿ.ಪಿ, ಸಕ್ಕರೆ ಕಾಯಿಲೆ ಇರುವವರು ಕೋಡಾ ಲಸಿಕೆ ತೆಗೆದುಕೊಂಡ ಮೇಲೆ ಕೊರೋನಾ ಬರುವುದಿಲ್ಲವೆಂಬ ಗ್ಯಾರಂಟಿಯೂ ಇಲ್ಲ ಆದರೆ ಲಸಿಕೆ ತೆಗೆದುಕೊಂಡವರಿಗೆ ಕೊರೋನಾದ ಗುಣಲಕ್ಷಣಗಳು ಕಂಡು ಬಂದರೂ ಗುಣಮುಖರಾಗುತ್ತಾರೆ. ಆದ್ದರಿಂದ ಸ್ವಚ್ಛಗೊಳಿಸಿದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಕೈಗಳನ್ನು ತೊಳೆಯುತ್ತಿರಿ ಎಂದ ಅವರು ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಆದಷ್ಟು ತ್ಯಜಿಸಿ ಎಂದು ಸಲಹೆ ನೀಡಿದರು.

ವಾರ್ಡ್ ಸದಸ್ಯ ಜೊಸ್ಸಿ ಮಿನೇಜಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಈಗ ಎಲ್ಲಾ ಸರಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಲಸಿಕೆಯನ್ನು ತೆಗೆದುಕೊಳ್ಳುವ ಮೂಲಕ ಮಾದರಿಯಾಗುತ್ತಿದ್ದಾರೆ. ಲಸಿಕೆಯನ್ನು ತೆಗೆದುಕೊಳ್ಳುವುದರಿಂದ ಯಾವುದೇ ರೀತಿಯ ತೊಂದರೆಗಳಿಲ್ಲ ಆದ್ದರಿಂದ ಧೈರ್ಯದಿಂದ ಲಸಿಕೆಯನ್ನು ತೆಗೆದುಕೊಳ್ಳಿ ಎಂದರು.

ಶಿರ್ತಾಡಿ ಗ್ರಾ.ಪಂ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಬ್ಯಾಂಕಿನ ನಿರ್ದೇಶಕ, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಗಿರಿಜಾ ಮತ್ತು ಶಾಲಿನಿ ಉಪಸ್ಥಿತರಿದ್ದರು.

  ಬ್ಯಾಂಕಿನ ಉಪಾಧ್ಯಕ್ಷ ಆಲ್ವೀನ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಶೆಟ್ಟಿ ವಂದಿಸಿದರು.