ಸಭೆ ಕರೆಯಲು ಮನವಿ

ಬ್ಯಾಡಗಿ,ಮೇ: ರೈತರಿಗೆ ಹಳೆಯ ದರದಲ್ಲಿಯೇ ಬೀಜ ಮತ್ತು ರಸಗೊಬ್ಬರಗಳ ಪೂರೈಕೆಗೆ ಅನುಕೂಲತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಾ ಆಡಳಿತದ ನೇತೃತ್ವದಲ್ಲಿ ಮಾರಾಟಗಾರರ ಹಾಗೂ ರೈತ ಮುಖಂಡರ ಸಭೆ ಕರೆಯಬೇಕೆಂದು ತಹಶೀಲ್ದಾರ ಅವರಿಗೆ ರಾಜ್ಯ ರೈತ ಸಂಘದ ತಾಲೂಕಾ ಮುಖಂಡರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಶುಕ್ರವಾರ ತಹಶೀಲ್ದಾರ (ಗ್ರೇಡ್-2) ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ತಾಲೂಕಾ ರೈತ ಸಂಘದ ಕಾರ್ಯಾಧ್ಯಕ್ಷ ಕಿರಣ ಗಡಿಗೋಳ ಅವರು, ಕೃಷಿ ಸಚಿವ ಬಿ.ಸಿ.ಪಾಟೀಲರು ಪ್ರಸಕ್ತ ಸಾಲಿನಲ್ಲಿ ರೈತರಿಗೆ ಬೀಜ ಮತ್ತು ರಸಗೊಬ್ಬರಗಳ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಿದ್ದು, ರಸಗೊಬ್ಬರವನ್ನು ಹಳೆಯ ದರದಲ್ಲಿ ವಿತರಿಸಲಾಗುವುದು ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೆ ರಸಗೊಬ್ಬರ ಮಾರಾಟಗಾರರು ಈಗಾಗಲೇ ಅಧಿಕ ದರದಲ್ಲಿ ಗೊಬ್ಬರವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೇ ಬೆಲೆ ಏರಿಕೆಯ ವಿಷಯದಲ್ಲಿ ರೈತರಿಗೆ ಗೊಂದಲವನ್ನು ಸೃಷ್ಟಿಸುತ್ತಿರುವ ಸರ್ಕಾರ ಹಾಗೂ ಮಾರಾಟಗಾರರು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿರುವುದು ಯಾವ ನ್ಯಾಯ..? ಎಂದು ಪ್ರಶ್ನಿಸಿದ್ದಾರೆ.
ಕೂಡಲೇ ಸಭೆ ಕರೆಯಲು ಆಗ್ರಹ..!!
ಯುವ ರೈತ ಮುಖಂಡ ಆನಂದ ಸಂಕಣ್ಣನವರ ಮಾತನಾಡಿ, ರೈತರಲ್ಲಿ ರಸಗೊಬ್ಬರಗಳ ದರ ಏರಿಕೆ ಕುರಿತು ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಕೂಡಲೇ ತಾಲೂಕಾ ಆಡಳಿತದ ನೇತೃತ್ವದಲ್ಲಿ ಬೀಜ ಮತ್ತು ರಸಗೊಬ್ಬರ ಮಾರಾಟಗಾರರ ಹಾಗೂ ರೈತ ಮುಖಂಡರ ಸಭೆ ಕರೆಯುವ ಮೂಲಕ ರೈತರ ಬೆಲೆ ಏರಿಕೆಯ ಆತಂಕವನ್ನು ದೂರ ಮಾಡಲು ಕ್ರಮ ಕೈಗೊಳ್ಳಲು ಮುಂದಾಗುವಂತೆ ಆಗ್ರಹಿಸಿದರು.