(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೨೦- ಸಭಾಧ್ಯಕ್ಷ ಯು.ಟಿ. ಖಾದರ್ ಸಭಾಧ್ಯಕ್ಷ ಪೀಠಕ್ಕೆ ಅಗೌರವ ತೋರಿದ್ದಾರೆ. ಸಭಾಧ್ಯಕ್ಷರಾದವರು ಒಂದು ಪಕ್ಷದ ಪರವಾಗಿ ಇರಬಾರದು ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಆರ್. ಅಶೋಕ್ ಹೇಳಿದರು.
ಬಿಜೆಪಿ ಶಾಸಕರ ಅಮಾನತು ಖಂಡಿಸಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಬಿಜೆಪಿಯ ವಿಧಾನಸಭೆ ಹಾಗೂ ವಿಧಾನಪರಿಷತ್‌ನ ಸದಸ್ಯರುಗಳು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಧ್ಯಕ್ಷರಾದವರು ಪಕ್ಷಾತೀತವಾಗಿ ವರ್ತಿಸಬೇಕು. ಯು.ಟಿ. ಖಾದರ್ ಅವರು ವಿರೋಧ ಪಕ್ಷಗಳ ಸಭೆಗೆ ಬಂದಿದ್ದ ಸೋನಿಯಾಗಾಂಧಿ ಹಾಗೂ ರಾಹುಲ್ ಅವರನ್ನು ಭೇಟಿ ಮಾಡಿದ್ದಾರೆ. ಹಾಗೆಯೇ ಸರ್ಕಾರ ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿರುವ ವಿರುದ್ಧ ಸದನದಲ್ಲಿ ಹೋರಾಟ ಮಾಡಿ ನ್ಯಾಯ ಕೇಳಿದ್ದೇವು. ಇದನ್ನೆಲ್ಲಾ ಪ್ರಶ್ನೆ ಮಾಡಿದ್ದಕ್ಕೆ ನಮ್ಮನ್ನು ಅಮಾನತು ಮಾಡಿದ್ದಾರೆ. ಸ್ಪೀಕರ್ ಕ್ರಮವನ್ನು ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ ಎಂದು ಆರ್. ಅಶೋಕ್ ಹೇಳಿದರು.
ಗೋಮುಖ ವ್ಯಾಘ್ರ
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಸಿದ್ಧರಾಮಯ್ಯ ಅವರು ಒಬ್ಬ ಗೋಮುಖ ವ್ಯಾಘ್ರ, ಸದನದಲ್ಲಿ ಬಿಜೆಪಿಯ ಹೋರಾಟ ನ್ಯಾಯಯುತವಾಗಿತ್ತು. ಉಪಸಭಾಧ್ಯಕ್ಷರು ದಲಿತರು. ಅವರ ಮೇಲೆ ಬಿಜೆಪಿ ಪೇಪರ್ ಎಸೆದಿರುವುದು ಸರಿಯಲ್ಲ ಎಂಬ ಸಿದ್ಧರಾಮಯ್ಯ ಅವರ ಹೇಳಿಕೆ ಅರ್ಥಹೀನ. ಸಿದ್ಧರಾಮಯ್ಯನವರು ದಲಿತರ ಸಮಾಧಿ ಮಾಡಿ ಸಿಎಂ ಆಗಿದ್ದಾರೆ. ಅವರಿಗೆ ನಿಜವಾಗಿ ದಲಿತರ ಪರವಾಗಿ ಕಾಳಜಿ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ದಲಿತರಿಗೆ ಸ್ಥಾನ ಬಿಟ್ಟುಕೊಡಲಿ. ಸಿದ್ಧರಾಮಯ್ಯ ಮೇಲೆ ಮಾತ್ರ ಬಸಪ್ಪ, ಒಳಗೆ ಮಾತ್ರ ವಿಷಪ್ಪ ಎಂದು ವಾಗ್ದಾಳಿ ನಡೆಸಿದರು.
ಸಿ.ಟಿ ರವಿ ಹೇಳಿಕೆ
ಇಂದ್ರಪದವಿಗೆ ಏರಿದ ನೌಶಾಹ ಮಹಾರಾಜನಿಗೆ ಅಧಿಕಾರ ಮದ ಏರಿದಂತೆ ಸಿದ್ಧರಾಮಯ್ಯನವರು ಅಧಿಕಾರದ ಮದದಿಂದ ನಡೆದುಕೊಳ್ಳುತ್ತಿದ್ದಾರೆ. ನೌಶಹ ಮಹಾರಾಜರಂತೆ ಶಾಪಗ್ರಸ್ಥರಾಗಬಹುದು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ .ರವಿ ಹೇಳಿದರು.
ನೌಶಹ ಮಹಾರಾಜ ಅಧಿಕಾರ ಮದದಿಂದ ಅಷ್ಟಮುನಿಗಳು ಪಲ್ಲಕ್ಕಿ ಹೊರಬೇಕು ಎಂದಿದ್ದ ಪಲ್ಲಕ್ಕಿ ಹೊರುವಾಗಲೇ ಮುನಿಗಳ ಒದ್ದ ಪರಿಣಾಮ ಶಾಪಗ್ರಸ್ಥನಾದ. ಧರ್ಮರಾಯ ಬರುವ ತನಕ ಶಾಪ ವಿಮೋಚನೆಗೆ ಕಾಯಬೇಕಾಯಿತು. ಹಾಗೆಯೇ ಅಧಿಕಾರದ ಮದ ಒಳ್ಳೆಯದಲ್ಲ . ಸಂವಿಧಾನದ ಬಗ್ಗೆ ಮಾತನಾಡುವರು ವಿಧಾನಸಭೆ ಬಾಗಿಲಿಗೆ ಒದ್ದಿದ್ದರು. ಈ ಹಿಂದೆ ಧರ್ಮೇಗೌಡರನ್ನು ಸಭಾಪತಿ ಪೀಠದಿಂದ ಎಳೆದು ಹಾಕಿದ್ದರು ಎಂಬುದನ್ನು ನೆನಪು ಮಾಡಿದ ಅವರು, ಐಎಎಸ್ ಅಧಿಕಾರಿಗಳನ್ನು ರಾಜಕೀಯ ನಾಯಕರ ಸ್ವಾಗತಕ್ಕೆ ನೇಮಿಸಿದ ವಿಚಾರವನ್ನು ವಿಷಿಯಾಂತರ ಮಾಡಲು ಶಾಸಕರ ಅಮಾನತು ಮಾಡಲಾಗಿದೆ ಎಂದು ಸಿ.ಟಿ ರವಿ ಹೇಳಿದರು.