ಸಭಾಂಗಣ ನಿರ್ಮಾಣಕ್ಕೆ ಒಂದೂವರೆ ಲಕ್ಷ ರೂ.ಕೊಡುಗೆ

ಬಾಳೆಹೊನ್ನೂರು.ಮೇ.೧: ಪರಮ ತಪಸ್ವಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಪಗೈದ ತರೀಕೆರೆ ತಾಲೂಕಿನ ಬುಕ್ಕಾಂಬುಧಿ ಬೆಟ್ಟದ ಮೇಲ್ಭಾಗದಲ್ಲಿ ನಿರ್ಮಿಸುತ್ತಿರುವ ಸಭಾಂಗಣ ನಿರ್ಮಾಣ ಕಾರ್ಯಕ್ಕೆ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಒಂದೂವರೆ ಲಕ್ಷ ರೂ.ಗಳ ಚೆಕ್ ವಿತರಿಸಿ ಆಶೀರ್ವಚನ ನೀಡಿದರು. ಬುಕ್ಕಾಂಬುಧಿಯ ಶ್ರೀ ಶಾಂಭವಿ ಮಹಿಳಾ ಮಂಡಳಿಯವರು ಮುಂದಾಗಿ ನಿಂತು ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ನಾಮಾಂಕಿತದಲ್ಲಿ ನಿರ್ಮಿಸುತ್ತಿರುವ ಸಭಾಂಗಣಕ್ಕೆ ಒಂದೂವರೆ ಲಕ್ಷ ರೂ.ಗಳ ಚೆಕ್ಕನ್ನು ಟ್ರಸ್ಟಿನ ಉಪಾಧ್ಯಕ್ಷರಾದ ಎಸ್.ಎಂ. ವೀರಭದ್ರಪ್ಪ ಕಾರ್ಯದರ್ಶಿ ಹೆಚ್.ಪಿ. ಸುರೇಶ ಮೂಲಕ ಶಾಂಭವಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಪಾರ್ವತಮ್ಮನವರಿಗೆ ತಲುಪಿಸಲು ನಿರೂಪಿಸಿದ ಜಗದ್ಗುರುಗಳು ಲೋಕ ಕಲ್ಯಾಣ ಜನ ಹಿತಕ್ಕಾಗಿ ಪರಮ ತಪಸ್ವಿ ಲಿಂ. ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು 3 ತಿಂಗಳ ಕಾಲ ಉಗ್ರ ತಪೋನುಷ್ಠಾನ ಮಾಡಿ ಉದ್ಧರಿಸಿದವರು. ಮನುಷ್ಯ ಜೀವನದಲ್ಲಿ ತೀರ್ಥಯಾತ್ರೆ, ಕ್ಷೇತ್ರಯಾತ್ರೆ ಮತ್ತು ಗುರುಯಾತ್ರೆ ಮಾಡಬೇಕಂತೆ. ಬುಕ್ಕಾಂಬುಧಿ ಕ್ಷೇತ್ರಕ್ಕೆ ಬಂದರೆ ಈ ಮೂರು ದರ್ಶನವಾಗುತ್ತೆ. ಈ ಕ್ಷೇತ್ರ ಬಹಳಷ್ಟು ಅಭಿವೃದ್ಧಿಯಾಗಬೇಕೆಂಬುದು ಟ್ರಸ್ಟಿನ ಮತ್ತು ಸಕಲ ಭಕ್ತರ ಆಶಯವಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಟ್ರಸ್ಟ್ ಶ್ರಮಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಊರಿಂದ ಬೆಟ್ಟದ ತುದಿಗೆ ಸುಮಾರು 700 ಮೀ. ರಸ್ತೆ ಹದಗೆಟ್ಟಿದ್ದು ಬಂದು ಹೋಗುವ ಭಕ್ತರಿಗೆ ಬಹಳ ತೊಂದರೆಯಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಖಾತೆ ಸಚಿವರಾದ ಕೆ.ಎಸ್. ಈಶ್ವರಪ್ಪನವರಿಗೆ ಕಾಂಕ್ರೀಟ್ ರಸ್ತೆ ನಿರ್ಮಿಸಿ ಎರಡೂ ಕಡೆ ಬಾಕ್ಸ ಚರಂಡಿ ಮತ್ತು ಎರಡು ಬದಿ ಬ್ಯಾರಿಕೇಡ್ ನಿರ್ಮಿಸಿ ಕೊಡಲು ಟ್ರಸ್ಟ್ ಮತ್ತು ಭಕ್ತಾದಿಗಳ ಪರವಾಗಿ ಪತ್ರವೊಂದನ್ನು ಬರೆಯಲಾಗುವುದು. ಮತ್ತು ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್. ಸುರೇಶ ಅವರ ಗಮನಕ್ಕೂ ತರಲಾಗುವುದೆಂದರು. ಬೆಟ್ಟಕ್ಕೆ ಹೋಗುವ ಊರ ದಾರಿಯಲ್ಲಿ ಭವ್ಯ ಮಹಾದ್ವಾರ ನಿರ್ಮಾಣಗೊಳ್ಳುತ್ತಿದೆ ಎಂದರು.